‘ಫೈಟರ್’ ಸಿನಿಮಾ ಗಲ್ಫ್ ದೇಶಗಳಲ್ಲಿ ನಿಷೇಧ: ಕಾರಣ?
Fighter Movie: ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾಕ್ಕೆ ಗಲ್ಫ್ ದೇಶಗಳಲ್ಲಿ ನಿಷೇಧ ಹೇರಲಾಗಿದೆ.
ಹೃತಿಕ್ ರೋಷನ್ (Hrithik Roshan) ದೀಪಿಕಾ ಪಡುಕೋಣೆ (Deepika Padukone) ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ‘ಫೈಟರ್’ ಸಿನಿಮಾ ನಾಳೆ (ಜನವರಿ 25) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಆಕ್ಷನ್ ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ. ಈ ಸಿನಿಮಾ ಸಹ ಬಾಲಿವುಡ್ನ ಮತ್ತೊಂದು ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಚಿತ್ರತಂಡಕ್ಕೆ ದೊಡ್ಡ ಹಿನ್ನಡೆಯೊಂದು ಎದುರಾಗಿದೆ. ಸಿನಿಮಾದ ಮೇಲೆ ಗಲ್ಫ್ ದೇಶಗಳಲ್ಲಿ ನಿಷೇಧ ಹೇರಲಾಗಿದೆ.
‘ಫೈಟರ್’ ಸಿನಿಮಾವನ್ನು ಗಲ್ಫ್ ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಯುಎಇ ನಲ್ಲಿ ಮಾತ್ರವೇ ಕೆಲವು ಷರತ್ತುಗಳೊಂದಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಲ್ಫ್ ದೇಶಗಳಾದ ಬಹ್ರೇನ್, ಕುವೈತ್, ಒಮಾನ್, ಖತಾರ್, ಸೌದಿ ಅರೆಬಿಯಾಗಳಲ್ಲಿ ‘ಫೈಟರ್’ ಸಿನಿಮಾದ ಪ್ರದರ್ಶಕ್ಕೆ ನಿಷೇಧ ಹೇರಲಾಗಿದೆ. ಆದರೆ ಭಾರತೀಯರು ಹೆಚ್ಚಿಗಿರುವ ಯುಎಇನಲ್ಲಿ ಪಿಜಿ15 ಪ್ರಮಾಣಪತ್ರದೊಂದಿಗೆ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯುಎಇ ಹೊರತಾಗಿ ಇತರೆ ಗಲ್ಫ್ ದೇಶಗಳಲ್ಲಿ ಫೈಟರ್ ಸಿನಿಮಾ ನಿಷೇಧಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ‘ಫೈಟರ್’ ಸಿನಿಮಾ ಭಾರತೀಯ ವಾಯುಸೇನೆಯ ಶೌರ್ಯ, ಸಾಹಸ ಸಾರುವ ಕತೆ ಒಳಗೊಂಡಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನಿ ಸೈನ್ಯವನ್ನು, ಅಲ್ಲಿನ ರಾಜಕಾರಣಿಗಳನ್ನು ಖಳರಂತೆ ತೋರಿಸಲಾಗಿದೆ. ಪಾಕಿಸ್ತಾನದೊಟ್ಟಿಗೆ ಸೌಹಾರ್ಧ ಸಂಬಂಧವನ್ನು ಬಹುತೇಕ ಗಲ್ಫ್ ರಾಷ್ಟ್ರಗಳು ಹೊಂದಿರುವ ಕಾರಣದಿಂದ ಹಾಗೂ ಎರಡು ನೆರೆ ರಾಷ್ಟ್ರಗಳ ನಡುವೆ ದ್ವೇಷ ಉಂಟು ಮಾಡುವ ಕತೆಯನ್ನು ಒಳಗೊಂಡಿರುವ ಕಾರಣಕ್ಕೆ ಸಿನಿಮಾವನ್ನು ನಿಷೇಧಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:ಕನ್ನಡ ಸಿನಿಮಾ ಮಾಡಿದ್ದ ದೀಪಿಕಾ ಪಡುಕೋಣೆಗೆ ಬಾಲಿವುಡ್ ಆಫರ್ ಸಿಕ್ಕಿದ್ದು ಹೇಗೆ?
ಗಲ್ಫ್ ದೇಶಗಳಲ್ಲಿ ಭಾರತದ ಸಿನಿಮಾಗಳನ್ನು ನಿಷೇಧಿಸುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಗಲ್ಫ್ ದೇಶಗಳು ನಿಷೇಧ ಹೇರಿದ್ದವು. ‘ಫೈಟರ್’ ರೀತಿಯ ಕತೆಯ ಕೆಲವು ಅಂಶಗಳನ್ನು ಹೊಂದಿದ್ದ ತಮಿಳಿನ ‘ಬೀಸ್ಟ್’ ಸಿನಿಮಾಕ್ಕೂ ನಿಷೇಧ ಎದುರಾಗಿತ್ತು. ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಮ್’, ದುಲ್ಕರ್ ಸಲ್ಮಾನ್ ನಟನೆಯ ‘ಕುರುಪ್’ ಇತ್ತೀಚೆಗೆ ಗಲ್ಫ್ ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಭಾರತದ ಪ್ರಮುಖ ಸಿನಿಮಾಗಳು.
ಗಲ್ಫ್ ದೇಶಗಳು ಭಾರತದ ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ. ಭಾರತದ ಹಲವು ಸಿನಿಮಾಗಳು ಗಲ್ಫ್ ದೇಶಗಳಲ್ಲಿ ಉತ್ತಮ ಪ್ರದರ್ಶನ ಕಂಡು, ಒಳ್ಳೆಯ ಮೊತ್ತವನ್ನು ಸಹ ಗಳಿಸಿವೆ. ಗಲ್ಫ್ ದೇಶಗಳಲ್ಲಿ ಅದ್ಭುತ ಪ್ರದರ್ಶನ ಕಂಡ ಇತ್ತೀಚೆಗಿನ ಸಿನಿಮಾ ಶಾರುಖ್ ಖಾನ್ ನಟನೆಯ ‘ಪಠಾಣ್’. ಈ ಸಿನಿಮಾ ಗಲ್ಫ್ ದೇಶಗಳಲ್ಲಿ 125 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಈಗ ‘ಫೈಟರ್’ ಗಲ್ಫ್ ದೇಶಗಳಲ್ಲಿ ಪ್ರದರ್ಶನ ಆಗದೇ ಇರುವ ಕಾರಣ ದೊಡ್ಡ ಮೊತ್ತದ ಗಳಿಕೆಯನ್ನು ಅದು ಕಳೆದುಕೊಳ್ಳಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ