Bigg Boss Kannada: ‘ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’: ಪುರುಷ ಸ್ಪರ್ಧಿಗಳ ಬಗ್ಗೆ ಸುದೀಪ್ ಎದುರು ಶುಭಾ ಅಳಲು!
Shubha Poonja: ನಟಿ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಐದನೇ ವಾರಕ್ಕೆ ಅವರ ಪಯಣ ಮುಂದುವರಿಸಿದೆ. ಈ ಸಂದರ್ಭದಲ್ಲಿ ಅವರು ಕೆಲವರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ನಟಿ ಶುಭಾ ಪೂಂಜಾ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಿಕ್ಕ ಮಗುವಿನ ರೀತಿ ಅವರು ವರ್ತಿಸುತ್ತಾರೆ. ಆ ಕಾರಣಕ್ಕಾಗಿ ಅವರು ಕ್ಯೂಟ್ ಆಗಿ ಕಾಣುತ್ತಾರೆ ಎಂಬುದು ಮನೆಯ ಸದಸ್ಯರ ಭಾವನೆ. ಹೀಗೆ ನಗುನಗುತ್ತಾ ಕಾಲ ಕಳೆಯುತ್ತಿರುವ ಶುಭಾ ಪೂಂಜಾ ಯಾವಾಗ ಅಳುತ್ತಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ. ಈ ವಿಚಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತದೆ. ಮೂರವೇ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಶುಭಾ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಕಳೆದ ವಾರ ಒಂದು ಟಾಸ್ಕ್ ನಿಭಾಯಿಸುವ ಸಂದರ್ಭದಲ್ಲಿ ಶುಭಾ ಪೂಜಾ ಅವರ ಕಾಲಿಗೆ ಗಾಯ ಆಗಿತ್ತು. ಆಗ ಅವರು ಚಿಕ್ಕ ಮಕ್ಕಳಂತೆ ಅಳಲು ಶುರು ಮಾಡಿದರು. ಅಂಗಾಲಿನಲ್ಲಿ ಗಾಯ ಆಗಲು ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ರಾಜೀವ್ ಮತ್ತು ಮಂಜು ಪ್ರಯತ್ನಿಸಿದರು. ಕಾಲಿಗೆ ಮುಳ್ಳು ಅಥವಾ ಗ್ಲಾಸ್ ಚುಚ್ಚಿಕೊಂಡಿರಬಹುದು ಎಂದು ಅವರು ಪರಿಶೀಲಿಸುತ್ತಿದ್ದರು. ಆದರೆ ಆ ಗಾಯವನ್ನು ಮುಟ್ಟಲು ಶುಭಾ ಅವಕಾಶವೇ ನೀಡುತ್ತಿರಲಿಲ್ಲ. ಈ ಪ್ರಸಂಗ ಸಿಕ್ಕಾಪಟ್ಟೆ ಕಾಮಿಡಿ ಆಗಿತ್ತು.
ನಂತರ ಶುಭಾ ಅವರನ್ನು ಬಾತ್ ರೂಮ್ಗೆ ಕರೆದುಕೊಂಡು ಹೋಗಿ, ಗಾಯ ಆಗಿದ್ದ ಜಾಗವನ್ನು ಕ್ಲೀನ್ ಮಾಡಲಾಯಿತು. ಆಗಲೂ ಶುಭಾ ಪೂಂಜಾ ಚಿಕ್ಕ ಹುಡುಗಿಯಂತೆ ಅಳುತ್ತಿದ್ದರು. ಅವರ ವರ್ತನೆ ನೋಡಿ ಮನೆಯ ಇನ್ನುಳಿದ ಸದಸ್ಯರು ಬಿದ್ದು ಬಿದ್ದು ನಗುತ್ತಿದ್ದರು. ಇದೇ ವಿಚಾರ ಸುದೀಪ್ ಜೊತೆಗಿನ ವಾರದ ಪಂಚಾಯಿಯಲ್ಲಿ ಚರ್ಚೆಗೆ ಬಂತು. ಹೇಗಾದರೂ ಮಾಡಿ ಆ ಗಾಯದ ಚರ್ಮವನ್ನು ಕಿತ್ತು ಹಾಕಿ ಎಂದು ರಾಜೀವ್ ಮತ್ತು ಮಂಜುಗೆ ಸುದೀಪ್ ಸೂಚನೆ ನೀಡಿದರು. ಆ ಮಾತು ಕೇಳಿ ಶುಭಾಗೆ ಜೀವವೇ ಹಾರಿಹೋದಂತೆ ಆಯಿತು.
‘ಈಗಾಗಲೇ ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’ ಎಂದು ಮಂಜು ಪಾವಗಡ ಮತ್ತು ರಾಜೀವ್ ಬಗ್ಗೆ ಸುದೀಪ್ ಬಳಿ ಶುಭಾ ಪೂಂಜಾ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ ಈ ಪ್ರಸಂಗ ಕಾಮಿಡಿ ಆಗಿತ್ತು. ಯಾವುದಾದರೂ ಟಾಸ್ಕ್ ಇದ್ದಾಗ ಶುಭಾ ಕಾಲಿನ ಗಾಯದ ಚರ್ಮ ಕಿತ್ತು ಹಾಕಿ ಎಂದು ಕಿಚ್ಚ ಸುದೀಪ್ ಕೂಡ ತಮಾಷೆ ಮಾಡುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ನಗುವಿನ ವಾತಾವರಣ ಮೂಡಿಸಿದರು.
ಇನ್ನು, ಬಾಯ್ಫ್ರೆಂಡ್ನನ್ನು ಮಿಸ್ ಮಾಡಿಕೊಳ್ಳುತ್ತಿರುವ ಶುಭಾ ಪೂಂಜಾಗೆ ಬಿಗ್ ಬಾಸ್ ಮಾ.27ರ ವೀಕೆಂಡ್ ಶೋನಲ್ಲಿ ಅಚ್ಚರಿವೊಂದನ್ನು ನೀಡಿದರು. ಶುಭಾ ಪೂಂಜಾ ಅವರ ಬಾಯ್ ಫ್ರೆಂಡ್ ಧ್ವನಿ ಕೇಳಿಸಲಾಯಿತು. ‘ನೀನು ಬಿಗ್ ಬಾಸ್ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ’ ಎಂಬ ವಾಯ್ಸ್ ಮೆಸೇಜ್ ಕಳಿಸಿದ್ದರು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು ಮತ್ತು ಆನಂದ ಭಾಷ್ಪ ಸುರಿಸಿದರು.
ಇದನ್ನೂ ಓದಿ: Bigg Boss Elimination: ಬಿಗ್ ಬಾಸ್ನಿಂದ ಹೊರಬಿದ್ದ ಚಂದ್ರಕಲಾ ಮೋಹನ್? ಎಲಿಮಿನೇಷನ್ಗೆ ಆ ಒಂದು ವರ್ತನೆಯೇ ಕಾರಣ