ಟಾಲಿವುಡ್ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
Tollywood: ತೆಲುಗು ಚಿತ್ರರಂಗ ಹಾಗೂ ತೆಲುಗು ರಾಜ್ಯಗಳ ರಾಜಕೀಯ ಎರಡೂ ಒಂದೇ ಎನ್ನುವಂತ ಪರಿಸ್ಥಿತಿ ದಶಕಗಳಿಂದಲೂ ಇತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ರಾಜಕಾರಣಿಗಳು, ಸಿನಿಮಾದವರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುವ ಪ್ರಯತ್ನ ಮಾಡಿದ್ದು ಕಂಡು ಬಂದಿದೆ. ಇದರ ನಡುವೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಟಾಲಿವುಡ್ ಬಗ್ಗೆ ಆಸಕ್ತಿಕರ ಕಮೆಂಟ್ ಮಾಡಿದ್ದಾರೆ.
ಅವಿಭಜಿತ ಆಂಧ್ರ ಪ್ರದೇಶ ಇದ್ದಾಗಿನಿಂದಲೂ ಅಲ್ಲಿ ಸಿನಿಮಾ ಮತ್ತು ರಾಜಕೀಯ ಜೊತೆ-ಜೊತೆಯಾಗಿಯೇ ಸಾಗಿತ್ತು. ಎನ್ಟಿಆರ್ ರಾಜಕೀಯ ಪ್ರವೇಶದ ಬಳಿಕವಂತೂ ಸಿನಿಮಾ ಮತ್ತು ರಾಜಕೀಯ ದೂರ ಮಾಡಲಾಗದಷ್ಟು ಬೆರೆತು ಹೋದವು. ಆದರೆ ಇತ್ತೀಚೆಗೆ ತೆಲಂಗಾಣದಲ್ಲಿ ನಡೆಯುತ್ತಿರುವ ಘಟನೆಗಳು ಹಾಗೂ ಕೆಲ ವರ್ಷಗಳ ಹಿಂದೆ ಜಗನ್, ಆಂಧ್ರ ಸಿಎಂ ಆಗಿದ್ದಾಗ ಆಂಧ್ರದಲ್ಲಿ ನಡೆದ ಕೆಲವು ಘಟನೆಗಳು ರಾಜಕಾರಣಿಗಳು, ಸಿನಿಮಾದ ಮೇಲೆ ಪ್ರಭಾವ ಬೀರಲು, ಚುಕ್ಕಾಣಿ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ. ರಾಜಕಾರಣಿಗಳು ಮೇಲ್ದರ್ಜೆ, ಸಿನಿಮಾ ಮಂದಿ ದ್ವಿತೀಯ ದರ್ಜೆಯವರು ಎಂದು ಬಲಪ್ರಯೋಗ ಮಾಡಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬಂತೆ ಗೋಚರಿಸುತ್ತಿದೆ.
ತೆಲಂಗಾಣ ಸರ್ಕಾರ, ಅಲ್ಲು ಅರ್ಜುನ್ ವಿಷಯದಲ್ಲಿ ನಡೆದುಕೊಂಡ ರೀತಿ, ಆ ನಂತರ ತೆಲಂಗಾಣದ ಸಿಎಂ ಹಾಗೂ ಕೆಲವು ಸಚಿವರು ತೋರಿದ ದರ್ಪ, ಅಲ್ಲು ಅರ್ಜುನ್ ಮನೆ ಮೇಲೆ ದಾಳಿ, ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ವಿಶೇಷ ಶೋ, ಟಿಕೆಟ್ ದರ ಹೆಚ್ಚಳ ಇನ್ನಿತರೆಗಳನ್ನು ರದ್ದು ಮಾಡಿರುವುದು ಎಲ್ಲವನ್ನೂ ಗಮನಿಸಿದ ಬಳಿಕ ಟಾಲಿವುಡ್, ತೆಲಂಗಾಣಕ್ಕೆ ಸೇರಿದ ಹೈದರಾಬಾದ್ನಿಂದ ಸ್ಥಳಾಂತರಗೊಳ್ಳಬೇಕು ಆ ಮೂಲಕ ತೆಲಂಗಾಣ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ:ಕಾಲಿವುಡ್-ಟಾಲಿವುಡ್ ಮಂದಿಗೂ ಇಷ್ಟವಾಯ್ತು ‘ಮ್ಯಾಕ್ಸ್’; ಶುಕ್ರವಾರ ಬಂಪರ್ ಕಲೆಕ್ಷನ್
ಇದರ ನಡುವೆ ನೆರೆಯ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಈ ವಿಷಯವಾಗಿ ಮಾತನಾಡಿದ್ದಾರೆ. ಈ ಹಿಂದೆ ನಮ್ಮ ತೆಲುಗು ದೇಶಂ ಪಾರ್ಟಿ ಮಾಡಿದ ಕಾರ್ಯಗಳಿಂದಲೇ ಹೈದರಾಬಾದ್, ಸಿನಿಮಾ ಹಾಗೂ ಐಟಿಯ ಹಬ್ ಆಗಿ ಮಾರ್ಪಾಟಾಯ್ತು. ಈಗ ತೆಲುಗು ಚಿತ್ರರಂಗದ ಮಾರುಕಟ್ಟೆ ಗ್ಲೋಬಲ್ ಮಟ್ಟಕ್ಕೆ ಹರಡಿದೆ, ಅವರಿಗೆ ಇನ್ನೂ ಒಳ್ಳೆಯ ಸಂಪನ್ಮೂಲಗಳ ಅಗತ್ಯತೆ ಇದೆ ಎಂದಿದ್ದಾರೆ. ಆ ಮೂಲಕ ಟಾಲಿವುಡ್ಗೆ, ಹೈದರಾಬಾದ್ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಅಮರಾವತಿ ನಿರ್ಮಾಣ ಪೂರ್ಣವಾದರೆ ಅಲ್ಲಿ ತೆಲುಗು ಚಿತ್ರರಂಗಕ್ಕೆ ಅಗತ್ಯವಾದ ಎಲ್ಲ ಸವಲತ್ತುಗಳು ಇರಲಿವೆ. ವಿಶ್ವದರ್ಜೆಯ ಮೂಲ ಸೌಕರ್ಯವನ್ನು ಒದಗಿಸುವ ಇರಾದೆ ಇದೆ ಎಂದಿದ್ದಾರೆ ಚಂದ್ರಬಾಬು ನಾಯ್ಡು. ಅಮರಾವತಿ ನಗರ ನಿರ್ಮಾಣ ಚಂದ್ರಬಾಬು ನಾಯ್ಡು ಅವರ ಕನಸಾಗಿದ್ದು, ಅಮರಾವತಿ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ದೊಡ್ಡ ದೊಡ್ಡ ಕಚೇರಿಗಳು, ರಸ್ತೆಗಳು ನಿರ್ಮಾಣ ಆಗಿವೆ. ಇನ್ನೂ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ