ಸಿನಿಮಾ ನಟನ ಸಿನಿಮಾ ರೀತಿಯ ಕತೆ, ಜೈಲಿಂದ ತಪ್ಪಿಸಿಕೊಂಡ ಅಪರಾಧಿ ಖ್ಯಾತ ನಟನಾದ
Nagindas Purushotham Das Modi: ಜೈಲಿಂದ ತಪ್ಪಿಸಿಕೊಂಡು ಬಂದು ತಲೆ ಮರೆಸಿಕೊಂಡು ಉದ್ಯಮಿ ಆಗುವ, ಭೂಗತ ಪಾತಕಿಗಳಾಗುವ ಹಲವಾರು ಕತೆಗಳು ಸಿನಿಮಾಗಳಾಗಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಜೈಲಿಂದ ತಪ್ಪಿಸಿಕೊಂಡು ಬಂದು ಸಿನಿಮಾ ನಟನಾಗಿದ್ದಾನೆ. ಅಮಿತಾಬ್ ಬಚ್ಚನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಮೋಹನ್ಲಾಲ್ ಇನ್ನೂ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟನೆ ಸಹ ಮಾಡಿದ್ದಾನೆ. ಇದೀಗ 12 ವರ್ಷಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೇಮಂತ್ ವೈಷ್ಣವ್ ಅಲಿಯಾಸ್ ನಗೀನ್‌ದಾಸ್ ಪರಶೋತ್ತಮದಾಸ್ ಮೋದಿ ಎಂಬ 53 ವರ್ಷದ ನಟನನ್ನು ಅಹಮದಾಬಾದ್ (Ahmedabad) ಕ್ರೈಮ್ ಬ್ರಾಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಮಿತಾಬ್ ಬಚ್ಚನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಸನ್ನಿ ಡಿಯೋಲ್ ಸೇರಿದಂತೆ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿರುವ ಈತ ಹಲವು ಟಿವಿ ಶೋಗಳಲ್ಲಿ ವೆಬ್ ಸರಣಿಗಳಲ್ಲಿ ನಟಿಸಿದ್ದ. ಆದರೆ ಇದೀಗ ಈ ನಟನನ್ನು ಪೊಲೀಸರು 21 ವರ್ಷದ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಬಂಧನದ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಈ ನಟ, ಕಳೆದ 12 ವರ್ಷದಿಂದ ಪೊಲೀಸರಿಂದ ತಲೆ ಮರೆಸಿಕೊಂಡಿದ್ದನಂತೆ!
ಗುಜರಾತಿನ ಈ ವ್ಯಕ್ತಿ ಕೊಲೆ ಪ್ರಕರಣ ಒಂದರಲ್ಲಿ ಅಪರಾಧಿ ಎಂದು ಘೋಷಿತವಾಗಿ 2005 ರಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬಳಿಕ 2014 ರಲ್ಲಿ ಒಂದು ತಿಂಗಳ ಪರೋಲ್ ಪಡೆದು ಬಿಡುಗಡೆ ಆಗಿದ್ದ ಈ ವ್ಯಕ್ತಿ ಮುಂಬೈಗೆ ಬಂದು ನಟನಾಗಿದ್ದಾನೆ. ಆಗಿನಿಂದ ಸುಮಾರು 12 ವರ್ಷಗಳ ಕಾಲ ಆತ ಪೊಲೀಸರಿಗೆ ಸಿಕ್ಕೇ ಇಲ್ಲ! ಆದರೆ ಇದೀಗ 12 ವರ್ಷಗಳ ಬಳಿಕ ಪೊಲೀಸರು ಹೇಮಂತ್ ಅನ್ನು ಬಂಧಿಸಿದ್ದಾರೆ. ನಟ ಹೇಮಂತ್ ಅನ್ನು ಬಂಧಿಸಿದ ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ಪಿಎಮ್ ಧಾಖ್ರಾ ನೀಡಿರುವ ಮಾಹಿತಿಯಂತೆ, 2005ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈತನ ವಿರುದ್ಧ ಆಗಿನ ಐಪಿಸಿ ಸೆಕ್ಷನ್ 302, 324, 147, 148, 149, ಮತ್ತು 120(ಬಿ) ಹಾಗೂ ಬಿಪಿ ಕಾಯ್ದೆಯ ಸೆಕ್ಷನ್ 135(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ರೈಮ್ ಬ್ರಾಂಚ್ ಅಧಿಕಾರಿ ಮಾತನಾಡಿ, ‘ಕಳೆದ 12 ವರ್ಷಗಳಿಂದ ಈತನಿಗಾಗಿ ಹುಡುಕಾಟ ನಡೆದಿತ್ತು. ಈ ಅವಧಿಯಲ್ಲಿ ಆರೋಪಿಯು ಚಿತ್ರರಂಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸಕ್ರಿಯನಾಗಿದ್ದ. ಈತನ ಹಲವು ವೆಬ್ ಸರಣಿಗಳು ಕೂಡ ಬಿಡುಗಡೆಯಾಗಿದ್ದವು. ಹೇಮಂತ್ ಅಹಮದಾಬಾದ್‌ಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಬುಧವಾರ ಮೆಟ್ರೋ ಸ್ಟೇಷನ್ ಬಳಿ ಬಂಧಿಸಲಾಗಿದೆ. ಆತನ ಉಳಿದ ಶಿಕ್ಷೆಯ ಅವಧಿಯನ್ನು ಪೂರೈಸಲು ಆತನನ್ನು ಮೆಹ್ಸಾನಾ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಹೇಮಂತ್ ತನ್ನ ಹೆಸರನ್ನು ಬದಲಾಯಿಸಿಕೊಂಡು, ಚಿತ್ರರಂಗದಲ್ಲಿ ಪೋಷಕ ನಟನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆತ ಹಿಂದಿ, ಗುಜರಾತಿ ಮತ್ತು ಇತರ ಭಾಷೆಗಳ ಚಲನಚಿತ್ರಗಳು, ವೆಬ್ ಸರಣಿಗಳು, ಟಿವಿ ಶೋಗಳು ಮತ್ತು ನಾಟಕಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ಹೇಳಿಕೆಯ ಪ್ರಕಾರ, ಆತ ತಲೆಮರೆಸಿಕೊಂಡಿದ್ದರೂ ಸಹ ಅತ್ಯಂತ ಸಕ್ರಿಯ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದ.
ಇದನ್ನೂ ಓದಿ:ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?
ಹೇಮಂತ್, ಅಮೀರ್ ಖಾನ್, ಕತ್ರಿನಾ ಕೈಫ್ ಮತ್ತು ಅಮಿತಾಭ್ ಬಚ್ಚನ್ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ಮತ್ತು ಶಾಲಿನಿ ಪಾಂಡೆ ನಟನೆಯ ‘ಜಯೇಶ್ ಭಾಯ್ ಜೋರ್ದಾರ್’, ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ‘ಮೆಟ್ರೋ ಇನ್ ದಿನೋ’, ಹಾಗೂ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ‘L2 ಎಂಪೂರನ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಅವರ ಮುಂಬರುವ ಸಿನಿಮಾ ಆಗಿದೆ. ‘ವಾಗ್ಲೆ ಕಿ ದುನಿಯಾ’ ಮತ್ತು ‘ಮೇರೆ ಸಾಯಿ’ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕೆಲವು ವೆಬ್ ಸರಣಿಗಳಲ್ಲಿಯೂ ನಟಿಸಿದ್ದು, ಅವೂ ಸಹ ಬಿಡುಗಡೆ ಆಗಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Fri, 22 May 26





