Amit Mistry Death: ‘ಬಂದಿಶ್ ಬ್ಯಾಂಡಿಟ್ಸ್’ ಖ್ಯಾತಿಯ ನಟ ಅಮಿತ್ ಮಿಸ್ತ್ರೀ ಹೃದಯಾಘಾತದಿಂದ ನಿಧನ
Amit Mistry Heart Attack: ಹೃದಯಾಘಾತ ಆದ ಕೂಡಲೇ ಅಮಿತ್ ಮಿಸ್ತ್ರೀ ಅವರ ಪ್ರಾಣಪಕ್ಷಿ ಹಾರಿಹೋಯಿತು. ಆಸ್ಪತ್ರೆಗೆ ಕರೆತರುವಷ್ಟು ಸಮಯವೂ ಉಳಿದಿರಲಿಲ್ಲ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.
ಹಿಂದಿ ಚಿತ್ರರಂಗಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಲೇ ಇವೆ. ಹಿರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ನಿಧನರಾದ ಬೆನ್ನಲೇ ನಟ ಅಮಿತ್ ಮಿಸ್ತ್ರೀ ಮೃತರಾಗಿದ್ದಾರೆ. ಅಮಿತ್ ಅವರಿಗೆ ಶುಕ್ರವಾರ (ಏ.23) ಹೃದಯಾಘಾತ ಆಗಿದ್ದು, ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿ ಬಳಗಕ್ಕೆ ತೀವ್ರ ನೋವು ಉಂಟಾಗಿದೆ.
ಶುಕ್ರವಾರ ಬೆಳಗ್ಗೆಯೇ ಅಮಿತ್ ಮಿಸ್ತ್ರೀಗೆ ತೀವ್ರ ಹೃದಯಾಘಾತ ಆಗಿದೆ. ಕೂಡಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು. ಆಸ್ಪತ್ರೆಗೆ ಕರೆತರುವಷ್ಟು ಸಮಯವೂ ಉಳಿದಿರಲಿಲ್ಲ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ಅಮಿತ್ ಮಿಸ್ತ್ರೀ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಗುಜರಾತಿ ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಅಮಿತ್ ಸಕ್ರಿಯರಾಗಿದ್ದರು. ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. 2020ರಲ್ಲಿ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಬಂದಿಶ್ ಬ್ಯಾಂಡಿಟ್ಸ್ ವೆಬ್ ಸಿರೀಸ್ನಲ್ಲಿ ಅಮಿತ್ ಒಂದು ಮುಖ್ಯ ಪಾತ್ರ ಮಾಡಿದ್ದರು. ಆ ಮೂಲಕ ಅವರು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು.
ಕ್ಯಾ ಹೆಹ್ನಾ ಹೈ, ಏಕ್ ಚಾಲೀಸ್ ಕಿ ಲಾಸ್ಟ್ ಲೋಕಲ್, 99, ಶೋರ್ ಇನ್ ದ ಸಿಟಿ, ಎಮ್ಲಾ ಪಗ್ಲಾ ದೀವಾನ, ಎ ಜಂಟಲ್ಮನ್ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅಮಿತ್ ನಟಿಸಿದ್ದರು. ತೆನಾಲಿ ರಾಮ, ವೋ, ಶ್, ಕೊಯಿ ಹೈ ಮುಂತಾದ ಧಾರಾವಾಹಿಗಳು ಅಮಿತ್ ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.
ಕೊರೊನಾ ಕಾರಣದಿಂದಲೂ ಚಿತ್ರರಂಗದ ಅನೇಕರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಹಿರಿಯ ನಟ ಕಿಶೋರ್ ನಂದಲಸ್ಕರ್ ಅವರು ಕೊವಿಡ್ನಿಂದ ಮೃತರಾದರು. ಗುರುವಾರ (ಏ.22) ರಾತ್ರಿ ಹಿರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ನಿಧನರಾದರು. ಈಗ ಅಮಿತ್ ಮಿಸ್ತ್ರೀ ಅವರ ಸಾವಿನ ಸುದ್ದಿಯಿಂದ ಬಾಲಿವುಡ್ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅವರಿಗೆ ಕೊವಿಡ್ ತಗುಲಿತ್ತೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾ ವೈರಸ್ನಿಂದ ನಿಧನ; ಚಿತ್ರರಂಗಕ್ಕೆ ಆಘಾತ
(Bandish Bandits actor Amit Mistry dies of cardiac arrest)