ನಿರ್ದೇಶಕ ಅಟ್ಲಿಗೆ ಪದೇಪದೇ ವಿಘ್ನ; ಅಲ್ಲು ಅರ್ಜುನ್ ಜತೆಗಿನ ಸಿನಿಮಾಗೂ ತೊಂದರೆ
ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಸ್ಟಾರ್ ಹೀರೋಗಳು ಸಿದ್ಧವಾಗಿದ್ದಾರೆ. ಆದರೆ ಹಲವು ವಿಘ್ನಗಳ ಕಾರಣದಿಂದ ಸಿನಿಮಾಗಳು ಸೆಟ್ಟೇರುವುದು ತಡ ಆಗುತ್ತಿದೆ. ಅಲ್ಲು ಅರ್ಜುನ್, ಸಲ್ಮಾನ್ ಖಾನ್ ಮುಂತಾದ ನಟರಿಂದ ಬುಲಾವ್ ಬಂದಿದ್ದರೂ ಕೂಡ ಅಟ್ಲಿ ಅವರು ಸಿನಿಮಾ ಕೆಲಸ ಆರಂಭಿಸಲು ಕಷ್ಟ ಆಗುತ್ತಿದೆ.

ಖ್ಯಾತ ನಿರ್ದೇಶಕ ಅಟ್ಲಿ (Atlee) ಅವರಿಗೆ ಸಖತ್ ಬೇಡಿಕೆ ಇದೆ ಎಂಬುದು ನಿಜ. ಕಾಲಿವುಡ್ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಅವರು ಬಾಲಿವುಡ್ನಲ್ಲೂ ಹೆಸರು ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಆ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡಲು ಬೇರೆ ಬೇರೆ ಹೀರೋಗಳು ಕೂಡ ಆಸಕ್ತಿ ತೋರಿಸಿದರು. ಸಲ್ಮಾನ್ ಖಾನ್ ಜೊತೆ ಅಟ್ಲಿ ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ಚಿತ್ರಕ್ಕೆ ವಿಘ್ನ ಎದುರಾದಂತಿದೆ. ಅಷ್ಟೇ ಅಲ್ಲದೇ, ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಅಟ್ಲಿ ಮಾಡಬೇಕಿರುವ ಚಿತ್ರಕ್ಕೂ ತೊಂದರೆ ಉಂಟಾಗಿರುವ ಬಗ್ಗೆ ಸುದ್ದಿ ಪ್ರಕಟ ಆಗಿದೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಕ್ಸಸ್ ಬಳಿಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಲಿರುವ ಹೊಸ ಸಿನಿಮಾ ನಿರ್ದೇಶನ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಅವರು ಕೈ ಜೋಡಿಸಿರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಆದರೆ ಈ ಚಿತ್ರಕ್ಕೆ ಪಾತ್ರವರ್ಗದ ಆಯ್ಕೆಯೇ ಕಷ್ಟ ಆಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಅಟ್ಲಿ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದು ಕೂಡ ಸಮಸ್ಯೆ ಆಗಿದೆ.
ಅಟ್ಲಿ ಅವರು ಸಿದ್ಧಮಾಡಿಕೊಂಡಿರುವ ಕಥೆಯಲ್ಲಿ ಇಬ್ಬರು ಹೀರೋಗಳ ಪಾತ್ರ ಬರಲಿದೆ. ಅಲ್ಲು ಅರ್ಜುನ್ ಜೊತೆ ಇನ್ನೊರ್ವ ನಟ ಎರಡನೇ ಹೀರೋ ಆಗಿ ಬಣ್ಣ ಹಚ್ಚಬೇಕಿದೆ. ಈ ಮೊದಲು ಆ ಪಾತ್ರಕ್ಕೆ ಶಿವಕಾರ್ತಿಕೇಯನ್ ಆಯ್ಕೆ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ಖಚಿತ ಆದಂತೆ ಕಾಣುತ್ತಿಲ್ಲ. ಹೊಸ ವರದಿಗಳ ಪ್ರಕಾರ, 2ನೇ ಹೀರೋ ಆಗಿ ನಟಿಸಲು ಶಿವಕಾರ್ತಿಯನ್ ಒಪ್ಪಿಕೊಂಡಿಲ್ಲವಂತೆ. ಅದು ಚಿತ್ರತಂಡಕ್ಕೆ ತಲೆನೋವಾಗಿದೆ.
ಅಲ್ಲು ಅರ್ಜುನ್ ಅವರಿಗೆ ದೊಡ್ಡ ಹೆಸರು ಇದೆ. ಹಾಗಿದ್ದರೂ ಕೂಡ ಅವರ ಸಿನಿಮಾದಲ್ಲಿ 2ನೇ ಹೀರೋ ಪಾತ್ರವನ್ನು ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಕಲಾವಿದರ ಆಯ್ಕೆ ಪ್ರಕ್ರಿಯೆ ತಡವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಟ್ಲಿ ಅವರು ಕಥೆ ಬದಲಾಯಿಸಬೇಕಾಗಬಹುದು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಲ್ಲ.
ಇದನ್ನೂ ಓದಿ: ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ಭಾಯಿಜಾನ್?
ಇನ್ನು, ಸಲ್ಮಾನ್ ಖಾನ್ ಜೊತೆ ಅಟ್ಲಿ ಮಾಡಬೇಕಿರುವ ಸಿನಿಮಾದ ಪರಿಸ್ಥಿತಿ ಕೂಡ ಹೀಗೆಯೇ ಆಗಿದೆ. ಅಲ್ಲಿಯೂ ಕೂಡ ಅಟ್ಲಿ ಅವರು ಇಬ್ಬರು ಹೀರೋಗಳು ಇರುವ ಕಥೆಯನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸುವ ಇನ್ನೊರ್ವ ನಟ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಅಲ್ಲದೇ ಆ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ಮೀರುತ್ತಿದೆ ಎಂಬ ಕಾರಣಕ್ಕೆ ಪ್ರಾಜೆಕ್ಟ್ ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.