ಡಿಸೆಂಬರ್ 12ಕ್ಕೆ ಮತ್ತೆ ಬಿಡುಗಡೆ ಆಗಲಿದೆ ‘ಶೋಲೆ’: ಈ ಬಾರಿ ಏನು ವಿಶೇಷ?
ಡಿಸೆಂಬರ್ 12ರ ಆಸುಪಾಸಿನಲ್ಲಿ ಬಿಡುಗಡೆ ಆಗುವ ಹೊಸ ಸಿನಿಮಾಗಳಿಗೆ ‘ಶೋಲೆ’ ಪಕ್ಕಾ ಪೈಪೋಟಿ ನೀಡಲಿದೆ. 50 ವರ್ಷಗಳ ಹಿಂದಿನ ಈ ಸಿನಿಮಾಗೆ ಈಗಲೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಹೊಸ ಟ್ರೇಲರ್ ಗಮನ ಸೆಳೆದಿದೆ. ಧರ್ಮೇಂದ್ರ ಅವರ ನಿಧನದ ಹಿನ್ನೆಲೆಯಲ್ಲಿ ಮರು ಬಿಡುಗಡೆ ಆಗುತ್ತಿರುವ ‘ಶೋಲೆ’ ಬಗ್ಗೆ ಇಲ್ಲಿದೆ ಮಾಹಿತಿ..

ಸೂಪರ್ ಹಿಟ್ ‘ಶೋಲೆ’ ಸಿನಿಮಾ (Sholay Movie) ತೆರೆಕಂಡು 50 ವರ್ಷಗಳು ಕಳೆದಿವೆ. 1975ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಆಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ಒಂದು ಮೈಲಿಗಲ್ಲಾಗಿದೆ. ಧರ್ಮೇಂದ್ರ (Dharmendra), ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಅಮ್ಜದ್ ಖಾನ್ ಮುಂತಾದವರು ನಟಿಸಿರುವ ‘ಶೋಲೆ’ ಸಿನಿಮಾ ಈಗ ಮರು ಬಿಡುಗಡೆ ಆಗುತ್ತಿದೆ. ಡಿಸೆಂಬರ್ 12ರಂದು ಸಿನಿಮಾವನ್ನು ಪುನಃ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿಗೆ 4K ರೆಸಲ್ಯೂಷನ್ನಲ್ಲಿ ‘ಶೋಲೆ’ ಪ್ರದರ್ಶನ ಆಗಲಿದೆ.
ರಮೇಶ್ ಸಿಪ್ಪಿ ಅವರು ‘ಶೋಲೆ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಕಹಾನಿ ಇರುವ ಈ ಸಿನಿಮಾ ಈಗಲೂ ಎವರ್ಗ್ರೀನ್ ಆಗಿದೆ. ಈ ಚಿತ್ರ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ, ನಟ ಧರ್ಮೇಂದ್ರ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿಯೂ ‘ಶೋಲೆ’ ಮರು ಬಿಡುಗಡೆ ಆಗುತ್ತಿದೆ.
ಧರ್ಮೇಂದ್ರ ಅವರು ವಯೋಸಹಜ ಕಾಯಿಲೆಯಿಂದ ಇತ್ತೀಚೆಗೆ ವಿಧಿವಶರಾದರು. ಒಂದು ವೇಳೆ ಅವರು ಬದುಕಿದ್ದಿದ್ದರೆ ಇಡೀ ಡಿಸೆಂಬರ್ 8ಕ್ಕೆ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರ ಸ್ಮರಣಾರ್ಥ ಡಿಸೆಂಬರ್ 12ರಂದು 1500 ಚಿತ್ರಮಂದಿರಗಳಲ್ಲಿ ‘ಶೋಲೆ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಹೊಸ ವರ್ಷನ್ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
‘ಶೋಲೆ’ ಸಿನಿಮಾದ ಹೊಸ ಟ್ರೇಲರ್:
1975ರಲ್ಲಿ ‘ಶೋಲೆ’ ಸಿನಿಮಾ ಬಿಡುಗಡೆ ಆದಾಗ ಅದರ ಕ್ಲೈಮ್ಯಾಕ್ಸ್ ಬದಲಾವಣೆ ಮಾಡಲಾಗಿತ್ತು. ತುರ್ತು ಪರಿಸ್ಥಿತಿ ಸಮಯ ಆದ್ದರಿಂದ ಒರಿಜಿನಲ್ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿತ್ತು. ಈಗ ಈ ಸಿನಿಮಾದಲ್ಲಿ ಮೂಲ ಕ್ಲೈಮ್ಯಾಕ್ಸ್ ದೃಶ್ಯವೇ ಇರಲಿದೆ. 50 ವರ್ಷದ ಹಳೇ ಸಿನಿಮಾಗೆ ಹೊಸ ತಂತ್ರಜ್ಞಾನದ ಸ್ಪರ್ಶ ನೀಡಿ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: 50 ವರ್ಷಗಳ ಹಿಂದೆ ‘ಶೋಲೆ’ ಸಿನಿಮಾಗೆ 1.5 ಲಕ್ಷ ರೂ. ಸಂಭಾವನೆ ಪಡೆದಿದ್ದ ಧರ್ಮೇಂದ್ರ
ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿರುವ ಹೊಸ ಟ್ರೇಲರ್ ನೋಡಿದರೆ ಈಗ ‘ಶೋಲೆ’ ಸಿನಿಮಾಗೆ ಯಾವ ರೀತಿ ಆಧುನಿಕತೆಯ ಸ್ಪರ್ಧ ನೀಡಲಾಗಿದೆ ಎಂಬುದು ತಿಳಿಯುತ್ತದೆ. ಪ್ರತಿ ಫ್ರೇಮ್ನ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ‘ಟ್ರೇಲರ್ ಅದ್ಭುತವಾಗಿದೆ. ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬಂತಹ ಫೀಲ್ ನೀಡುತ್ತಿದೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




