ಶಾರುಖ್ ಖಾನ್ (Shah Rukh Khan) ಮಗ ಆರ್ಯನ್ ಖಾನ್ (Aryan Khan) ಅವರನ್ನು ಸುತ್ತುಕೊಂಡಿದ್ದ ಕಷ್ಟಗಳೆಲ್ಲ ಒಂದೊಂದಾಗಿಯೇ ಪರಿಹಾರ ಆಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅವರು ಡ್ರಗ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಕೆಲ ಕಾಲ ಅವರು ಜೈಲಿನಲ್ಲಿದ್ದರು. ಈ ಸಂದರ್ಭದಲ್ಲಿ ಅವರ ಪಾಸ್ಪೋರ್ಟ್ಅನ್ನು ಸೀಜ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ರಿಲೀಫ್ ಸಿಕ್ಕರೂ ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಎನ್ಡಿಪಿಎಎಸ್ ಕೋರ್ಟ್ ಮೊರೆ ಹೋಗಿದ್ದರು. ಈಗ ಅವರಿಗೆ ಪಾಸ್ಪೋರ್ಟ್ ನೀಡಲು ಕೋರ್ಟ್ ಆದೇಶ ಹೊರಡಿಸಿದೆ.
ಆರ್ಯನ್ ಖಾನ್ ಅವರನ್ನು ಅರೆಸ್ಟ್ ಮಾಡಿ, ವಿಚಾರಣೆ ನಡೆಸಲಾಯಿತು. ಆದರೆ, ಅವರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಲಾಯಿತು. ಆದರೆ, ಪಾಸ್ಪೋರ್ಟ್ ಇಲ್ಲದ ಕಾರಣ ವಿದೇಶಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರು ಎನ್ಡಿಪಿಎಎಸ್ ಕೋರ್ಟ್ ಮೊರೆ ಹೋಗಿದ್ದರು.
‘ವಿಚಾರಣೆ ವೇಳೆ ಅರ್ಜಿದಾರರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿಲ್ಲ. ಹೀಗಾಗಿ, ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ, ಅರ್ಜಿದಾರರ ಜಾಮೀನು ಷರತ್ತುಗಳನ್ನು ರದ್ದು ಮಾಡಬೇಕು ಮತ್ತು ಅವರ ಪಾಸ್ಪೋರ್ಟ್ ಹಿಂದಿರುಗಿ ಕೊಡಬೇಕು’ ಎಂದು ನ್ಯಾಯಾಧೀಶ ವಿವಿ ಪಾಟಿಲ್ ಹೇಳಿದ್ದಾರೆ.
2021ರ ಅಕ್ಟೋಬರ್ 2ರಂದು ರಾತ್ರಿ ಆರ್ಯನ್ ಖಾನ್ ಅವರನ್ನು ಕ್ರ್ಯೂಸ್ಶಿಪ್ನಲ್ಲಿ ಅರೆಸ್ಟ್ ಮಾಡಲಾಯಿತು. ನಂತರ ಅವರನ್ನು ವಶಕ್ಕೆ ಪಡೆಯಲಾಯಿತು. 28 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಯಿತು. ಆ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಈ ವರ್ಷ ಮೇ ತಿಂಗಳಲ್ಲಿ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ಸಿಕ್ಕಿತು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಿಂದ ಮುಕ್ತಿ ಸಿಕ್ಕ ಬೆನ್ನಲ್ಲೇ ಅಮೇರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?
ಸಾಮಾನ್ಯವಾಗಿ ಸ್ಟಾರ್ಗಳ ಮಕ್ಕಳು ಹೀರೋ/ಹೀರೋಯಿನ್ ಆಗಲು ಇಷ್ಟಪಡುತ್ತಾರೆ. ಆದರೆ ಆರ್ಯನ್ ಖಾನ್ ಡೈರೆಕ್ಟರ್ ಆಗುವ ಕನಸು ಕಂಡಿದ್ದಾರೆ. ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಮೂಲಕ ಮೂಡಿ ಬರುತ್ತಿರುವ ವೆಬ್ ಸೀರಿಸ್ಗೆ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸೀರಿಸ್ನಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಅಪ್ಡೇಟ್ ಬರಬೇಕಿದೆ. ಈ ಚಿತ್ರದ ಶೂಟಿಂಗ್ಗೆ ಅವರು ವಿದೇಶಕ್ಕೆ ತೆರಳಲಿದ್ದಾರೆ ಎನ್ನುವ ಮಾತು ಕೂಡ ಇದೆ. ಈಗ ಅವರಿಗೆ ಪಾಸ್ಪೋರ್ಟ್ ಸಿಕ್ಕಿರುವುದರಿಂದ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.