ಬಿಡುಗಡೆಗೆ ಮುನ್ನವೇ ವಿವಾದ ಎಬ್ಬಿಸಿದೆ ’72 ಹೂರೇ’: ಏನೀ ಸಿನಿಮಾದ ಕತೆ?
72 Hoorian: ಭಯೋತ್ಪಾದನೆ ವಿರುದ್ಧ ಸಿನಿಮಾ ಎಂದು ಹೇಳಲಾಗುತ್ತಿರುವ ಬಹತ್ತರ್ ಹೂರೇ ಸಿನಿಮಾದ ವಿರುದ್ಧ ಮುಂಬೈನಲ್ಲಿ ವ್ಯಕ್ತಿಯೊಬ್ಬ ದೂರು ದಾಖಲಿಸಿದ್ದಾನೆ. ಸಿನಿಮಾ ಜುಲೈ 7 ರಂದು ಬಿಡುಗಡೆ ಆಗಲಿದೆ.
ಇತ್ತೀಚೆಗೆ ಧರ್ಮಗಳು (Religion ) ತುಸು ಅತಿಯಾಗಿಯೇ ಸಿನಿಮಾಗಳಲ್ಲಿ (Cinema) ಇಣುಕುತ್ತಿವೆ. ಬರೀ ಇಣುಕುತ್ತಿರುವುದೇನು ಸಿನಿಮಾ ತುಂಬಾ ಧರ್ಮಗಳೇ ತುಂಬಿಕೊಂಡಿವೆ. ಈ ಸಿನಿಮಾ ಮಾಡುವವರು ಅದನ್ನು ಬೆಂಬಲಿಸುವವರು ಈ ಸಿನಿಮಾಗಳು ಜಾಗೃತಿ ಎಂದು ಕರೆದರೆ, ವಿರೋಧಿಸುವ ಸಮುದಾಯ ಮತ್ತೊಂದು ಧರ್ಮದ ಬಗ್ಗೆ ಭಯ ಹುಟ್ಟಿಸುವ ಯತ್ನ ಎಂದೂ ಕರೆಯುತ್ತಿವೆ. ಒಟ್ಟಿನಲ್ಲಿ ಈ ರೀತಿಯ ಸಿನಿಮಾಗಳಿಗೆ ನಿಶ್ಚಿತ ಪ್ರೇಕ್ಷಕರಂತೂ ಇದ್ದಾರೆ ಎಂಬುದನ್ನು ಕೆಲ ನಿರ್ಮಾಪಕರು (Producer), ನಿರ್ದೇಶಕರು ಕಂಡು ಕೊಂಡಿದ್ದಾರೆ. ಹಾಗಾಗಿ ಒಂದರ ಹಿಂದೊಂದು ಈ ಮಾದರಿಯ ಸಿನಿಮಾಗಳು ಬರುತ್ತಿವೆ. ಹಣವನ್ನೂ ಮಾಡುತ್ತಿವೆ.
ದಿ ಕಾಶ್ಮೀರ್ ಫೈಲ್ಸ್ (The Kashmir Files), ದಿ ಕೇರಳ ಸ್ಟೋರಿ (The Kerala Story) ಸಿನಿಮಾಗಳು ಬಿಡುಗಡೆ ಆಗಿ ಕೆಲವರಿಂದ ಬೆಂಬಲ, ಕೆಲವರಿಂದ ವಿರೋಧಿ ಎದುರಿಸಿ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸಿದ ಬೆನ್ನಲ್ಲೆ ಅದೇ ಮಾದರಿಗೆ ಸೇರುವ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಬಿಡುಗಡೆಗೆ ಮುನ್ನವೇ ವಿವಾದವನ್ನೂ ಎಬ್ಬಿಸಿವೆ. ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಿಸುವ ಸಿನಿಮಾ ಎಂದು ನಿರ್ಮಾಪಕರು ದಾವೆ ಮಾಡುತ್ತಿರುವ ಬಹತ್ತರ್ ಹೂರೇ (72 ಹೂರೇ) ಸಿನಿಮಾ ಜುಲೈ 7 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ವಿರುದ್ಧ ದೂರು ದಾಖಲಾಗಿದೆ.
ಮುಂಬೈನಲ್ಲಿ ಸೈಯದ್ ಆರಿಫ್ ಅಲಿ ಮೆಹಮೂದ್ ಅಲಿ ಹೆಸರಿನ ವ್ಯಕ್ತಿಯೊಬ್ಬ ‘ಬಹತ್ತರ್ ಹೂರೇ’ ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದಾರೆ. ”ಬಹತ್ತರ್ ಹೂರೇ’ ಸಿನಿಮಾವು ಇಸ್ಲಾಂ ಧರ್ಮ ಅವಮಾನಿಸುತ್ತಿದೆ, ಅಗೌರವಿಸುತ್ತಿದೆ, ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶ ಹೊಂದಿದೆ, ತಾರತಮ್ಯ, ದ್ವೇಷ ಮತ್ತು ಸಾರ್ವಜನಿಕರಲ್ಲಿ ಮುಸ್ಲಿಂ ಸಮುದಾಯದ ಚಿತ್ರಣವನ್ನು ಕೆಡಿಸುವ ಉದ್ದೇಶ ಹೊಂದಿದೆ” ಎಂದು ಆರೋಪಿಸಿದ್ದಾರೆ.
ತಮ್ಮ ಸಿನಿಮಾದ ಸುತ್ತ ಸೃಷ್ಟಿಯಾಗುತ್ತಿರುವ ವಿವಾದದ ಬಗ್ಗೆ ಮಾತನಾಡಿರುವ ನಿರ್ಮಾಪಕ ಅಶೋಕ್ ಪಂಡಿತ್, ”ಈ ಸಿನಿಮಾಗಳು ಪ್ರೊಪಾಗಾಂಡಾ ಸಿನಿಮಾಗಳೆಂದು ಹೇಗೆ ಹೇಳುತ್ತೀರಿ. ಈ ರೀತಿಯ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡುತ್ತಿರುವ ಲಕ್ಷಾಂತರ ಜನ ಮೂರ್ಖರು ಎಂದು ನೀವು ಹೇಳುತಿದ್ದೀರಾ? ಸಿನಿಮಾ ನಿಮಗೆ ಇಷ್ಟವಾಗಲಿಲ್ಲವೆಂದರೆ ಸಿನಿಮಾ ನಿಮಗೆ ಇಷ್ಟವಾಗಲಿಲ್ಲ ಎನ್ನಿ ಆದರೆ ಸಿನಿಮಾವನ್ನು ಪ್ರೊಪಾಗಾಂಡಾ ಎಂದು ಬ್ರ್ಯಾಂಡ್ ಮಾಡಬೇಡಿ. ಇಷ್ಟವಾದ ಸಿನಿಮಾ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಉಡ್ತಾ ಪಂಜಾಬ್ ರೀತಿಯ ಸಿನಿಮಾಕ್ಕೆ ಮೊದಲು ಬೆಂಬಲ ಸೂಚಿಸಿದ ವ್ಯಕ್ತಿ ನಾನು” ಎಂದು ಹೇಳಿದ್ದಾರೆ.
ಸಿನಿಮಾವು, ಹೇಗೆ ಮುಸ್ಲಿಂ ನಾಯಕರು, 72 ಕನ್ಯೆಯರ ಪ್ರಲೋಭನೆ ತೋರಿಸಿ ಮುಸ್ಲಿಂ ಯುವಕರನ್ನು ಮುಸ್ಲಿಯೇತರ ವ್ಯಕ್ತಿಗಳನ್ನು ಜಿಹಾದ್ ಹೆಸರಿನಲ್ಲಿ ಕೊಲ್ಲಲು ಪ್ರೇರೇಪಿಸುತ್ತಾರೆ ಎಂಬ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸ್ವರ್ಗದಲ್ಲಿ ಸಿಗುವ 72 ಕನ್ಯೆಯರ ಆಸೆಗಾಗಿ ಆತ್ಮಾಹುತಿ ಬಾಂಬ್ ಸ್ಪೋಟಿಸಿ ಹಲವರನ್ನು ಕೊಂದು ತಾವೂ ಸತ್ತು ನಂತರ ಸ್ವರ್ಗದಲ್ಲಿ 72 ಕನ್ಯೆಯರಿಗಾಗಿ ಕಾಯುವ ಇಬ್ಬರು ಮುಸ್ಲಿಂ ಯುವಕರ ಬಗೆಗಿನ ಕತೆಯನ್ನು ಸಿನಿಮಾ ಒಳಗೊಂಡಿದೆ.
ಬಹತ್ತರ್ ಹೂರೇ ಸಿನಿಮಾವನ್ನು ಸಂಜಯ್ ಪುರಾನ್ ಸಿಂಗ್ ಚೌಹಾಣ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪವನ್ ಮಲ್ಹೋತ್ರಾ, ಆಮಿರ್ ಬಷೀರ್, ಸರು ಮೈನಿ, ರಷೀದ್ ನಾಜ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವು ಜುಲೈ 7 ರಂದು ಬಿಡುಗಡೆ ಆಗಲಿದೆ. ಸಿನಿಮಾದ ವಿಶೇಷ ಪ್ರದರ್ಶನಗಳು ದೆಹಲಿಯ ಜೆಎನ್ಯು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಈಗಾಗಲೇ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Wed, 5 July 23