AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡಲಾಗಿದೆ. ತಮಿಳುನಾಡಿನ 20 ವರ್ಷದ ಹುಡುಗಿ ಈ ಕೃತ್ಯ ಮಾಡಿದ್ದು, ಆಕೆಯ ವಿರುದ್ಧ ಸೈಬರ್ ಕ್ರೈಂ ಕೇಸ್ ದಾಖಲಾಗಿದೆ. ಒಟ್ಟಾರೆ ನಡೆದಿರುವ ಘಟನೆ ಬಗ್ಗೆ ಅನುಪಮಾ ಪರಮೇಶ್ವರನ್ ಅವರು ಮಾಹಿತಿ ನೀಡಿ, ಎಲ್ಲರನ್ನೂ ಎಚ್ಚರಿಸಿದ್ದಾರೆ.

ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ
Anupama Parameswaran
ಮದನ್​ ಕುಮಾರ್​
|

Updated on: Nov 09, 2025 | 1:05 PM

Share

ಸೋಶಿಯಲ್ ಮೀಡಿಯಾದಲ್ಲಿ ನಟಿಯರಿಗೆ ಸಾಕಷ್ಟು ಕಿರುಕುಳ ಎದುರಾಗುತ್ತದೆ. ಅಲ್ಲದೇ ನಟಿಯರ ಹೆಸರಿಗೆ ಮಸಿ ಬಳಿಯುವ ಕೃತ್ಯ ಕೂಡ ನಡೆಯುತ್ತದೆ. ಈ ಬಗ್ಗೆ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಈಗಾಗಲೇ ಮೌನ ಮುರಿದಿರುವುದು ಗೊತ್ತೇ ಇದೆ. ಇತ್ತೀಚೆಗೆ ನಟಿ ರುಕ್ಮಿಣಿ ವಸಂತ್ ಅವರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರಿಗೂ ಹಾಗೆಯೇ ಆಗಿದೆ. ನಟಿಯ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ವಿಪರ್ಯಾಸ ಏನೆಂದರೆ, ಈ ಕೃತ್ಯ ಎಸಗಿರುವುದು ಕೂಡ ಓರ್ವ ಯುವತಿ! ಆ ಯುವತಿಯ ವಯಸ್ಸು ಕೇವಲ 20 ವರ್ಷ.

ಈ ಬಗ್ಗೆ ಅನುಪಮಾ ಪರಮೇಶ್ವರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಒಂದು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಆಕ್ಷೇಪಾರ್ಹ ಫೋಟೋ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿರುವುದು ತಿಳಿದುಬಂತು. ನನ್ನ ಪರಿಚಯದವರನ್ನು ಮತ್ತು ಕುಟುಂಬದವರನ್ನು ಟ್ಯಾಗ್ ಮಾಡಲಾಗುತ್ತಿತ್ತು. ಈ ರೀತಿ ಟಾರ್ಗೆಟ್ ಮಾಡಿ ಕಿರುಕುಳು ನೀಡಿದ್ದರಿಂದ ನನಗೆ ನಿಜಕ್ಕೂ ತೀವ್ರ ನೋವಾಗಿದೆ’ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದ್ದಾರೆ.

‘ಈ ಬಗ್ಗೆ ತನಿಖೆ ಮಾಡಿದಾಗ ಗೊತ್ತಾಗಿದ್ದು ಏನೆಂದರೆ, ನನ್ನ ಬಗ್ಗೆ ದ್ವೇಷ ಹರಡಲು ಮತ್ತು ನನ್ನ ಬಗ್ಗೆ ಕೆಟ್ಟ ಕಮೆಂಟ್ ಮಾಡಲು ಒಬ್ಬರೇ ವ್ಯಕ್ತಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದಾರೆ. ಇದು ಗೊತ್ತಾದಾಗ ನಾನು ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಕೃತ್ಯದ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ಪೊಲೀಸರ ಸಹಕಾರದಿಂದ ತಿಳಿಯಿತು’ ಎಂದಿದ್ದಾರೆ ಅನುಪಮಾ ಪರಮೇಶ್ವರನ್.

‘ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ! ಆಕೆಯ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಅವಳ ಗುರುತನ್ನು ನಾನು ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು’ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್ ಕೇಶರಾಶಿ ಮೇಲೆ ಅಭಿಮಾನಿಗಳ ಕಣ್ಣು

‘ಈ ಮೂಲಕ ಎಲ್ಲರಿಗೂ ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಮೊಬೈಲ್ ಫೋನ್ ಮತ್ತು ಸೋಶಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್​​ಲೈನ್​​ನಲ್ಲಿ ಮಾಡುವ ಎಲ್ಲ ಕೆಲಸಕ್ಕೂ ಹೆಜ್ಜೆ ಗುರುತು ಇರುತ್ತದೆ. ಎಲ್ಲದಕ್ಕೂ ಉತ್ತರ ಕೊಡಬೇಕಾಗಿಬರುತ್ತದೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆಕೆ ಈ ಕೃತ್ಯದ ಪರಿಣಾಮ ಎದುರಿಸುತ್ತಾಳೆ’ ಎಂದು ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.