ಅಲ್ಲು ಅರ್ಜುನ್-ಅಟ್ಲಿ ಸಿನಿಮಾದಲ್ಲಿ ಅನನ್ಯಾ ಪಾಂಡೆ? ಹಿರಿದಾಗುತ್ತಿದೆ ಪಾತ್ರವರ್ಗ

ನಿರ್ದೇಶಕ ಅಟ್ಲಿ ಹಾಗೂ ನಟ ಅಲ್ಲು ಅರ್ಜುನ್ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ತಯಾರಿ ಜೋರಾಗಿದೆ. ಪಾತ್ರವರ್ಗದ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಅನೇಕ ನಟಿಯರ ಹೆಸರುಗಳು ಹರಿದಾಡುತ್ತಿವೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಗಾಸಿಪ್ ಹಬ್ಬಿದೆ.

ಅಲ್ಲು ಅರ್ಜುನ್-ಅಟ್ಲಿ ಸಿನಿಮಾದಲ್ಲಿ ಅನನ್ಯಾ ಪಾಂಡೆ? ಹಿರಿದಾಗುತ್ತಿದೆ ಪಾತ್ರವರ್ಗ
Allu Arjun Ananya Panday

Updated on: Apr 29, 2025 | 10:32 PM

ನಟ ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ‘ಪುಷ್ಪ 2’ ಹಿಟ್ ಆಗಿದ್ದರಿಂದ ಅದನ್ನು ಮೀರಿಸುವಂತಹ ಸಿನಿಮಾ ಮಾಡುವ ಸವಾಲು ಅವರ ಮುಂದಿದೆ. ಈಗ ಅವರು ನಿರ್ದೇಶಕ ಅಟ್ಲಿ (Atlee) ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅಲ್ಲದೇ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗುತ್ತಿದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಮೊದಲು ಮೃಣಾಲ್ ಠಾಕೂರ್ ಹೆಸರು ಕೇಳಿಬಂದಿತ್ತು. ಈಗ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Panday) ಹೆಸರು ಕೂಡ ಸುದ್ದಿ ಆಗುತ್ತಿದೆ.

ನಟಿ ಅನನ್ಯಾ ಪಾಂಡೆ ಅವರಿಗೆ ತೆಲುಗು ಸಿನಿಮಾ ಹೊಸದೇನೂ ಅಲ್ಲ. ಈ ಮೊದಲು ಅವರು ವಿಜಯ್ ದೇವರಕೊಂಡ ಜೊತೆ ‘ಲೈಗರ್’ ಸಿನಿಮಾ ಮಾಡಿದ್ದರು. ಒಂದು ವೇಳೆ ಅಲ್ಲು ಅರ್ಜುನ್ ನಾಯಕತ್ವದ ಹೊಸ ಸಿನಿಮಾವನ್ನು ಅನನ್ಯಾ ಪಾಂಡೆ ಒಪ್ಪಿಕೊಂಡಿರುವುದು ಹೌದಾದರೆ, ಇದು ಅವರ 2ನೇ ತೆಲುಗು ಸಿನಿಮಾ ಆಗಲಿದೆ. ಆದರೆ ಅವರು ಆಯ್ಕೆ ಆಗಿರುವ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎಲ್ಲವೂ ಗಾಸಿಪ್ ಹಂತದಲ್ಲೇ ಇವೆ.

ಅಷ್ಟಕ್ಕೂ ಈ ಸಿನಿಮಾಗೆ ಬೇರೆ ಬೇರೆ ನಾಯಕಿಯರ ಹೆಸರು ಕೇಳಿಬರುತ್ತಿರುವುದು ಯಾಕೆ? ಅದಕ್ಕೂ ಕಾರಣ ಇದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಮೂರು ಪಾತ್ರಗಳು ಇರಲಿವೆ ಎಂದು ಹೇಳಲಾಗುತ್ತಿದೆ. ತಂದೆ ಮತ್ತು ಇಬ್ಬರು ಮಕ್ಕಳ ಪಾತ್ರವನ್ನು ಅಲ್ಲು ಅರ್ಜುನ್ ನಿಭಾಯಿಸಲಿದ್ದಾರೆ ಎಂದು ಗಾಸಿಪ್ ಹಬ್ಬಿದೆ. ಆ ಮೂರು ಪಾತ್ರಗಳಿಗೆ ಜೋಡಿ ಬೇಕಿರುವುದರಿಂದ ಹಲವು ನಟಿಯರ ಹೆಸರುಗಳು ಕೇಳಿಬರುತ್ತಿವೆ.

ಇದನ್ನೂ ಓದಿ
ಹೆಸರು ಬದಲಾವಣೆ ಮಾಡಿಕೊಳ್ಳಲಿರುವ ಅಲ್ಲು ಅರ್ಜುನ್, ಕಾರಣವೇನು?
ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಅಲ್ಲು ಅರ್ಜುನ್; ಮುಂದಿದೆ ದೊಡ್ಡ ಸವಾಲು
‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಮಾಹಿತಿ ಕೊಟ್ಟ ನಿರ್ಮಾಪಕ
ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲುಗೆ ಶಿಫ್ಟ್

ಅನನ್ಯಾ ಪಾಂಡೆ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ನೆಪೋಟಿಸಂ ಟೀಕೆಯ ನಡುವೆಯೂ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿನ ಅನನ್ಯಾ ಪಾಂಡೆ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ನಿರ್ದೇಶಕ ಅಟ್ಲಿ ಅವರು ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ‘ಕೇಸರಿ 2’ ಚಿತ್ರಕ್ಕೆ ಮೆಚ್ಚುಗೆ; ನಟಿ ಅನನ್ಯಾ ಪಾಂಡೆಗೆ ಸಖತ್ ಖುಷಿ

ತುಂಬಾ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ‘ಸನ್ ಪಿಕ್​ಚರ್ಸ್​’ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ವಿಎಫ್​ಎಕ್ಸ್ ಕೆಲಸ ಬಹಳ ಇರಲಿದೆ. ವಿದೇಶದಲ್ಲಿ ಕೂಡ ಅದರ ತಯಾರಿ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ಲುಕ್ ಟೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಕೂಡ ಸಿಕ್ಕಿದೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.