ಶಾರುಖ್ ಖಾನ್ ಎದುರು ಹಾಕಿಕೊಂಡು ಗೆದ್ದ ಅನುಷ್ಕಾ ಶೆಟ್ಟಿ
Anushka Shetty: ನಟಿ ಅನುಷ್ಕಾ ಶೆಟ್ಟಿ ಕಾಲ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಮಹಿಳಾ ಪ್ರಧಾನ ಸಿನಿಮಾ ಒಂದರಲ್ಲಿ ನಟಿಸಿ ಆ ಸಿನಿಮಾವನ್ನು ಸೂಪರ್ ಹಿಟ್ ಆಗುವಂತೆ ಮಾಡಿದ್ದಾರೆ. ಅದೂ ಶಾರುಖ್ ಖಾನ್ ಸಿನಿಮಾವನ್ನು ಎದುರು ಹಾಕಿಕೊಂಡು ಗೆದ್ದಿದ್ದಾರೆ ಅನುಷ್ಕಾ.

ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ (Anushka Shetty), ‘ಬಾಹುಬಲಿ’ ಸಿನಿಮಾದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ‘ಬಾಹುಬಲಿ’ ಸಿನಿಮಾದ ಬಳಿಕ 2018ರಲ್ಲಿ ‘ಭಾಗಮತಿ’ ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ ಆ ನಂತರದ ಐದು ವರ್ಷಗಳಲ್ಲಿ ಕೇವಲ ಎರಡೇ ಸಿನಿಮಾಗಳಲ್ಲಿ ನಟಿಸಿದರು ಅನುಷ್ಕಾ ಶೆಟ್ಟಿ ಅದರಲ್ಲಿ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ. ಅನುಷ್ಕಾ ಶೆಟ್ಟಿಯ ಕಾಲ ಮುಗಿಯಿತು ಎಂದೇ ಟಾಲಿವುಡ್ನಲ್ಲಿ ಮಾತು ಹಬ್ಬಿತ್ತು. ಆದರೆ ಅನುಷ್ಕಾ ಶೆಟ್ಟಿ ಮತ್ತೆ ಪುಟಿದೆದಿದ್ದಾರೆ. ತಮ್ಮ ಚಾರ್ಮ್ ಈಗಲೂ ಕಡಿಮೆ ಆಗಿಲ್ಲವೆಂದು ಸಾರಿ ಹೇಳಿದ್ದಾರೆ.
ಅನುಷ್ಕಾ ಶೆಟ್ಟಿ, ಇತ್ತೀಚೆಗೆ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಮಹಿಳಾ ಪ್ರಧಾನವಾದ, ಬಾಲಿವುಡ್ ಮಾದರಿಯ ಅಡ್ವಾನ್ಸ್ಡ್ ವಿಷಯವನ್ನು ಒಳಗೊಂಡಿದ್ದ ಈ ಸಿನಿಮಾ, ಟಾಲಿವುಡ್ನ ‘ಸಾಂಪ್ರದಾಯಿಕ’ ಸಿನಿಮಾಗಳಿಗಿಂತಲೂ ಭಿನ್ನವಾಗಿತ್ತು. ಈ ಸಿನಿಮಾದ ಬಗ್ಗೆ ಹಲವರು ಅನುಮಾನಗಳನ್ನು ಸಹ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಶಾರುಖ್ ಖಾನ್ರ ‘ಜವಾನ್’ ಸಿನಿಮಾ ಬಿಡುಗಡೆ ಆದ ದಿನವೇ ಅನುಷ್ಕಾರ ಸಿನಿಮಾವನ್ನೂ ಬಿಡುಗಡೆ ಮಾಡಲಾಯ್ತು. ಎಲ್ಲ ಅಡೆತಡೆಗಳನ್ನು ದಾಟಿ ಸಿನಿಮಾ ಸೂಪರ್ ಹಿಟ್ ಆಗಿದೆ.
‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ಮಧ್ಯ ವಯಸ್ಕ ಮಹಿಳೆಯ ಪಾತ್ರದಲ್ಲಿ ಮಿಂಚಿದ್ದಾರೆ. ಶೆಫ್ ಆಗಿದ್ದು, ಸ್ವತಂತ್ರ್ಯವಾಗಿ ಜೀವನ ಸಾಗಿಸುತ್ತಿರುವ ಮಹಿಳೆ, ಮದುವೆಯಾಗದೆ ಮಕ್ಕಳು ಪಡೆಯಬೇಕಾಗ ಪರಿಸ್ಥಿತಿಗೆ ಸಿಲುಕುತ್ತಾಳೆ. ಆಗ ಮಗು ಪಡೆಯಲು ಸೂಕ್ತ ಯುವಕನಿಗಾಗಿ ಹುಡುಕಾಡಿ, ಆ ಯುವಕ ದೊರೆತ ಬಳಿಕ ಏನೇನು ಆಗುತ್ತದೆ. ಸಮಾಜ ಇವರ ಈ ಸಂಬಂಧವನ್ನು ಒಪ್ಪುತ್ತದೆಯೇ? ಮದುವೆಯ ಬಂಧವಿಲ್ಲದೆ ಮಕ್ಕಳು ಪಡೆಯುವುದು ಸೂಕ್ತವೇ ಇತರೆ ವಿಷಯಗಳ ಬಗ್ಗೆ ಈ ಸಿನಿಮಾ ಚರ್ಚಿಸುತ್ತದೆ. ಸಿನಿಮಾದ ನಾಯಕನಾಗಿ ನವೀನ್ ಪೋಲಿಶೆಟ್ಟಿ ನಟಿಸಿದ್ದಾರೆ.
ಇದನ್ನೂ ಓದಿ:ಅನುಷ್ಕಾ ಶೆಟ್ಟಿ ಸಿನಿಮಾ ಪ್ರಮೋಷನ್ನಿಂದ ದೂರ ಇರೋಕೆ ಪ್ರಭಾಸ್ ಕಾರಣ? ಇಲ್ಲಿದೆ ನಿಜಾಂಶ
‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಬಿಡುಗಡೆ ಆದ 16 ದಿನದಲ್ಲಿ 50 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡಿದೆ. ಈ ಸಿನಿಮಾವು ಆಂಧ್ರ-ತೆಲಂಗಾಣದಲ್ಲಿ 23 ಕೋಟಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗಿದೆ. ನೆರೆಯ ರಾಜ್ಯಗಳು ಹಾಗೂ ವಿದೇಶದಲ್ಲಿ ಸಿನಿಮಾಕ್ಕೆ ಆಗಿರುವ ಕಲೆಕ್ಷನ್ ಎಲ್ಲವನ್ನೂ ಒಟ್ಟುಗೂಡಿಸಿದರೆ ಸಿನಿಮಾದ ಒಟ್ಟು ಕಲೆಕ್ಷನ್ 50 ಕೋಟಿ ದಾಟುತ್ತಿದೆ ಎನ್ನಲಾಗಿದೆ.
‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾವನ್ನು ಪ್ರಭಾಸ್ ಒಡೆತನದ ಯುವಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಮಹೇಶ್ ಬಾಬು ಪಚ್ಚಿಗೊಲ್ಲ. ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ನವೀನ್ ಪೋಲಿಶೆಟ್ಟಿ ಜೊತೆಗೆ ಪವಿತ್ರಾ ಲೋಕೇಶ್, ಮುರಳಿ ಶರ್ಮಾ, ಜಯಸುಧಾ, ನಾಸರ್, ಹರ್ಷವರ್ಧನ ಇನ್ನೂ ಹಲವರು ನಟಿಸಿದ್ದಾರೆ. ಈ ಸಿನಿಮಾವು ಒಟಿಟಿಗೆ ಈಗಾಗಲೇ ಬಹಳ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಇದೀಗ ಮಲಯಾಳಂನ ಹೊಸ ಸಿನಿಮಾವೊಂದನ್ನು ಅನುಷ್ಕಾ ಶೆಟ್ಟಿ ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ