ಆಸ್ಕರ್ ರೇಸ್‌ನಿಂದ ‘ಹನುಮಾನ್ ಅಂಶ್’ ಹೊರಗೆ: ಅವಕಾಶ ತಪ್ಪಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕಿ

ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 205 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರಕ್ಕೆ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಹೋಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಆಸ್ಕರ್ ರೇಸ್‌ನಿಂದ ‘ಹನುಮಾನ್ ಅಂಶ್’ ಹೊರಗೆ: ಅವಕಾಶ ತಪ್ಪಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕಿ
Hanuman Ansh Movie Still

Updated on: Sep 13, 2026 | 3:09 PM

ಈ ವರ್ಷದ ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ್’ ಚಿತ್ರವು ಅಚ್ಚರಿಯ ಗೆಲುವು ಕಂಡಿದೆ. ಆದರೆ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್’ ವಿಭಾಗಕ್ಕೆ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸಲು ಸಲ್ಲಿಸಬೇಕಿದ್ದ ಗಡುವನ್ನು ತಪ್ಪಿಸಿಕೊಂಡಿದೆ. ಚಿತ್ರದ ಅಂತಾರಾಷ್ಟ್ರೀಯ ಬಿಡುಗಡೆ, ತೆಲುಗು ಡಬ್ಬಿಂಗ್ ಮತ್ತು ಇತರ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಗಡುವಿನ ಅರಿವಿರಲಿಲ್ಲ ಎಂದು ಚಿತ್ರದ ನಿರ್ಮಾಪಕಿ ನಮ್ರತಾ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿ ನಿರ್ಮಿಸಲಾದ ಈ ಸಿನಿಮಾ, ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ 205 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.

‘ಬಾಲಿವುಡ್ ಹಂಗಾಮಾ’ ಜೊತೆ ಮಾತನಾಡಿದ ನಿರ್ಮಾಪಕಿ ನಮ್ರತಾ, ಆಸ್ಕರ್ ಕಮಿಟಿಗೆ ಸಿನಿಮಾ ಅರ್ಜಿಸಲ್ಲಿಸುವ ಕೊನೆಯ ದಿನಾಂಕ ಮುಗಿದುಹೋಗಿದೆ ಎಂದು ಬಹಿರಂಗಪಡಿಸಿದ್ದಾರೆ. ‘ಆಸ್ಕರ್ ಆಫೀಶಿಯಲ್ ಎಂಟ್ರಿಗೆ ಅರ್ಜಿ ಸಲ್ಲಿಸುವ ಡೆಡ್‌ಲೈನ್ ನಮಗೆ ತಪ್ಪಿಹೋಯಿತು. ಸಾಲು ಸಾಲು ಕರೆಗಳು ಬಂದವು. ನೀವು ಯಾಕೆ ಸಿನಿಮಾ ಸಬ್ಮಿಟ್ ಮಾಡಿಲ್ಲ ಎಂದು ಕೇಳಿದಾಗಲೇ ನಮಗೆ ವಿಷಯ ಗೊತ್ತಾಗಿದ್ದು. ನಮಗೆ ಈ ಗಡುವಿನ ಬಗ್ಗೆ ಮಾಹಿತಿಯೇ ಇರಲಿಲ್ಲ. ಪ್ರಸ್ತುತ ನಾವು ಸಾಲು ಸಾಲು ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆ ಮತ್ತು ನಮ್ಮದು ಅತ್ಯಂತ ಸಣ್ಣ ತಂಡವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಹನುಮಾನ್ ಅಂಶ್’ ತಂಡವು ತೆಲುಗು ಡಬ್ಬಿಂಗ್, ಇತರ ಭಾಷೆಗಳ ಬಿಡುಗಡೆಯ ಪ್ಲಾನಿಂಗ್ ಹಾಗೂ ವಿಶೇಷ ಚೇತನರಿಗಾಗಿ ಸಿನಿಮಾವನ್ನು ಸುಲಭವಾಗಿ ತಲುಪಿಸುವ ಕೆಲಸಗಳಲ್ಲಿ ನಿರತವಾಗಿದೆ. ‘ಮೊದಲು ತೆಲುಗು ಡಬ್ಬಿಂಗ್ ಮುಗಿಸಿದ್ದೇವೆ. ನಂತರ ಇತರ ಭಾಷೆಗಳ ಕೆಲಸ ನಡೆಯಲಿದೆ. ಕಲಾವಿದರು ಮತ್ತು ನಿರ್ದೇಶಕ ವಿಶಾಲ್ ಚತುರ್ವೇದಿ ಪ್ರಚಾರ ಪ್ರವಾಸದಲ್ಲಿದ್ದಾರೆ. ಆಫೀಸ್‌ನಲ್ಲಿ ಯಾರೂ ಇಲ್ಲ’ ಎಂದು ನಮ್ರತಾ ವಿವರಿಸಿದ್ದಾರೆ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ಸೆಪ್ಟೆಂಬರ್ 11ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಿರುವ ‘ಹನುಮಾನ್ ಅಂಶ್’ ಚಿತ್ರವು ಸೆಪ್ಟೆಂಬರ್ 18ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: 200 ಕೋಟಿ ದಾಟಿದ ‘ಹನುಮಾನ್ ಅಂಶ್’ ಗಳಿಕೆ, 100 ಪಟ್ಟು ಲಾಭ

ಈ ಚಿತ್ರವನ್ನು ಆರಂಭದಿಂದಲೇ ಮೂರು ಭಾಗಗಳ ಸರಣಿಯಾಗಿ ಪ್ಲಾನ್ ಮಾಡಲಾಗಿತ್ತು ಎಂದು ನಿರ್ಮಾಪಕರು ತಿಳಿಸಿದ್ದಾರೆ. ಮೊದಲ ಭಾಗದಲ್ಲಿ ನೀಮ್ ಕರೋಲಿ ಬಾಬಾ ಅವರ ಆರಂಭಿಕ ದಿನಗಳು ಮತ್ತು ಉತ್ತರಾಖಂಡದ ಕೈಂಚಿ ಧಾಮದೊಂದಿಗಿನ ಸಂಪರ್ಕವನ್ನು ತೋರಿಸಲಾಗಿದ್ದರೆ, ಎರಡನೇ ಭಾಗದಲ್ಲಿ ಅವರ ಜೀವನದ ಮತ್ತಷ್ಟು ಆಳವಾದ ಅಧ್ಯಾಯಗಳನ್ನು ಒಳಗೊಳ್ಳಲಿದೆ. ಎರಡನೇ ಭಾಗದ ಕಥೆಯು ಬಾಬಾರ ಜನ್ಮಸ್ಥಳವಾದ ಫಿರೋಜಾಬಾದ್‌ನಿಂದ ಪ್ರಾರಂಭವಾಗಿ ಆಗ್ರಾ, ಮಥುರಾ ಮುಂತಾದ ಸ್ಥಳಗಳನ್ನು ಒಳಗೊಳ್ಳಲಿದೆ.

ಸತತ ಪ್ರಚಾರ ಮತ್ತು ಕೆಲಸದ ಒತ್ತಡದಿಂದಾಗಿ ಎರಡನೇ ಭಾಗದ ಕೆಲಸ ಪ್ರಾರಂಭವಾಗಲು ಸ್ವಲ್ಪ ಸಮಯ ಹಿಡಿಯಲಿದೆ. ‘ಇನ್ನೂ ಏನೂ ಬರೆದಿಲ್ಲ. ಮುಂದಿನ ಕೆಲಸ ಆರಂಭಿಸಲು ನಮಗೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ನಾವು ವಿರಾಮವನ್ನೇ ತೆಗೆದುಕೊಂಡಿಲ್ಲ, ಹಾಗಾಗಿ ಕನಿಷ್ಠ 90 ದಿನಗಳ ಬ್ರೇಕ್ ಅಗತ್ಯವಿದೆ’ ಎಂದು ನಮ್ರತಾ ಹೇಳಿದ್ದಾರೆ. ಮೂರನೇ ಭಾಗವು ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗಲಿದ್ದು, ಭಾರತದ ಹೊರಗೆ ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಪ್ರಭಾವ ಮತ್ತು ಅವರ ಅಂತಾರಾಷ್ಟ್ರೀಯ ಅನುಯಾಯಿಗಳ ಕಥೆಯನ್ನು ತೆರೆದಿಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us