- TV9 Kannada Entertainment News Bollywood News Bollywood Stars with Foreign Passports: Top Indian Actors Who Aren't Citizens
ನೀವು ಮೆಚ್ಚಿ ಕೊಂಡಾಡುವ ಈ ಸಿನಿಮಾ ಸೆಲೆಬ್ರಿಟಿಗಳು ಭಾರತೀಯ ನಾಗರೀಕರಲ್ಲ
ಬಾಲಿವುಡ್ ನಟ ಇಮ್ರಾನ್ ಖಾನ್, ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಮ್ರಾನ್ ಖಾನ್, ಭಾರತೀಯ ಪ್ರಜೆ ಅಲ್ಲ, ಹಾಗಾಗಿ ಅವರು ದೇಶಬಿಟ್ಟು ತೆರಳಬೇಕು ಎಂದು ಎಫ್ಆರ್ಆರ್ಓ ನೊಟೀಸ್ ನೀಡಿತ್ತು. ಆ ಘಟನೆ ಬಳಿಕ ಮತ್ತೊಮ್ಮೆ ಸಿನಿಮಾ ನಟ-ನಟಿಯರ ಭಾರತೀಯತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಂದಿಗೂ ಹಿಂದಿ ಮತ್ತು ಭಾರತದ ಇತರೆ ಕೆಲ ಭಾಷೆಗಳಲ್ಲಿ ನಟನೆ ಮಾಡುತ್ತಿರುವ ಹಲವು ನಟ-ನಟಿಯರು ಭಾರತೀಯ ಪ್ರಜೆಗಳಲ್ಲ. ಇಲ್ಲಿದೆ ಅಂಥಹವರ ಪಟ್ಟಿ...
Updated on: Nov 06, 2026 | 6:55 PM

ಬಾಲಿವುಡ್ನ ಸ್ಟಾರ್ ನಟಿ ಆಲಿಯಾ ಭಟ್. ತೆಲುಗಿನ ‘ಆರ್ಆರ್ಆರ್’ ಸಿನಿಮಾನಲ್ಲೂ ನಟಿಸಿರುವ ಅವರಿಗೆ ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಆಲಿಯಾ ಭಟ್ ಭಾರತೀಯ ಪ್ರಜೆಯಲ್ಲ. ಆಲಿಯಾ ಭಟ್ ಅವರು ಬ್ರಿಟೀಷ್ ಪ್ರಜೆ. ಅವರ ಬಳಿ ಬ್ರಿಟನ್ನ ಪಾಸ್ಪೋರ್ಟ್ ಇದೆ.

ಬಾಲಿವುಡ್ನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿರುವ ಇಮ್ರಾನ್ ಖಾನ್ ಮೂಲತಃ ಅಮೆರಿಕ ಪ್ರಜೆ. ಸುಮಾರು ದಶಕಕ್ಕೂ ಹೆಚ್ಚು ಕಾಲ ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿರುವ ಇಮ್ರಾನ್ ಖಾನ್ ಅವರು ಕೆಲ ವರ್ಷಗಳ ಹಿಂದೆ ಭಾರತೀಯ ನಾಗರೀಕತೆಯನ್ನು ತ್ಯಜಿಸಿದ್ದಾರೆ. ಆದರೆ ಅವರು ಭಾರತದಲ್ಲೇ ನೆಲೆಸಿದ್ದಾರೆ.

ಖ್ಯಾತ ನಟ ಮತ್ತು ಬಲು ಜನಪ್ರಿಯ ಪಂಜಾಬಿ ಗಾಯಕ ದಿಲ್ಜಿತ್ ದೊಸ್ಸಾಂಜ್ ಜನಿಸಿದ್ದು ಪಂಜಾಬಿನಲ್ಲಿ ಆದರೆ ಕೆಲ ವರ್ಷಗಳ ಹಿಂದೆ ಅವರು ತಮ್ಮ ಭಾರತೀಯ ನಾಗರೀಕತೆಯನ್ನು ತ್ಯಜಿಸಿದ್ದು, ಈಗ ಅವರು ಅಮೆರಿಕದ ಪ್ರಜೆ. ಆದರೆ ಭಾರತದಲ್ಲಿ ಬಲು ಜನಪ್ರಿಯ ಗಾಯಕ ಮತ್ತು ನಟ.

ಕತ್ರಿನಾ ಕೈಫ್ ಎರಡು ದಶಕಕ್ಕೂ ಹೆಚ್ಚಿನ ಸಮಯದಿಂದ ಬಾಲಿವುಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದಿ ಮಾತ್ರವೇ ಅಲ್ಲದೆ ತೆಲುಗು ಸಿನಿಮಾಗಳಲ್ಲೂ ಅವರು ನಟನೆ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ದಾಂಪತ್ಯ ನಡೆಸುತ್ತಿದ್ದಾರೆ. ಆದರೆ ಅವರೂ ಸಹ ಭಾರತೀಯ ಪ್ರಜೆ ಅಲ್ಲ. ಕತ್ರಿನಾ ಕೈಫ್ ಸಹ ಆಲಿಯಾ ರೀತಿ ಬ್ರಿಟೀಷ್ ಪ್ರಜೆ.

ಹಲವು ಬಾಲಿವುಡ್, ತಮಿಳು, ತೆಲುಗು ಸಿನಿಮಾಗಳಲ್ಲಿ ನಟನೆ ಮಾಡಿರುವ ಜನಪ್ರಿಯ ನಟಿ ಕಲ್ಕಿ ಕೇಕ್ಲಾ ಸಹ ಭಾರತೀಯ ಪ್ರಜೆ ಅಲ್ಲ. ಕಲ್ಕಿ ಅವರ ಪೋಷಕರು ಫ್ರಾನ್ಸ್ನವರು, ಆದರೆ ಕಲ್ಕಿ ಜನಿಸಿದ್ದು, ಬೆಳೆದಿದ್ದು ಭಾರತದ ಪಾಂಡಿಚೆರಿಯಲ್ಲಿ. ಈಗ ಅವರು ಫ್ರಾನ್ಸ್ ಪ್ರಜೆ.

ಕನ್ನಡದ ‘ಕೆಡಿ’ ಸಿನಿಮಾದ ಹಾಡಿನ ಮೂಲಕ ವಿವಾದಕ್ಕೆ ಈಡಾಗಿದ್ದ ನಟಿ ನೋರಾ ಫತೇಹಿ, ಹಿಂದಿಯ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಬಾಲಿವುಡ್ನ ಭಾಗವೇ ಆಗಿದ್ದಾರೆ. ಆದರೆ ನೋರಾ ಪತೇಹಿ ಕೆನಡಾದ ಪ್ರಜೆ.

ಹಿಂದಿ, ಕನ್ನಡ ಸೇರಿದಂತೆ ಇನ್ನೂ ಕೆಲ ಭಾಷೆಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೂಲತಃ ಭಾರತೀಯರಲ್ಲ. ಅವರು ಜನಿಸಿದ್ದು ಬಹರೇನ್ನಲ್ಲಿ ಆದರೆ ಈಗಲೂ ಅವರು ಶ್ರೀಲಂಕಾದ ಪ್ರಜೆಯೇ ಆಗಿದ್ದಾರೆ.

ವರುಣ್ ಧವನ್ ನಟನೆಯ ‘ಅಕ್ಟೋಬರ್’ ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಆ ಬಳಿಕ ತಮಿಳು ಸೇರಿದಂತೆ ಇನ್ನೂ ಕೆಲವು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿರುವ ನಟಿ ಬನಿತಾ ಸಂಧು ಸಹ ಭಾರತೀಯ ಪ್ರಜೆ ಅಲ್ಲ. ಬನಿತಾ ಅವರು ಬ್ರಿಟೀಷ್ ಪ್ರಜೆ ಆಗಿದ್ದಾರೆ.

ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನಿ ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ಮೂಲ ಭಾರತೀಯವಾದರೂ ಇವರು ಹಾಲಿ ಭಾರತೀಯ ಪ್ರಜೆ ಅಲ್ಲ. ಕೆನಡಾ ಮತ್ತು ಅಮೆರಿಕದ ಪ್ರಜೆ ಇವರು.

ತಮಿಳಿನ ಜನಪ್ರಿಯ ಸ್ಟಾರ್ ನಟ ಆರ್ ಮಾಧವನ್, ಭಾರತೀಯ ಪ್ರಜೆಯೇ ಆದರೆ ನೆಲೆಸಿರುವುದು ದುಬೈನಲ್ಲಿ. ಮಾಧವನ್ ಅವರು ಭಾರತೀಯ ನಾಗರೀಕತೆ ತ್ಯಜಿಸಿಲ್ಲ ಆದರೆ ಅವರೊಬ್ಬ ಎನ್ಆರ್ಐ (ನಾನ್ ರೆಸಿಡೆನ್ಸ್ ಇಂಡಿಯನ್) ಆಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಅವರು ಭಾರತಕ್ಕೆ ಬರುತ್ತಾರೆ.

ಅಲಾಯಾ ಎಫ್ ಬಾಲಿವುಡ್ನ ಬಲು ಜನಪ್ರಿಯ ಯುವನಟಿ, 2020ರಲ್ಲಿ ನಟನೆಗೆ ಪದಾರ್ಪಣೆ ಮಾಡಿದ ಅಲಾಯಾ ಕಡಿಮೆ ಅವಧಿಯಲ್ಲಿಯೇ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು ಸಹ ಭಾರತೀಯ ಪ್ರಜೆ ಅಲ್ಲ. ಅಲಾಯಾ ಅವರು ಅಮೆರಿಕದ ಪ್ರಜೆ ಆಗಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಮರಾಠಿ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಶಿಬಾನಿ ದಂಡೇಕರ್ ಅವರು ಸಹ ಭಾರತೀಯ ಪ್ರಜೆಯಲ್ಲ. ಶಿಬಾನಿ ದಂಡೇಕರ್ ಅವರು ಆಸ್ಟ್ರೇಲಿಯಾದ ಪ್ರಜೆಯಾಗಿದ್ದು ಅಲ್ಲಿನ ಓಸಿಐ ಕಾರ್ಡ್ ಹೊಂದಿದ್ದಾರೆ.

ತಮಿಳಿನ ಮತ್ತೊಬ್ಬ ಸ್ಟಾರ್ ನಟ ಅಜಿತ್ ಕುಮಾರ್ ಸಹ ಎನ್ಆರ್ಐ ಆಗಿದ್ದಾರೆ. ಅಜಿತ್ ಕುಮಾರ್ ಅವರೂ ಸಹ ತಮ್ಮ ಕುಟುಂಬದ ಜೊತೆಗೆ ದುಬೈನಲ್ಲಿ ನೆಲೆಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಮಾತ್ರ ಅವರು ಭಾರತಕ್ಕೆ ಬರುತ್ತಾರೆ. ಇನ್ನೂ ಹಲವು ನಟ-ನಟಿಯರು ಸಹ ನಾನ್ ರೆಸಿಡೆನ್ಸ್ ಇಂಡಿಯನ್ಸ್ ಪಟ್ಟಿಯಲ್ಲಿದ್ದಾರೆ.

ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ನಟಿ ಅನುಷ್ಕಾ ಶರ್ಮಾ ಹಾಗೂ ಅವರ ಪತಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಇಬ್ಬರೂ ನೆಲೆಸಿರುವುದು ಲಂಡನ್ನಲ್ಲಿ ಆದರೆ ಅವರು ಈಗಲೂ ಭಾರತೀಯ ಪ್ರಜೆಗಳೇ, ಆದರೆ ನಾನ್ ರೆಸಿಡೆನ್ಸ್ ಇಂಡಿಯನ್ಸ್ಗಳು.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



