Bairagee: ಟಗರು ಜೋಡಿಯ ರಿಎಂಟ್ರಿ: ಬಿಡುಗಡೆಗೂ ಮುನ್ನವೇ ಕೋಟಿ ಲೂಟಿ ಮಾಡಿದ ‘ಬೈರಾಗಿ’
Bairagee Movie: ಈ ಚಿತ್ರದಲ್ಲಿ ಶಿವಣ್ಣ, ಡಾಲಿ ಧನಂಜಯ್, ಯುವ ನಟ ಪೃಥ್ವಿ, ಶಶಿಕುಮಾರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಕಂಡು ಬರಲಿದೆ.
ಟಗರು ಚಿತ್ರದಲ್ಲಿ ಎಸಿಪಿ ಶಿವಕುಮಾರ್ ಹಾಗೂ ಡಾನ್ ಡಾಲಿಯಾಗಿ ಅಬ್ಬರಿಸಿದ್ದ ಶಿವರಾಜ್ ಕುಮಾರ್ ಮತ್ತು ಧನಂಜಯ್ ಬೈರಾಗಿ ಚಿತ್ರದ ಮೂಲಕ ಮತ್ತೆ ತೆರೆಮೇಲೆ ಆರ್ಭಟಿಸಲು ಸಜ್ಜಾಗಿ ನಿಂತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರವು ಜುಲೈ 1 ಕ್ಕೆ ತೆರೆ ಕಾಣುತ್ತಿದೆ. ಇತ್ತ ಅಭಿಮಾನಿಗಳು ಶಿವಣ್ಣ ಹಾಗೂ ಧನಂಜಯ್ ಅವರನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರೆ, ಅತ್ತ ನಿರ್ಮಾಪಕರು ಕೋಟಿ ಬಿಸಿನೆಸ್ ಮೂಲಕ ಸೇಫ್ ಆಗಿದ್ದಾರೆ.
ಹೌದು, ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿನಯದ ಸಿನಿಮಾಗಳಿಂದ ನಿರ್ಮಾಪಕರು ಸೇಫ್ ಆಗ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿದೆ. ಈ ಮಾತನ್ನು ಪುಷ್ಠೀಕರಿಸುವಂತೆ ಇದೀಗ ಬೈರಾಗಿ ಚಿತ್ರದ ನಿರ್ಮಾಪಕರು ಚಿತ್ರ ಬಿಡುಗಡೆಗೂ ಮುನ್ನವೇ ಒಂದಷ್ಟು ಬಿಸಿನೆಸ್ ಮುಗಿಸಿದ್ದಾರೆ. ಈ ವ್ಯವಹಾರದಿಂದ ಬರೋಬ್ಬರಿ 10 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಬೈರಾಗಿ ಸಿನಿಮಾದ ಒಟಿಟಿ ಮತ್ತು ಸ್ಯಾಟ್ಲೈಟ್ ಹಕ್ಕುಗಳು ಮಾರಾಟವಾಗಿದೆ. ಅದು ಕೂಡ ಬರೋಬ್ಬರಿ 10 ಕೋಟಿ ರೂ.ಗೆ ಎಂಬುದು ವಿಶೇಷ. ಅಂದರೆ ನಿರ್ಮಾಪಕರು ಹಾಕಿದ ಬಂಡವಾಳ ಒಂದಷ್ಟು ಭಾಗ ಚಿತ್ರದ ಬಿಡುಗಡೆಗೂ ಮುನ್ನವೇ ಹಿಂತಿರುಗಿದೆ. ಇನ್ನು ಚಿತ್ರವು ರಾಜ್ಯಾದ್ಯಂತ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಈ ಮೂಲಕ ಬಾಕ್ಸಾಫೀಸ್ನಲ್ಲಿ ಕೊಳ್ಳೆ ಹೊಡೆಯುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.
ಈಗಾಗಲೇ ಬೈರಾಗಿ ಚಿತ್ರದ ಪ್ರಚಾರ ಕಾರ್ಯಗಳು ಶುರುವಾಗಿದ್ದು, ಜೂನ್ 25ಕ್ಕೆ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನೂ ಕೂಡ ಇಟ್ಟುಕೊಂಡಿದ್ದಾರೆ. ಅಲ್ಲದೆ ಚಿತ್ರ ತಂಡದ ರೋಡ್ ಶೋಗಳನ್ನು ಕೂಡ ಮಾಡುವ ಪ್ಲ್ಯಾನ್ನಲ್ಲಿದ್ದಾರೆ ನಿರ್ಮಾಪಕ ಕೃಷ್ಣ ಸಾರ್ಥಕ್. ಅದರಂತೆ ಜೂನ್ 24 ರಿಂದ ಬೆಂಗಳೂರಿನಿಂದ ರೋಡ್ ಶೋ ಆರಂಭವಾಗಲಿದ್ದು, ಜೂನ್ 25 ಕ್ಕೆ ಚಾಮರಾಜನಗರಕ್ಕೆ ತಲುಪಲಿದೆ. ಅಲ್ಲದೇ ಅಲ್ಲದೆ ಪ್ರೀ ರಿಲೀಸ್ ಕಾರ್ಯಕ್ರಮವನ್ನೂ ನಡೆಸಲು ಬೈರಾಗಿ ತಂಡ ಯೋಜನೆ ರೂಪಿಸಿದೆ.
ಒಟ್ಟಿನಲ್ಲಿ ಶಿವಣ್ಣ, ಡಾಲಿ ಧನಂಜಯ್, ಯುವ ನಟ ಪೃಥ್ವಿ, ಶಶಿಕುಮಾರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಬಳಗವನ್ನೇ ಜೊತೆ ಸೇರಿಸಿರುವ ನಿರ್ದೇಶಕ ವಿಜಯ್ ಮಿಲ್ಟನ್, ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರಾಗಿ ತಮ್ಮ ಮೊದಲ ಪ್ರಯತ್ನದಲ್ಲೇ ಬಾಕ್ಸಾಫೀಸ್ ಅಲುಗಾಡಿಸುವ ವಿಶ್ವಾಸದಲ್ಲಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಚಿತ್ರವು ಒಟಿಟಿ ಹಾಗೂ ಸ್ಯಾಟ್ಲೈಟ್ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.