ಹೈಕೋರ್ಟ್ ಮೊರೆ ಹೋದ ಅಲ್ಲು ಅರ್ಜುನ್; ಪ್ರಕರಣ ರದ್ದುಗೊಳಿಸುವಂತೆ ಮನವಿ
‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದನ್ನು ರದ್ದುಗೊಳಿಸುವಂತೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ರೇವತಿ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು.
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಧ್ಯಾ ಥಿಯೇಟರ್ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವಂತೆ ಅವರು ಕೋರಿದ್ದಾರೆ. ಈ ಬಗ್ಗೆ ಕೋರ್ಟ್ ಯಾವ ರೀತಿಯ ಆದೇಶ ಹೊರಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಂಧ್ಯಾ ಥಿಯೇಟರ್ ಘಟನೆ ವಿವರ:
ಡಿಸೆಂಬರ್ 4ರಂದು ದುರ್ಘಟನೆ ನಡೆಯಿತು. ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ಹೈದರಾಬಾದ್ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆಯಿತು. ಈ ವೇಳೆ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಕಾಲ್ತುಳಿತ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಸೇರಿಸಿದ್ದರು.
ಅಲ್ಲು ಅರ್ಜುನ್ ಪರಿಹಾರ ಘೋಷಣೆ:
ಅಲ್ಲು ಅರ್ಜುನ್ ಅವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ಅರ್ಜಿಯಲ್ಲಿ ಕೋರಿದ್ದಾರೆ. ಶೀಘ್ರವೇ ಈ ಅರ್ಜಿ ವಿಚಾರಣೆಗೆ ಬರಲಿದೆ. ಸದ್ಯ, ಸಂತ್ರಸ್ತ ಕುಟುಂಬಕ್ಕೆ ಇವರು 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರು ಕೂಡ ಈ ಘಟನೆಗೆ ಕಾರಣ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಈ ರೀತಿಯ ವಿಶೇಷ ಶೋಗಳನ್ನು ಆಯೋಜನೆ ಮಾಡುವುದನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ. ಸಂಧ್ಯಾ ಥಿಯೇಟರ್ ಬಳಿ ನಡೆದ ಘಟನೆ ವೇಳೆ ಅಲ್ಲು ಅರ್ಜುನ್ ಅವರ ಕಾರಿಗೂ ಹಾನಿ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದಲ್ಲಿ ಶೇಖಾವತ್ನ ಬದುಕಿಸೋದು ಯಾರು? ಲೀಕ್ ಆಯ್ತು ವಿಡಿಯೋ
‘ಪುಷ್ಪ 2’ ಸಿನಿಮಾ ಗಳಿಕೆ:
‘ಪುಷ್ಪ 2’ ಸಿನಿಮಾ ರಿಲೀಸ್ ಆಗಿ ವಾರ ಕಳೆದಿದೆ. ಈ ಚಿತ್ರ ಒಂದು ವಾರದೊಳಗೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:32 am, Thu, 12 December 24