ಏರ್ಪೋರ್ಟ್ನಲ್ಲಿ ಸಲ್ಮಾನ್ ಖಾನ್ ಅವರನ್ನು ತಡೆದಿದ್ದ ಸಿಐಎಸ್ಎಫ್ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?
Salman Khan: ಸಲ್ಮಾನ್ ಖಾನ್ ಅವರ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಿಐಎಸ್ಎಫ್ ಅಧಿಕಾರಿ ಸೋಮನಾಥ್ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಅವರಿಗೆ ತೊಂದರೆ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರ ಬೇಕಿದ್ದರೂ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿಬಿಡುತ್ತದೆ. ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿತ್ತು. ಮುಂಬೈ ವಿಮಾನ ನಿಲ್ದಾಣವನ್ನು (Mumbai Airport) ಪ್ರವೇಶಿಸುವಾಗ ಅಲ್ಲಿನ ಸಿಐಎಸ್ಎಫ್ (CISF) ಅಧಿಕಾರಿಯೊಬ್ಬರು ಸಲ್ಲು ಅವರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ವಿಡಿಯೋ ವೈರಲ್ (Viral Video) ಆದ ಬಳಿಕ ಸೋಮನಾಥ್ ಮೊಹಂತಿ ಎಂಬ ಆ ಅಧಿಕಾರಿ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದರು. ಆದರೆ ಅವರಿಗೆ ಈಗ ಸಂಕಷ್ಟ ಎದುರಾಗಿದೆ.
ಅಷ್ಟಕ್ಕೂ ಸೋಮನಾಥ್ ಮೊಹಂತಿ ಅವರು ಮಾಡಿದ ತಪ್ಪೇನು? ಈ ವಿಡಿಯೋ ವೈರಲ್ ಆದ ಬಳಿಕ ಕೆಲವು ಮಾಧ್ಯಮ ಸಂಸ್ಥೆಗಳಿಂದ ಅವರಿಗೆ ಫೋನ್ ಕರೆಗಳು ಬರಲು ಆರಂಭಿಸಿದವು. ಘಟನೆಗೆ ಸಂಬಂಧಿಸಿದಂತೆ ಅವರಿಂದ ಪ್ರತಿಕ್ರಿಯೆ ಪಡೆಯುವುದು ಮಾಧ್ಯಮ ಪ್ರತಿನಿಧಿಗಳ ಉದ್ದೇಶ ಆಗಿತ್ತು. ಆದರೆ ಅದೇ ಈಗ ಸೋಮನಾಥ್ ಮೊಹಂತಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ.
ಸಲ್ಮಾನ್ ಖಾನ್ ಅವರ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸೋಮನಾಥ್ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಸಿಐಎಸ್ಎಫ್ ಪ್ರೋಟೋಕಾಲ್ ಪ್ರಕಾರ ಅವರು ಮಾಧ್ಯಮಗಳ ಜೊತೆ ಈ ರೀತಿ ಮಾತುಕತೆ ನಡೆಸುವಂತಿರಲಿಲ್ಲ. ನಿಯಮ ಮೀರಿದ್ದರಿಂದ ಅವರ ಮೊಬೈಲ್ ಫೋನ್ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಸಲ್ಮಾನ್ ಖಾನ್ ಅವರು ‘ಟೈಗರ್ 3’ ಸಿನಿಮಾದ ಶೂಟಿಂಗ್ಗಾಗಿ ವಿದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಅವರು ಮುಂಬೈ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಭಿಮಾನಿಗಳು ಅಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಅವಸರದಲ್ಲಿ ಏರ್ಪೋರ್ಟ್ ಪ್ರವೇಶಿಸುತ್ತಿರುವ ಸಲ್ಲು ಅವರನ್ನು ಸೋಮನಾಥ್ ಮೊಹಂತಿ ಅವರು ತಡೆದು ನಿಲ್ಲಿಸಿದ್ದರು. ಹೈಪ್ರೊಫೈಲ್ ಸೆಲೆಬ್ರಿಟಿ ಎಂಬುದನ್ನೂ ಲೆಕ್ಕಿಸದೇ ಅವರ ಗುರುತಿನ ಚೀಟಿ ಮುಂತಾದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ನಂತರ ಒಳಗೆ ಹೋಗಲು ಅನುಮತಿ ನೀಡಿದರು.
View this post on Instagram
ಈ ವಿಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆದ ಬಳಿಕ ಅವರನ್ನು ರಿಯಲ್ ಹೀರೋ ಎಂದು ಜನರು ಹಾಡಿ ಕೊಂಡಾಡುತ್ತಿದ್ದಾರೆ. ಸೋಮನಾಥ್ ಮೊಹಂತಿ ಅವರ ಕರ್ತವ್ಯ ನಿಷ್ಠೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಸೋಮನಾಥ್ ಮೊಹಂತಿ ಅವರು ಪ್ರೋಟೋಕಾಲ್ ಉಲ್ಲಂಘಿಸಿದ್ದರಿಂದ ಹಿರಿಯ ಅಧಿಕಾರಿಗಳಿಗೆ ತಮ್ಮ ಮೊಬೈಲ್ ಒಪ್ಪಿಸಬೇಕಾದ ಸಂದರ್ಭ ಎದುರಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ:
‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್ ಖಾನ್ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್ ಕಳಿಸಿದ ಭೂಪ
ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್ಗೆ ಇದೆ ಒಂದು ಸಂಬಂಧ; ಏನದು?
Published On - 11:57 pm, Mon, 23 August 21