ಆರ್ಯನ್ ಖಾನ್ಗೆ ಮತ್ತೆ ನಿರಾಸೆ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ಗೆ ಈವರೆಗೂ ಜಾಮೀನು ಸಿಕ್ಕಿಲ್ಲ. ವಿಶೇಷ ನ್ಯಾಯಾಲಯದಲ್ಲಿ ಬುಧವಾರ (ಅ.13) ವಿಚಾರಣೆ ನಡೆಸಿತು.
ರೇವ್ಸ್ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ಗೆ ಜಾಮೀನು ಎಂಬುದು ಮರೀಚಿಕೆಯಾಗಿದೆ. ಎನ್ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್ ಖಾನ್ ಪುತ್ರ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಬುಧವಾರ (ಅ.13) ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಆದರೆ ಅರ್ಜಿ ವಿಚಾರಣೆ ದಿನಾಂಕವನ್ನು ನ್ಯಾಯಾಲಯ ಗುರುವಾರಕ್ಕೆ (ಅ.14) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್ ಖಾನ್ ಜೈಲಿನಲ್ಲಿ ದಿನ ಕಳೆಯದೇ ಬೇರೆ ದಾರಿ ಇಲ್ಲ.
ಆರ್ಯನ್ ಖಾನ್ಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಹರಸಾಹಸ ಮಾಡುತ್ತಿದ್ದರು. ಪುತ್ರ ಅರೆಸ್ಟ್ ಆದ ದಿನದಿಂದಲೂ ಅವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.
ಆರ್ಯನ್ ಪರ ವಕೀಲರು ಹೇಳಿದ್ದೇನು?
‘ಅಕ್ಟೋಬರ್ 3ರಿಂದ ಆರ್ಯನ್ ವಿಚಾರಣೆ ನಡೆಸಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಎನ್ಸಿಬಿ ವಿರೋಧ ಮಾಡಿತ್ತು. ಹೀಗಾಗಿಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದೆ. ಎನ್ಸಿಬಿ ಕಸ್ಟಡಿ ಅಗತ್ಯವಿಲ್ಲ ಎಂದು ಆರ್ಯನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದರು ಅಮಿತ್ ದೇಸಾಯಿ.
‘ಆರ್ಯನ್ ಖಾನ್ಗೆ ಯಾರು ಆಹ್ವಾನ ನೀಡಿದ್ದರೋ ಅವರನ್ನು ಬಂಧಿಸಿಲ್ಲ. ಪ್ರತೀಕ್ ಗಾಬಾ ಎಂಬಾತ ಆರ್ಯನ್ ಖಾನ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದ. ಆತನನ್ನು ಬಂಧಿಸಬೇಕಿತ್ತು. ಎನ್‌ಡಿಪಿಎಸ್ ಕಾಯಿದೆಯ 27 ಎ ಸೆಕ್ಷನ್ ಕಳ್ಳಸಾಗಣಿಕೆಗೆ ಸಂಬಂಧಿಸಿದೆ. ಈ ಸೆಕ್ಷನ್ ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ. ಆರ್ಯನ್ ಯಾವುದೇ ಅಕ್ರಮ ಕಳ್ಳಸಾಗಣೆಯಲ್ಲಿ ಭಾಗಿಯಾಗಿಲ್ಲ. ಈ ಸೆಕ್ಷನ್ ವಿಧಿಸಿರುವುದು ಅಸಂಬದ್ಧ’ ಎಂದು ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದರು.
‘ಇವರು ಡ್ರಗ್ಸ್ ಪೆಡ್ಲರ್ಗಳು ಅಲ್ಲ. ಡ್ರಗ್ಸ್ ಕಳ್ಳ ಸಾಗಾಟವನ್ನು ಮಾಡಿಲ್ಲ. ಇವರೆಲ್ಲಾ ಚಿಕ್ಕ ಮಕ್ಕಳು. ಅವರು ಪಾಠವನ್ನು ಕಲಿತಿದ್ದಾರೆ. ಜೈಲಿನಲ್ಲಿ ದೀರ್ಘ ಅವಧಿಯವರೆಗೂ ಇರುವುದು ಬೇಡ. ಆರ್ಯನ್ ಖಾನ್ಗೆ ಜಾಮೀನು ನೀಡಿ’ ಎಂದು ಅಮಿತ್ ದೇಸಾಯಿ ಕೋರ್ಟ್ಗೆ ಮನವಿ ಮಾಡಿದರು.
ಎನ್ಸಿಬಿ ಪರ ವಕೀಲರು ಹೇಳಿದ್ದೇನು?
ಎನ್ಸಿಬಿ ಪರ ವಕೀಲರಾದ ಅನಿಲ್ ಸಿಂಗ್ ವಾದಮಂಡಿಸಿದರು. ‘ಡ್ರಗ್ಸ್ ಕಳ್ಳ ಸಾಗಣೆ ಬಹಳ ಗಂಭೀರ, ಕಳಕಳಿಯ ವಿಷಯ. ರೇವ್ ಪಾರ್ಟಿಗಳಲ್ಲಿ ಯುವಜನತೆ ಡ್ರಗ್ಸ್ ಸೇವನೆ ಮಾಡುತ್ತಾರೆ. ಇದರಿಂದ ದೇಶಕ್ಕೆ ತೊಂದರೆ ಆಗುತ್ತದೆ. ಇದು ಒಂದಿಬ್ಬರ ಡ್ರಗ್ಸ್ ಸೇವನೆಗೆ ಸಂಬಂಧಪಟ್ಟಿದ್ದಲ್ಲ. ನಾವು ಇಡೀ ಜಾಲದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರ್ಯನ್ ಖಾನ್ನನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಯಾರು, ಯಾವಾಗ ಆಹ್ವಾನಿಸಿದರು ಎಂದು ಹೇಳುತ್ತಿಲ್ಲ. ಅವರಿಗೆ ಜಾಮೀನು ನೀಡಬಾರದು’ ಎಂದರು ಅನಿಲ್ ಸಿಂಗ್.
ಇದನ್ನೂ ಓದಿ: ಆರ್ಯನ್ ಖಾನ್ ಬಂಧನದ ಹಿಂದಿನ ಅಸಲಿಯತ್ತೇ ಬೇರೆ; ಎನ್ಸಿಬಿ ಕಡೆಯಿಂದಲೇ ಹೊರಬಿತ್ತು ಸತ್ಯ
Published On - 5:36 pm, Wed, 13 October 21