ಆಮಿರ್ ಖಾನ್ಗೆ ಮೂರನೇ ವಿವಾಹ; ಮೊದಲ ಎರಡು ವೈವಾಹಿಕ ಬದುಕು ಮುರಿದುಬಿದ್ದಿದ್ದು ಏಕೆ?
ಬಾಲಿವುಡ್ ನಟ ಆಮಿರ್ ಖಾನ್ 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ಮೂಲಕ ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಮತ್ತೆ ಚರ್ಚೆಗೆ ಬಂದಿದೆ. ಅವರ ಮೊದಲ ಪತ್ನಿ ರೀನಾ ದತ್ತಾ ಹಾಗೂ ಎರಡನೇ ಪತ್ನಿ ಕಿರಣ್ ರಾವ್ ಜೊತೆಗಿನ ವಿಚ್ಛೇದನಗಳಿಗೆ ಕಾರಣಗಳೇನು? ಅವರ ಮಾಜಿ ಪತ್ನಿಯರು ಈಗ ಎಲ್ಲಿದ್ದಾರೆ? ಎಂಬ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ನಟ ಆಮಿರ್ ಖಾನ್ ಪ್ರಸ್ತುತ ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಭಾರಿ ಸುದ್ದಿಯಲ್ಲಿದ್ದಾರೆ. ಅವರ ಖಾಸಗಿ ಬದುಕಿನಲ್ಲಿ ನಡೆಯುತ್ತಿರುವ ಸರಣಿ ಘಟನೆಗಳು ಸದ್ಯ ವರದಿಯಾಗುತ್ತಿವೆ. ಆಮಿರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಜುಲೈ 5 ರಂದು ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಮಿರ್ ಖಾನ್ ಅವರು ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿ ಸ್ಪ್ರಾಟ್ ಅವರೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಇಡೀ ಜಗತ್ತಿಗೆ ತಮ್ಮ ಗೆಳತಿ ಎಂದು ಪರಿಚಯಿಸಿದ್ದರು. ಈಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಗೌರಿ ಅವರ ಕೈಹಿಡಿಯುವ ಮುನ್ನ ಆಮಿರ್ ಖಾನ್ ಎರಡು ಬಾರಿ ವಿವಾಹವಾಗಿದ್ದರು. ಅವರು ತಮ್ಮ ಮೊದಲ ಪತ್ನಿ ರೀನಾ ದತ್ತಾ ಮತ್ತು ಎರಡನೇ ಪತ್ನಿ ಕಿರಣ್ ರಾವ್ ಇಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರಾದರೂ, ಅಂತಿಮವಾಗಿ ಅವರಿಂದ ಬೇರ್ಪಟ್ಟರು. ಆಮಿರ್ ಖಾನ್ ಅವರ ಮೊದಲ ಮತ್ತು ಎರಡನೇ ವಿವಾಹಗಳು ಮುರಿದುಬಿದ್ದಿದ್ದು ಏಕೆ ಮತ್ತು ಅವರ ಮಾಜಿ ಪತ್ನಿಯರು ಈಗ ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಆಮಿರ್ ಖಾನ್ ಅವರ ಪ್ರೇಮ ಜೀವನವು ಯಾವುದೇ ಸಿನಿಮಾದ ಕಥಾಹಂದರಕ್ಕಿಂತ ಕಮ್ಮಿಯಿಲ್ಲ. ಅವರು ಕೇವಲ 21ನೇ ವಯಸ್ಸಿನಲ್ಲಿ ರೀನಾ ದತ್ತಾ ಅವರನ್ನು ಮೊದಲ ಬಾರಿಗೆ ವಿವಾಹವಾದರು, ಆದರೆ ನಂತರದ ದಿನಗಳಲ್ಲಿ ವಿಚ್ಛೇದನ ಪಡೆದರು. ಅದಾದ ಬಳಿಕ, ತಮ್ಮ 40ನೇ ವಯಸ್ಸಿನಲ್ಲಿ ಕಿರಣ್ ರಾವ್ ಅವರನ್ನು ಕೈಹಿಡಿದರು. ವಿಚ್ಛೇದನದ ನಂತರವೂ ಆಮಿರ್ ಖಾನ್ ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಆದರೆ, ಇವರ ಮೊದಲ ಮತ್ತು ಎರಡನೇ ವಿವಾಹ ಜೀವನಗಳು ಮುರಿದು ಬೀಳಲು ಅಸಲಿ ಕಾರಣವೇನೆಂದು ಕೆಲವೇ ಜನರಿಗೆ ತಿಳಿದಿದೆ.
ಇದನ್ನೂ ಓದಿ: ಆಮಿರ್ ಖಾನ್ 3ನೇ ಮದುವೆಗೆ ದಿನಾಂಕ ನಿಗದಿ; ಜುಲೈ 5ರಂದು ಗೌರಿ ಜೊತೆ ವಿವಾಹ?
ಆಮಿರ್ ಖಾನ್ ಅವರ ಮೊದಲ ಮದುವೆ:
ನಟ ಆಮಿರ್ ಖಾನ್ ಮೊದಲು ರೀನಾ ದತ್ತಾ ಅವರನ್ನು 1986 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ಇವರಿಬ್ಬರೂ ನೆರೆಹೊರೆಯವರಾಗಿದ್ದು, ಕ್ರಮೇಣ ಪ್ರೀತಿಯಲ್ಲಿ ಬಿದ್ದಿದ್ದರು. ಆಮಿರ್ ಮತ್ತು ರೀನಾ ತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ (ಆಮಿರ್ 21 ವರ್ಷ ಮತ್ತು ರೀನಾ 19 ವರ್ಷ) ಮದುವೆಯಾಗಿದ್ದರು. ರೀನಾ ಮತ್ತು ಆಮಿರ್ ದಂಪತಿಗೆ ಜುನೈದ್ ಮತ್ತು ಐರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ವೈವಾಹಿಕ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ 16 ವರ್ಷಗಳ ನಂತರ, ಅಂದರೆ 2002 ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆದರು. ಆ ಸಮಯದಲ್ಲಿ ತಾವು ಸಂಪೂರ್ಣವಾಗಿ ಚಲನಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದು ಆಮಿರ್ ಖಾನ್ ಅವರೇ ಸ್ವತಃ ಒಪ್ಪಿಕೊಂಡಿದ್ದರು. ಇದೇ ಕಾರಣಕ್ಕಾಗಿ, 16 ವರ್ಷಗಳ ದಾಂಪತ್ಯದ ನಂತರ ಆಮಿರ್ ಮತ್ತು ರೀನಾ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದರು.
ರೀನಾ ದತ್ತಾ ಈಗ ಏನು ಮಾಡುತ್ತಿದ್ದಾರೆ?
ರೀನಾ ದತ್ತಾ ಅವರು ಸದ್ಯ ಚಿತ್ರರಂಗದ ಜನಮನ ಹಾಗೂ ಗ್ಲಾಮರ್ ಪ್ರಪಂಚದಿಂದ ದೂರವಿದ್ದಾರೆ. ಆದಾಗ್ಯೂ, ಅವರು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಇದರೊಂದಿಗೆ ಅವರು ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಸ್ತುತ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿರುವ ರೀನಾ, ಮಗಳು ಐರಾ ಖಾನ್ ಅವರ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಆಮಿರ್ ಖಾನ್ ಎರಡನೇ ಮದುವೆ
ರೀನಾ ಅವರಿಂದ ವಿಚ್ಛೇದನ ಪಡೆದ ಮೂರು ವರ್ಷಗಳ ನಂತರ, ಅಂದರೆ 2005 ರಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಕಿರಣ್ ಅವರು ಆಮಿರ್ ಖಾನ್ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದಾರೆ. ಇವರಿಬ್ಬರ ಪ್ರೇಮಕಥೆ ‘ಲಗಾನ್’ ಸಿನಿಮಾದ ಚಿತ್ರೀಕರಣದ ನಂತರ ಪ್ರಾರಂಭವಾಗಿತ್ತು. ಅವರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ, ಮದುವೆಗೆ ಮುಂಚೆಯೇ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಅದಾದ ನಂತರ, 2011 ರಲ್ಲಿ ಇವರಿಗೆ ಆಜಾದ್ ಎಂಬ ಮಗ ಜನಿಸಿದನು. ಆದಾಗ್ಯೂ, ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಆಮಿರ್ ಮತ್ತು ಕಿರಣ್ ರಾವ್ 2021 ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರ್ಪಟ್ಟರು.
ಕಿರಣ್ ರಾವ್ ಈಗ ಏನು ಮಾಡುತ್ತಿದ್ದಾರೆ?
ಕಿರಣ್ ರಾವ್ ಅವರು ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದು, ಆಮಿರ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ವಿವಿಧ ಸಿನಿಮಾಗಳಿಗೆ ಸಹಾಯ ಮಾಡುತ್ತಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಒಟ್ಟಾಗಿ ತಮ್ಮ ಮಗ ಆಜಾದ್‌ನ ಜವಾಬ್ದಾರಿಯನ್ನು ಸಹ-ಪೋಷಕರಾಗಿನಿಭಾಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




