‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್ ಖಾನ್ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್ ಕಳಿಸಿದ ಭೂಪ
ಶೂಟಿಂಗ್ ಬಿಡುವಿನಲ್ಲಿ ವಿಶ್ರಾಂತಿ ಪಡೆಯಲು ವ್ಯಾನಿಟಿ ವ್ಯಾನ್ ಬಳಸಲಾಗುತ್ತದೆ. ಅರ್ಬಾಜ್ ಖಾನ್ ಅವರಿಗೂ ಈ ಐಷಾರಾಮಿ ವಾಹನವನ್ನು ನೀಡಲಾಗಿತ್ತು. ಆದರೆ ಅದರ ಬಾಗಿಲು ತೆರೆಯಲು ಕೆಲಸಗಾರರು ಸಿದ್ಧರಿರಲಿಲ್ಲ.
ಸ್ಟಾರ್ ನಟರಿಗೆ ಹೋದಲ್ಲೆಲ್ಲ ಭರ್ಜರಿ ಆತಿಥ್ಯ ದೊರೆಯುತ್ತದೆ. ಶೂಟಿಂಗ್ ಸೆಟ್ನಲ್ಲಂತೂ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅವರು ಕೇಳುವುದಕ್ಕಿಂತಲೂ ಮುನ್ನವೇ ಎಲ್ಲವೂ ಸಿದ್ಧವಾಗಿರುತ್ತವೆ. ಆದರೆ ಸಲ್ಮಾನ್ ಖಾನ್ (Salman Khan) ಸಹೋದರ ಅರ್ಬಾಜ್ ಖಾನ್ (Arbaaz Khan) ವಿಚಾರದಲ್ಲಿ ಇದು ಸುಳ್ಳಾಗಿದೆ. ಸಿನಿಮಾ ಚಿತ್ರೀಕರಣದ ಸೆಟ್ನಲ್ಲಿ ಅವರಿಗೆ ತೀವ್ರ ಅವಮಾನ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಾನಿಟಿ ವ್ಯಾನ್ನ (Vanity Van) ಬಾಗಿಲು ತೆಗೆಯದೇ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು ಎಂಬ ಮಾಹಿತಿ ಕೇಳಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಇದೆಲ್ಲ ಆಗಿದ್ದು ‘ರೋಜಿ’ ಸಿನಿಮಾದ ಸೆಟ್ನಲ್ಲಿ.
ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಅರ್ಬಾಜ್ ಖಾನ್ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸಲ್ಮಾನ್ ಖಾನ್ ಸಹೋದರ ಎಂಬ ಕಾರಣಕ್ಕೆ ಅವರಿಗೆ ಹೋದಲ್ಲೆಲ್ಲ ವಿಶೇಷ ಗೌರವ ಸಿಗುತ್ತದೆ. ಆದರೆ ‘ರೋಜಿ: ದಿ ಸ್ಯಾಫ್ರಾನ್ ಚಾಪ್ಟರ್’ ಚಿತ್ರದ ಶೂಟಿಂಗ್ ವೇಳೆ ಎಡವಟ್ಟು ಆಗಿದೆ. ಈ ಚಿತ್ರತಂಡ ತುಂಬ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂಬುದು ತಿಳಿದುಬಂದಿದೆ.
ಪ್ರೇರಣಾ ಅರೋರಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಟ ವಿವೇಕ್ ಒಬೆರಾಯ್ ಅವರು ನಟಿಸುವುದರ ಜೊತೆಗೆ ಸಹ-ನಿರ್ಮಾಪಕನಾಗಿದ್ದರು. ಆದರೆ ಇತ್ತೀಚೆಗೆ ಅವರು ಈ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಚಿತ್ರತಂಡದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ವಿವೇಕ್ಗೆ ಗೊತ್ತಾದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಮಾಪಕಿ ಪ್ರೇರಣಾ ಅರೋರ ಅವರು ಕೆಲಸಗಾರರಿಗೆ ಸೂಕ್ತವಾಗಿ ಸಂಬಳ ನೀಡದೇ ಇರುವುದರಿಂದ ಎಲ್ಲ ವಿಭಾಗದ ಕೆಲವೂ ವಿಳಂಬ ಆಗುತ್ತಿವೆ.
ಚಿತ್ರೀಕರಣದ ಸ್ಥಳದಲ್ಲಿ ಸ್ಟಾರ್ ನಟರಿಗೆ ವ್ಯಾನಿಟಿ ವ್ಯಾನ್ ಅಥವಾ ಕ್ಯಾರವ್ಯಾನ್ಗಳನ್ನು ನೀಡಲಾಗಿರುತ್ತದೆ. ಮೇಕಪ್ ಮಾಡಿಕೊಳ್ಳಲು, ಶೂಟಿಂಗ್ ಬಿಡುವಿನಲ್ಲಿ ವಿಶ್ರಾಂತಿ ಪಡೆಯಲು ಈ ಐಷಾರಾಮಿ ವಾಹನವನ್ನು ಬಳಸಲಾಗುತ್ತದೆ. ಅರ್ಬಾಜ್ ಖಾನ್ ಅವರಿಗೂ ವ್ಯಾನಿಟಿ ವ್ಯಾನ್ ನೀಡಲಾಗಿತ್ತು. ಆದರೆ ಅದರ ಕೆಲಸಗಾರರಿಗೆ ನಿರ್ಮಾಪಕರು ಪೇಮೆಂಟ್ ಮಾಡಿರಲಿಲ್ಲ. ಇದರಿಂದ ಬೇಸತ್ತ ಕೆಲಸಗಾರರು ಅರ್ಬಾಜ್ ಖಾನ್ ಮೇಲೆ ಕೋಪ ತೋರಿಸಿದ್ದಾರೆ.
ಶೂಟಿಂಗ್ ಸೆಟ್ಗೆ ಬಂದ ಅರ್ಬಾಜ್ ಖಾನ್ ಅವರು ವ್ಯಾನಿಟಿ ವ್ಯಾನ್ ಬಳಿ ತೆರಳಿದ್ದರು. ಆದರೆ ಅದರ ಬಾಗಿಲು ತೆರೆಯಲು ಕೆಲಸಗಾರರು ಸಿದ್ಧರಿರಲಿಲ್ಲ. ತಮ್ಮ ಪಾಲಿನ ದುಡ್ಡು ಬರುವವರೆಗೂ ವ್ಯಾನಿಟಿ ವ್ಯಾನ್ ಬಾಗಿಲು ತೆರೆಯುವುದಿಲ್ಲ ಎಂದು ಅವರು ಪಟ್ಟು ಹಿಡಿದರು ಎನ್ನಲಾಗಿದೆ. ಕಡೆಗೆ ವಿಧಿ ಇಲ್ಲದೇ ಅರ್ಜಾನ್ ಖಾನ್ ಅವರು ಶೂಟಿಂಗ್ ಬಿಟ್ಟು ಮನೆ ಹಾದಿ ಹಿಡಿದರು ಎಂಬ ಗುಸುಗುಸು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ:
‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್ ಖಾನ್ ಮಾಜಿ ಪ್ರೇಯಸಿಯ ಖಡಕ್ ಪ್ರಶ್ನೆ
ವಿದೇಶದಲ್ಲಿದ್ದಾರಾ ಸಲ್ಮಾನ್ ಖಾನ್ ಪತ್ನಿ ನೂರ್ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ