Rahul Jain: ಖ್ಯಾತ ಗಾಯಕ, ರಿಯಾಲಿಟಿ ಶೋ ಸ್ಟಾರ್ ಮೇಲೆ ರೇಪ್ ಆರೋಪ; ಎಫ್ಐಆರ್ ದಾಖಲು
FIR against Rahul Jain: ‘ರಾಹುಲ್ ಜೈನ್ ಅವರು ನನ್ನನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡರು. ಕೆಲಸದ ನೆಪದಲ್ಲಿ ಅಪಾರ್ಟ್ಮೆಂಟ್ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದರು’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಆಗಾಗ ವರದಿ ಆಗುತ್ತಲೇ ಇರುತ್ತದೆ. ನಟ, ನಿರ್ಮಾಪಕ, ನಿರ್ದೇಶಕರು ಮಾತ್ರವಲ್ಲದೇ ಗಾಯಕರ ಮೇಲೂ ಆರೋಪ ಎದುರಾಗಿದ್ದುಂಟು. ಈಗ ಖ್ಯಾತ ಸಿಂಗರ್ ರಾಹುಲ್ ಜೈನ್ (Rahul Jain) ಕೂಡ ಆರೋಪ ಎದುರಿಸುವಂತಾಗಿದೆ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ ನಂತರ ಬಾಲಿವುಡ್ ಸಿನಿಮಾಗಳಲ್ಲಿ ಹಾಡುವ ಮೂಲಕ ಫೇಮಸ್ ಆಗಿರುವ ಅವರು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ಅಂದರೆ, ಆಗಸ್ಟ್ 11ರಂದು ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ದೂರನ್ನು ಆಧರಿಸಿ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಇದರಿಂದ ರಾಹುಲ್ ಜೈಲ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಸಂತ್ರಸ್ತ ಮಹಿಳೆಯು ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳಿಗೆ ಅವರು ಕಾಸ್ಟ್ಯೂಮ್ ಆಯ್ಕೆ ಮಾಡುತ್ತಾರೆ. ಅವರನ್ನು ಕೆಲಸದ ನೆಪದಲ್ಲಿ ತಮ್ಮ ಅಪಾರ್ಟ್ಮೆಂಟ್ಗೆ ಕರೆಸಿಕೊಂಡ ರಾಹುಲ್ ಜೈನ್ ಅವರು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತನಿಖೆ ಆರಂಭ ಆಗಿದೆ. ಐಪಿಸಿ ಸೆಕ್ಷನ್ 376, 323 ಹಾಗೂ 506ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
‘ನನ್ನನ್ನು ಇನ್ಸ್ಟಾಗ್ರಾಮ್ ಮೂಲಕ ಅವರು ಪರಿಚಯ ಮಾಡಿಕೊಂಡರು. ನನ್ನ ಕೆಲಸವನ್ನು ಹೊಗಳಿದರು. ಪರ್ಸನಲ್ ಸ್ಟೈಲಿಸ್ಟ್ ಆಗಿ ನೇಮಿಸಿಕೊಳ್ಳುವುದಾಗಿ ಹೇಳಿದರು. ಅದರ ಸಲುವಾಗಿ ಅಪಾರ್ಟ್ಮೆಂಟ್ಗೆ ಕರೆಸಿಕೊಂಡರು. ಬೆಡ್ ರೂಮ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದರು’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ರಾಹುಲ್ ಜೈನ್ ಅವರು ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಆ ಮಹಿಳೆ ಯಾರು ಎಂಬುದೇ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಅಂದಹಾಗೆ, ರಾಹುಲ್ ಜೈನ್ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ರೀತಿ ಕೇಸ್ ದಾಖಲಾಗಿತ್ತು.
‘ಈ ಮಹಿಳೆ ಯಾರು ಎಂಬುದು ನನಗೆ ತಿಳಿದಿಲ್ಲ. ಆಕೆ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಮತ್ತು ಆಧಾರ ರಹಿತ ಆಗಿವೆ. ಈ ಹಿಂದೆ ಕೂಡ ಒಬ್ಬರು ನನ್ನ ಮೇಲೆ ಆರೋಪ ಮಾಡಿದ್ದರು. ಆ ಕೇಸ್ನಲ್ಲಿ ನನಗೆ ನ್ಯಾಯ ಸಿಕ್ಕಿತ್ತು. ಅಂದು ಆರೋಪ ಮಾಡಿದ ಮಹಿಳೆಯ ಜೊತೆಗೆ ಈಕೆಗೂ ಸಂಪರ್ಕ ಇರಬಹುದು’ ಎಂದು ರಾಹುಲ್ ಜೈನ್ ಹೇಳಿಕೆ ನೀಡಿದ್ದಾರೆ. ಈವರೆಗೂ ಅವರ ಬಂಧನವಾಗಿಲ್ಲ ಎಂದು ವರದಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ