Anchor Rashmi Gautam: ಆಸಿಡ್ ಹಾಕುವೆ, ಕೊಲೆ ಮಾಡುವೆ: ನಟಿಗೆ ಬೆದರಿಕೆ
ತೆಲುಗು ಟಿವಿ ಲೋಕದ ಜನಪ್ರಿಯ ನಿರೂಪಕಿ ಹಾಗೂ ನಟಿಯೂ ಆಗಿರುವ ರಶ್ಮಿ ಗೌತಮ್ ಅವರಿಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ (Social Media) ಮಹಿಳೆಯರು ನಿತ್ಯವೂ ಟ್ರೋಲ್ (Troll), ಬಾಡಿ ಶೇಮಿಂಗ್, ಅಸಹ್ಯಕರ ಬೇಡಿಕೆಗಳು, ಬೆದರಿಕೆಗಳಿಗೆ ಒಳಗಾಗುತ್ತಲೇ ಇರುತ್ತಾರೆ. ಹಲವು ನಟಿಯರು, ಮಹಿಳಾ ಸೆಲೆಬ್ರಿಟಿಗಳಿಗಂತೂ ಇಂಥಹಾ ಟ್ರೋಲ್ಗಳು ಅಭ್ಯಾಸವಾಗಿ ಹೋಗಿವೆ. ಆದರೆ ಕೆಲವು ಬಾರಿ ಕೊಲೆ ಬೆದರಿಕೆಗಳು ಬಂದಾಗ ಸಹಜವಾಗಿಯೇ ಆತಂಕಕ್ಕೊಳಗಾಗುತ್ತಾರೆ. ಈಗ ಇಂಥಹುದೇ ಒಂದು ಪ್ರಕರಣ ನಡೆದಿದೆ.
ತೆಲುಗು ಟಿವಿ ಲೋಕದ ಜನಪ್ರಿಯ ನಿರೂಪಕಿ ಹಾಗೂ ನಟಿಯೂ ಆಗಿರುವ ರಶ್ಮಿ ಗೌತಮ್ (Rashmi Gautam) ಅವರಿಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಿದ್ದಾನೆ. ತಮಗೆ ಬಂದಿರುವ ಬೆದರಿಕೆ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಟಿ ರಶ್ಮಿ, ಈತನ ವಿರುದ್ಧ ದೂರು ದಾಖಲಿಸಲೆ? ಎಂದು ಸಲಹೆ ಕೇಳಿದ್ದಾರೆ.
ರಶ್ಮಿ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ನಲ್ಲಿ ಒಬ್ಬನೇ ವ್ಯಕ್ತಿ ಕಳಿಸಿರುವ ಎರಡು ಸಂದೇಶಗಳಿದ್ದು, 2022 ರ ಜೂನ್ನಲ್ಲಿ ಕಳಿಸಿರುವ ಸಂದೇಶದಲ್ಲಿ, ”ನಿನಗೆ ವಯಸ್ಸು ದಾಟಿ ಹೋಗುತ್ತಿದೆ ಮೊದಲು ಮದುವೆಯಾಗು” ಎಂದಿದ್ದಾನೆ. ಅದರ ಬಳಿಕ ಫೆಬ್ರವರಿ 25 ರಂದು ಕಳಿಸಿರುವ ಸಂದೇಶದಲ್ಲಿ ಕೊಲೆ ಬೆದರಿಕೆ ಹಾಕಿರುವ ನೆಟ್ಟಿಗ, ”ನಿನ್ನ ವಿರುದ್ಧ ಮಾಟ ಮಾಡಿಸುತ್ತೇನೆ. ತೆಪ್ಪಗೆ ಮನೆಯಲ್ಲಿರುವ ರೋಡಿಗೆ ತಿರುಗಲು ಬಂದರೆ ಆಕ್ಸಿಡೆಂಟ್ ಆಗಿ ಸಾಯುತ್ತೀಯ. ನೀನು ಪಾಪಿಷ್ಟೆ ನಿನ್ನ ಮೇಲೆ ಆಸಿಡ್ ಸುರಿಯುತ್ತೇನೆ. ತೆಪ್ಪಗೆ ಇರು, ನಿನ್ನ ಇಷ್ಟ ಬಂದಂತೆ ವರ್ತಿಸಿದರೆ ಕಷ್ಟಕ್ಕೆ ಗುರಿಯಾಗುತ್ತೀಯ” ಎಂದಿದ್ದಾನೆ.
ತಮಗೆ ಬಂದಿರುವ ಬೆದರಿಕೆ ಸಂದೇಶ ಹಂಚಿಕೊಂಡಿರುವ ನಟಿ ರಶ್ಮಿ ಗೌತಮ್, ”ಈತ ಅಥವಾ ಈಕೆಗೆ ಕೆಲವು ತಿಂಗಳ ಹಿಂದೆ ನನ್ನ ವಯಸ್ಸಿನ ಬಗ್ಗೆ ಮದುವೆ ಬಗ್ಗೆ ಕಾಳಜಿ ಇತ್ತು, ಈಗ ಹಠಾತ್ತನೆ ಕೊಲೆ ಮಾಡುವುದಾಗಿ, ಆಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಕುರಿತು ನಾನು ದೂರು ನೀಡಲಾ ಬೇಡವಾ?” ಎಂದು ನೆಟ್ಟಿಗರ ಬಳಿ ರಶ್ಮಿ ಸಲಹೆ ಕೇಳಿದ್ದಾರೆ.
ರಶ್ಮಿ ಗೌತಮ್, ಮೂಲತಃ ಒಡಿಸ್ಸಾದವರಾದರೂ ಸಹ ತೆಲುಗು ಟಿವಿ ಜಗತ್ತಿನಲ್ಲಿ ಜನಪ್ರಿಯರು. ಹಲವು ಟಿವಿ ಶೋಗಳ ನಿರೂಪಣೆ ಮಾಡುತ್ತಿರುವ ರಶ್ಮಿ, ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರು. ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಈ ನಟಿ ಸಖತ್ ಬೋಲ್ಡ್ ಸಹ.
ಪ್ರಾಣಿ ಪ್ರೇಮಿ ಸಹ ಆಗಿರುವ ನಟಿ, ಆಂಕರ್ ರಶ್ಮಿ, ಕೆಲ ದಿನಗಳ ಹಿಂದೆ ಹೈದರಾಬಾದ್ನಲ್ಲಿ ಮಗುವೊಂದರ ಮೇಲೆ ನಡೆದ ಬೀದಿ ನಾಯಿಗಳ ದಾಳಿಯ ಬಗ್ಗೆ ಮಾಡಿದ್ದ ಟ್ವೀಟ್ ಚರ್ಚೆಗೆ ಗ್ರಾಸವಾಗಿತ್ತು. ಬೀದಿನಾಯಿಗಳಿಗೆ ಬಲಿಯಾದ ಮಗುವಿನ ಬಗ್ಗೆ ಎಲ್ಲರೂ ಕಾಳಜಿ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ ಪ್ರಾಣಿ ಪ್ರೇಮಿ ರಶ್ಮಿ, ಆ ನಾಯಿಗಳಿಗೆ ಸರಿಯಾದ ಆಶ್ರಯ, ಆಹಾರದ ವ್ಯವಸ್ಥೆ ಮಾಡಬೇಕು ಎಂದಿದ್ದರು. ಇದು ನೆಟ್ಟಿಗರನ್ನು ಕೆರಳಿಸಿತ್ತು.




