ಸಿನಿಮಾ ಗೆಲ್ಲಬೇಕು ಎಂದರೆ ಹಲವು ವಿಚಾರಗಳು ಮುಖ್ಯವಾಗುತ್ತವೆ. ಶೀರ್ಷಿಕೆಯಂತೂ ಆಕರ್ಷಕವಾಗಿ ಇರಬೇಕು. ಸಖತ್ ಕ್ಯಾಚಿ ಆದಂತಹ ಟೈಟಲ್ಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಬೇರೆ ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನಿಮಾದ ಶೀರ್ಷಿಕೆಯನ್ನು ಇಟ್ಟುಕೊಂಡು ಇನ್ನೊಂದು ಭಾಷೆಯಲ್ಲಿ ಚಿತ್ರ ಮಾಡಿದ ಉದಾಹರಣೆಗಳು ಕೂಡ ಸಾಕಷ್ಟಿದೆ. ಈಗ ತೆಲುಗು ಮಂದಿ ‘ಉಗ್ರಂ’ (Ugram Movie) ಟೈಟಲ್ ಮೇಲೆ ಕಣ್ಣು ಇಟ್ಟಿದ್ದಾರೆ. ಕನ್ನಡದಲ್ಲಿ ನಟ ಶ್ರೀಮುರಳಿ ಅವರಿಗೆ ಹೊಸ ಇಮೇಜ್ ನೀಡಿದ ಚಿತ್ರ ಇದು. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚೊಚ್ಚಲ ಸಿನಿಮಾ ‘ಉಗ್ರಂ’. ಈಗ ಇದೇ ಶೀರ್ಷಿಕೆಯನ್ನು ಬಳಸಿಕೊಂಡು ತೆಲುಗಿನಲ್ಲಿ ಒಂದು ಸಿನಿಮಾ ಮಾಡಲಾಗುತ್ತಿದೆ. ಖ್ಯಾತ ನಟ ಅಲ್ಲರಿ ನರೇಶ್ (Allari Naresh) ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅಲ್ಲರಿ ನರೇಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ. 2021ರ ಫೆಬ್ರವರಿಯಲ್ಲಿ ತೆರೆಕಂಡ ‘ನಾಂದಿ’ ಸಿನಿಮಾ ಅವರಿಗೆ ಗೆಲುವು ತಂದುಕೊಟ್ಟಿತು. ಆ ಚಿತ್ರಕ್ಕೆ ವಿಜಯ್ ಕನಕಮೆಡಲ ನಿರ್ದೇಶನ ಮಾಡಿದ್ದರು. ಈಗ ಇದೇ ನಟ-ನಿರ್ದೇಶಕರು ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಅವರ ಹೊಸ ಚಿತ್ರಕ್ಕೆ ‘ಉಗ್ರಂ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಕಥೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಕನ್ನಡದ ‘ಉಗ್ರಂ’ ಸಿನಿಮಾಗೂ ಈ ತೆಲುಗು ಚಿತ್ರಕ್ಕೂ ಏನಾದರೂ ಲಿಂಕ್ ಇರಬಹುದೇ ಎಂಬ ಕೌತುಕ ಮನೆ ಮಾಡಿದೆ. ಈ ಸಿನಿಮಾದ ಶೀರ್ಷಿಕೆ ವಿನ್ಯಾಸ ಕೂಡ ಕನ್ನಡದ ‘ಉಗ್ರಂ’ ರೀತಿಯೇ ಇದೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಲ್ಲರಿ ನರೇಶ್ ಅವರು ಆಕ್ರೋಶ ಭರಿತವಾಗಿ ಪೋಸ್ ನೀಡಿದ್ದಾರೆ. ಅವರ ಬೆನ್ನಿಗೆ ಚಾಕು ಹಾಕಲಾಗಿದೆ. ಮೈಯೆಲ್ಲ ರಕ್ತಸಿಕ್ತ ಆಗಿದ್ದರೂ ಕೂಡ ಅವರು ಆರ್ಭಟಿಸುತ್ತಿರುವ ರೀತಿಯಲ್ಲಿ ಈ ಫಸ್ಟ್ ಲುಕ್ ಮೂಡಿಬಂದಿದೆ. ಆ ಮೂಲಕ ‘ಉಗ್ರಂ’ ಸಿನಿಮಾ ಕೌತುಕ ಮೂಡಿಸಿದೆ.
“Ugram”… #NareshVijay2 @vijaykkrishna @sahugarapati7 @harish_peddi @Shine_Screens @SricharanPakala #Naresh60 pic.twitter.com/Z73YZo4pp1
— Allari Naresh (@allarinaresh) August 22, 2022
ಕನ್ನಡದ ‘ಉಗ್ರಂ’ ಚಿತ್ರ 2014ರಲ್ಲಿ ತೆರೆಕಂಡಿತು. ಮೊದಲ ನಿರ್ದೇಶನದಲ್ಲೇ ಪ್ರಶಾಂತ್ ನೀಲ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಆ ಸಿನಿಮಾದ ಕಥೆಯನ್ನೇ ಇಟ್ಟುಕೊಂಡು ಅವರು ‘ಸಲಾರ್’ ಚಿತ್ರ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೂಡ ಇದೆ. ಅದರ ಬೆನ್ನಲೇ ‘ಉಗ್ರಂ’ ಶೀರ್ಷಿಕೆ ಟಾಲಿವುಡ್ನಲ್ಲಿ ಮರುಬಳಕೆ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:16 pm, Mon, 22 August 22