ವಿಶ್ವಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ಸಿತಾರೆ ಜಮೀನ್ ಪರ್’
ಜೂನ್ 20ರಂದು ಬಿಡುಗಡೆ ಆದ ‘ಸಿತಾರೆ ಜಮೀನ್ ಪರ್’ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಿದೆ. ಆಮಿರ್ ಖಾನ್ ನಟನೆಯ ಈ ಚಿತ್ರಕ್ಕೆ 6 ದಿನಗಳಿಂದ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ 120 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಿದೆ. ಈ ಸಿನಿಮಾದಿಂದ ಆಮಿರ್ ಖಾನ್ ಅವರಿಗೆ ಗೆಲುವು ಸಿಕ್ಕಿದೆ.

ವಿಶೇಷ ಕಥಾಹಂದರ ಇರುವ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆರ್.ಎಸ್. ಪ್ರಸನ್ನ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan) ಮತ್ತು ಜೆನಿಲಿಯಾ ದೇಶಮುಖ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಇದು ಆಮಿರ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ ಆದ್ದರಿಂದ ಈ ಚಿತ್ರದ ಮೂಲಕ ಗೆಲ್ಲುವುದು ಅವರಿಗೆ ಬಹಳ ಅನಿವಾರ್ಯ ಆಗಿತ್ತು. ಈ ಸಿನಿಮಾ ಮೇಲೆ ಆಮಿರ್ ಖಾನ್ ಸಖತ್ ಭರವಸೆ ಇಟ್ಟುಕೊಂಡಿದ್ದರು. ಅದಕ್ಕೆ ತಕ್ಕಂತೆಯೇ ಕಲೆಕ್ಷನ್ (Box Office Collection) ಆಗುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಈ ಸಿನಿಮಾ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆಯಾಗಿ 6 ದಿನ ಕಳೆದಿದೆ. ಎಲ್ಲ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 80 ಕೋಟಿ ರೂಪಾಯಿಗೂ ಅಧಿಕ ಆಗಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ ಅಂದಾಜು 120 ಕೋಟಿ ರೂಪಾಯಿ ಮೀರಲಿದೆ. ಎರಡನೇ ವೀಕೆಂಡ್ನಲ್ಲಿ ಮತ್ತೆ ಗಳಿಕೆ ಏರಿಕೆ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ.
ವಿಶೇಷ ಚೇತನ ವ್ಯಕ್ತಿಗಳ ಕುರಿತಾದ ಕಥೆಯನ್ನು ‘ಸಿತಾರೆ ಜಮೀನ್ ಪರ್’ ಸಿನಿಮಾ ಹೊಂದಿದೆ. ಇದು ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್. ಹಾಗಿದ್ದರೂ ಕೂಡ ಭಾರತದ ಆಡಿಯನ್ಸ್ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆಮಿರ್ ಖಾನ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಿಂದ ಅವರಿಗೆ ಲಾಭ ಆಗಿದೆ.
‘ಸಿತಾರೆ ಜಮೀನ್ ಪರ್’ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಕೂಡ ಪಾಸಿಟಿವ್ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದಾಗಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿದೆ. ಮೊದಲ ದಿನ ಸಾಧಾರಣ ಗಳಿಕೆ (10.70 ಕೋಟಿ ರೂಪಾಯಿ) ಆಗಿತ್ತು. ಆದರೆ ಶನಿವಾರ (19.90 ಕೋಟಿ ರೂ.) ಮತ್ತು ಭಾನುವಾರ (26.70 ಕೋಟಿ ರೂ.) ಕಲೆಕ್ಷನ್ ಹೆಚ್ಚಾಯಿತು.
ಇದನ್ನೂ ಓದಿ: ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ಆಮಿರ್ ಖಾನ್
ಬಿಡುಗಡೆಗೂ ಮುನ್ನವೇ ‘ಸಿತಾರೆ ಜಮೀನ್ ಪರ್’ ಸಿನಿಮಾ ನೋಡಿದ್ದ ಸಚಿನ್ ತೆಂಡುಲ್ಕರ್, ಸುಧಾಮೂರ್ತಿ ಮುಂತಾದವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿನಿಮಾ ನೋಡಿದರು. ಈ ವೇಳೆ ಆಮಿರ್ ಖಾನ್, ಜೆನಿಲಿಯಾ ಸೇರಿದಂತೆ ಚಿತ್ರತಂಡದ ಹಲವರು ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








