Vicky Kaushal: ಭಾರತ- ಬಾಂಗ್ಲಾದೇಶ ಪಂದ್ಯದ ಸ್ಕೋರ್ ಬೋರ್ಡ್ನಲ್ಲಿ ವಿಕ್ಕಿ ಕೌಶಲ್ ಹೆಸರು!; ಏನಿದು ಸಮಾಚಾರ?
Under 19 World Cup 2022: ಬಾಲಿವುಡ್ ನಟ ವಿಕ್ಕಿ ಕೌಶಲ್ ಹೆಸರು ಅಂಡರ್ 19 ವಿಶ್ವಕಪ್ನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡದ ಸ್ಕೋರ್ ಕಾರ್ಡ್ನಲ್ಲಿ ಕಾಣಿಸಿಕೊಂಡಿದೆ. ಸದ್ಯ ಅಂತರ್ಜಾಲದಲ್ಲಿ ಈ ಚಿತ್ರ ವೈರಲ್ ಆಗಿದೆ.
ಬಾಲಿವುಡ್ನಲ್ಲಿ ನಟ ವಿಕ್ಕಿ ಕೌಶಲ್ (Vicky Kaushal) ಜನಪ್ರಿಯತೆ ಏರುತ್ತಿದೆ. ಮಾಸ್ ಹೀರೋ ಎನ್ನುವುದಕ್ಕಿಂತ ಪಾತ್ರ ಪ್ರಧಾನ ಚಿತ್ರಗಳ ಆಯ್ಕೆಯಿಂದ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಕತ್ರಿನಾ ಕೈಫ್ (Katrina Kaif) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವಿಕ್ಕಿ ಕೌಶಲ್ಗೆ ಸೋಷಿಯಲ್ ಮೀಡಿಯಾದಲ್ಲೂ ಫ್ಯಾನ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಅಭಿಮಾನಿಗಳು ವಿಕ್ಕಿ- ಕೌಶಲ್ ಬಗ್ಗೆ ಅಚ್ಚರಿಯ ವಿಚಾರವೊಂದನ್ನು ಗಮನಿಸಿದ್ದು, ಸಖತ್ ಸುದ್ದಿಯಾಗುತ್ತಿದೆ. ಅದೇನು ಅಂತೀರಾ? ವಿಕ್ಕಿ ಕೌಶಲ್ ಹೆಸರು ನಿನ್ನೆ (ಶನಿವಾರ) ನಡೆದ ಅಂಡರ್-19 ವಿಶ್ವಕಪ್ನ ಪಂದ್ಯದಲ್ಲಿ (Under- 19 World Cup 2022) ಕಾಣಿಸಿಕೊಂಡಿದೆ! ಭಾರತ ಹಾಗೂ ಬಾಂಗ್ಲಾದೇಶದ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆಸರು ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನಟ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಹೆಸರು ಸ್ಕೋರ್ ಕಾರ್ಡ್ನಲ್ಲಿ ಬರುವುದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಉತ್ತರ.
ವಿಕ್ಕಿ ಕೌಶಲ್ ಹೆಸರು ಭಾರತ ತಂಡದ ಸ್ಕೋರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಕಾಕತಾಳೀಯವಾಗಿ! ಹೌದು. ಭಾರತ ಅಂಡರ್ 19 ತಂಡದಲ್ಲಿ ವಿಕ್ಕಿ ಒಸ್ಟ್ವಾಲ್ ಹಾಗೂ ಕೌಶಲ್ ತಾಂಬೆ ಎಂಬ ಇಬ್ಬರು ಆಟಗಾರರಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಒಬ್ಬರ ಹಿಂದೆ ಮತ್ತೊಬ್ಬರು ವಿಕೆಟ್ ಪಡೆದಿದ್ದಾರೆ. ಸ್ಕೋರ್ ಕಾರ್ಡ್ನಲ್ಲಿ ಈ ಆಟಗಾರರ ಮೊದಲ ಹೆಸರನ್ನು ಹಾಕಲಾಗಿತ್ತು. ಇದರಂತೆ ವಿಕ್ಕಿ ಹಾಗೂ ಕೌಶಲ್ ಎಂದು ಹೆಸರು ಕಾಣಿಸಿಕೊಂಡಿತ್ತು.
ಈ ಕಾಕತಾಳೀಯ ಗಮನಿಸಿದ ಅಭಿಮಾನಿಗಳು ಸ್ಕ್ರೀನ್ಶಾಟ್ ತೆಗೆದು ಹಂಚಿಕೊಂಡಿದ್ದಾರೆ. ಇದನ್ನು ವಿಕ್ಕಿ ಕೌಶಲ್ ಕೂಡ ಗಮನಿಸಿದ್ದಾರೆ. ಇಂದು (ಭಾನುವಾರ) ಬೆಳಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರ ಹಂಚಿಕೊಂಡಿರುವ ಅವರು, ‘ಎಲ್ಲರ ಮೆಸೇಜ್ಗಳಿಗೆ ಧನ್ಯವಾದಗಳು. ಭಾರತ ಅಂಡರ್ 19 ತಂಡಕ್ಕೆ ಶುಭವಾಗಲಿ’ ಎಂದು ಬರೆದುಕೊಂಡಿದ್ದಾರೆ.
ವಿಕ್ಕಿ ಕೌಶಲ್ ಹಂಚಿಕೊಂಡ ಚಿತ್ರ:
ಭಾರತ ಅಂಡರ್ 19 ಕ್ರಿಕೆಟ್ ತಂಡ ಕ್ವಾರ್ಟರ್ ಫೈನಲ್ನಲ್ಲಿ ಬಾಂಗ್ಲಾದೇಶವನ್ನು ಎದುರಿಸಿತ್ತು. ಅದ್ಭುತ ಪ್ರದರ್ಶನ ನೀಡಿದ ತಂಡವು, 5 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಇನ್ನು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಎದುರಾಗಲಿವೆ. ಫೆಬ್ರವರಿ 2ರಂದು ಪಂದ್ಯ ನಡೆಯಲಿದೆ.
ಚಿತ್ರಗಳ ವಿಷಯಕ್ಕೆ ಬಂದರೆ ವಿಕ್ಕಿ ಕೌಶಲ್ ಇತ್ತೀಚೆಗಷ್ಟೇ ಇಂದೋರ್ನಲ್ಲಿ ತಮ್ಮ ಮುಂದಿನ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಸಾರಾ ಅಲಿ ಖಾನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಚಿತ್ರದ ಹೆಸರಿನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ವಿಕ್ಕಿ ಕೌಶಲ್ ಸದ್ಯ ಸಖತ್ ಬ್ಯುಸಿಯಿರುವ ಬಾಲಿವುಡ್ ನಟರಲ್ಲಿ ಒಬ್ಬರು. ‘ಗೋವಿಂದ್ ನಾಮ್ ಮೇರಾ’ ಎಂಬ ಕಾಮಿಡಿ ಚಿತ್ರ, ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಚಿತ್ರಗಳ ಕೆಲಸಗಳು ನಡೆಯುತ್ತಿದ್ದು, ಈ ವರ್ಷ ತೆರೆಕಾಣುವ ನಿರೀಕ್ಷೆಗಳಿವೆ. ಇದಲ್ಲದೇ ಸ್ಯಾಮ್ ಬಹದ್ದೂರ್ ಚಿತ್ರದಲ್ಲೂ ವಿಕ್ಕಿ ಕೌಶಲ್ ಬಣ್ಣ ಹಚ್ಚುತ್ತಿದ್ದಾರೆ.
ಇದನ್ನೂ ಓದಿ:
‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್ ಗನ್ಮ್ಯಾನ್ ತೆರೆದಿಟ್ಟ ವಿವರಗಳು
ಒಂದೇ ಸಿನಿಮಾದಲ್ಲಿ ಸಲ್ಮಾನ್, ಶಾರುಖ್, ಹೃತಿಕ್; ‘ಅವೆಂಜರ್ಸ್ ಎಂಡ್ಗೇಮ್’ ರೀತಿ ಬಾಲಿವುಡ್ ಪ್ಲ್ಯಾನ್