‘ಭೂಲ್ ಭುಲಯ್ಯ 2’ ಚಿತ್ರ (Bhool Bhulaiyaa 2 Movie ) ಗೆದ್ದು ಬೀಗಿದೆ. ಈ ಸಿನಿಮಾದಿಂದ ನಟ ಕಾರ್ತಿಕ್ ಆರ್ಯನ್ ವೃತ್ತಿ ಜೀವನಕ್ಕೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಈ ಚಿತ್ರ ಗೆಲ್ಲೋಕೆ ಕಾರ್ತಿಕ್ ಆರ್ಯನ್ (Kartik Aaryan) ಮುಖ್ಯ ಕಾರಣ ಅನ್ನೋದು ಕೆಲವರ ವಾದ. ಇದು ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಅವರಿಗೂ ಮನವರಿಕೆ ಆದಂತಿದೆ. ಅವರು ನಟ ಕಾರ್ತಿಕ್ ಆರ್ಯನ್ಗೆ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್ಲಾರೆನ್ (McLaren GT) ಕಾರನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಇದು ಕಾರ್ತಿಕ್ ಆರ್ಯನ್ ಖುಷಿಯನ್ನು ದ್ವಿಗುಣ ಮಾಡಿದೆ.
ಬಾಲಿವುಡ್ನಲ್ಲಿ ದೊಡ್ಡ ಸಿನಿಮಾಗಳು ಗೆಲ್ಲುತ್ತಿಲ್ಲ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಚಿತ್ರಗಳೇ ಬಾಕ್ಸ್ ಆಫೀಸ್ನಲ್ಲಿ ಹಣ ಮಾಡಲಾಗದೆ ಒದ್ದಾಡುತ್ತಿವೆ. ಇಂತಹ ಸಂದರ್ಭದಲ್ಲಿ ತೆರೆಗೆ ಬಂದ ‘ಭೂಲ್ ಭುಲಯ್ಯ 2’ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 184 ಕೋಟಿ ರೂಪಾಯಿ ಬಾಚಿಕೊಂಡಿದೆ. 65 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಕಮಾಯಿ ಮಾಡಿದೆ. ಒಟಿಟಿಯಲ್ಲೂ ಚಿತ್ರ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ. ಇದರಿಂದ ನಿರ್ಮಾಪಕರಿಗೆ ದುಡ್ಡಿನ ಹೊಳೆ ಹರಿದಿದೆ.
ಅಕ್ಷಯ್ ಕುಮಾರ್ ನಟನೆಯ ‘ಭೂಲ್ ಭುಲಯ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಭೂಷಣ್ ಕುಮಾರ್ ಅವರೇ ನಿರ್ಮಾಣ ಮಾಡಿದ್ದರು. ಈಗ ‘ಭೂಲ್ ಭುಲಯ್ಯ 2’ ಚಿತ್ರವನ್ನು ನಿರ್ಮಿಸಿ ಅವರು ಯಶಸ್ಸು ಕಂಡಿದ್ದಾರೆ. ಹೀಗಾಗಿ, ಕಾರನ್ನು ಉಡುಗೊರೆ ನೀಡಲಾಗಿದೆ.
ಕಾರ್ತಿಕ್ ಆರ್ಯನ್ಗೆ ಸಿಕ್ಕ ಕಾರಿನ ಮೌಲ್ಯ 3.75 ಕೋಟಿ ರೂಪಾಯಿ. ಭಾರತದಲ್ಲಿ ಹಲವು ಮೆಕ್ಲಾರೆನ್ ಕಾರುಗಳು ಇವೆ. ಆದರೆ, ಜಿಟಿ ಮಾಡೆಲ್ ಭಾರತಕ್ಕೆ ಕಾಲಿಟ್ಟಿರುವುದು ಇದೇ ಮೊದಲು ಅನ್ನೋದು ವಿಶೇಷ. ಈ ಕಾರು 4.0-ಲೀಟರ್ ಟ್ವಿನ್ ಟರ್ಬೋ ವಿ8 ಇಂಜಿನ್ ಹೊಂದಿದೆ. ಈ ಕಾರು 0-100 ಕಿ.ಮೀ. ವೇಗವನ್ನು ಕೇವಲ 3.2 ಸೆಕೆಂಡ್ನಲ್ಲಿ ಹಾಗೂ 0-200 ಕಿ.ಮೀ. ವೇಗವನ್ನು 9 ಸೆಕೆಂಡ್ನಲ್ಲಿ ಪಡೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ 327 ಕಿ.ಮೀ. ಆಗಿದೆ.
ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದ ‘ಸೋನು ಕಿ ಟಿಟ್ಟೂಕಿ ಸ್ವೀಟಿ’ ಚಿತ್ರ ಗೆಲುವು ಕಂಡಿತ್ತು. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು. ಈಗ ‘ಭೂಲ್ ಭುಲಯ್ಯ 2’ ಚಿತ್ರ ಕೂಡ ಗೆದ್ದಿದೆ. ಈ ಮೊದಲು ಕಾರ್ತಿಕ್ ಆರ್ಯನ್ ಕೋಟಿಕೋಟಿ ರೂಪಾಯಿ ನೀಡಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದರು. ಈಗ ಅವರ ಕಾರ್ ಕಲೆಕ್ಷನ್ಗೆ ಮತ್ತೊಂದು ದುಬಾರಿ ಸ್ಪೋರ್ಟ್ಸ್ ಕಾರು ಸೇರ್ಪಡೆ ಆಗಿದೆ.
ಇದನ್ನೂ ಓದಿ: 150 ಕೋಟಿ ರೂ. ಬಾಚಿದ ‘ಭೂಲ್ ಭುಲಯ್ಯ 2’; ಬಾಲಿವುಡ್ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ
ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್ಗೆ ಸಿಕ್ತು ಹೊಸ ಬೂಸ್ಟ್