‘ದುಬೈಗೆ ಹೋಗಿ ಬರುತ್ತೇನೆ, ಅವಕಾಶ ನೀಡಿ’; ಕೋರ್ಟ್ ಮುಂದೆ ಅಲವತ್ತುಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ದುಬೈನಲ್ಲಿ ನಡೆಯುತ್ತಿದೆ. ಈ ಅವಾರ್ಡ್​ ಫಂಕ್ಷನ್​ಗೆ ಜಾಕ್ವೆಲಿನ್​ ಅವರಿಗೂ ಆಮಂತ್ರಣ ಇದೆ. ಆದರೆ, ಅವರು ತನಿಖೆ ಎದುರಿಸುತ್ತಿರುವುದರಿಂದ ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ.

‘ದುಬೈಗೆ ಹೋಗಿ ಬರುತ್ತೇನೆ, ಅವಕಾಶ ನೀಡಿ’; ಕೋರ್ಟ್ ಮುಂದೆ ಅಲವತ್ತುಕೊಂಡ ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್
Follow us
| Updated By: ರಾಜೇಶ್ ದುಗ್ಗುಮನೆ

Updated on:May 12, 2022 | 2:54 PM

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು (Jacqueline Fernandez) ಇತ್ತೀಚೆಗೆ ವೈಯಕ್ತಿಕ ಜೀವನದ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಮಾಡಿಕೊಂಡಿರುವ ಎಡವಟ್ಟಿನಿಂದ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಉದ್ಯಮಿಗಳಿಗೆ ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜತೆ ಜಾಕ್ವೆಲಿನ್ ನಿಕಟ ಸಂಪರ್ಕ ಹೊಂದಿದ್ದರು. ಉದ್ಯಮಿಗಳ ವಂಚನೆ ಪ್ರಕರಣದಲ್ಲಿ ಸುಕೇಶ್​ ಜತೆ ಇವರೂ ಶಾಮಿಲಾಗಿದ್ದಾರಾ ಎನ್ನುವ ಪ್ರಶ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮೂಡಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಅವರಿಗೆ ಸಂಬಂಧಿಸಿದ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರು ದೆಹಲಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ವಿದೇಶಕ್ಕೆ ತೆರಳಲು ಅವಕಾಶ ಕೋರಿ ಅವರು ಮನವಿ ಸಲ್ಲಿಕೆ ಮಾಡಿದ್ದಾರೆ.

ಸಾಮಾನ್ಯವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾದರೆ ಅವರ ಪಾಸ್​ಪೋರ್ಟ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಒಂದೊಮ್ಮೆ ಅವರು ವಿದೇಶಕ್ಕೆ ತೆರಳಿದರೆ ಮತ್ತೆ ಅವರು ಹಿಂದಿರುಗದೆ ಇರಬಹುದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ. ಅದೇ ರೀತಿ ಜಾಕ್ವೆಲಿನ್​ಗೆ ವಿದೇಶಕ್ಕೆ ತೆರಳುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಈ ಮೊದಲು ವಿದೇಶಕ್ಕೆ ಹೊರಟಿದ್ದ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಈಗ ಜಾಕ್ವೆಲಿನ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ದುಬೈನಲ್ಲಿ ನಡೆಯುತ್ತಿದೆ. ಈ ಅವಾರ್ಡ್​ ಫಂಕ್ಷನ್​ಗೆ ಜಾಕ್ವೆಲಿನ್​ ಅವರಿಗೂ ಆಮಂತ್ರಣ ಇದೆ. ಆದರೆ, ಅವರು ತನಿಖೆ ಎದುರಿಸುತ್ತಿರುವುದರಿಂದ ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ. ಹೀಗಾಗಿ, ದೆಹಲಿ ಕೋರ್ಟ್​ಗೆ ಜಾಕ್ವೆಲಿನ್ ವಿಶೇಷ ಮನವಿ ಸಲ್ಲಿಕೆ ಮಾಡಿದ್ದಾರೆ. ಅವಾರ್ಡ್​ ಫಂಕ್ಷನ್ ನಿಮಿತ್ತ 15 ದಿನ ದುಬೈಗೆ ತೆರಳಲು ಅವಕಾಶ ಕೇಳಿದ್ದಾರೆ. ಅಲ್ಲದೆ, ಫ್ರಾನ್ಸ್ ಹಾಗೂ ನೇಪಾಳಕ್ಕೆ ತೆರಳಲೂ ಅನುಮತಿ ನೀಡಬೇಕು ಎಂದು ಅವರು ಕೋರಿದ್ದಾರೆ. ಈ ಬಗ್ಗೆ ಕೋರ್ಟ್ ಯಾವ ರೀತಿಯ ಆದೇಶ ಹೊರಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ
Image
Jacqueline Fernandez: ವಿಶೇಷ ಗೆಟಪ್​ನಲ್ಲಿ ಮಿಂಚಿದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್
Image
Jacqueline Fernandez: ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಮನಮೋಹಕ ಫೋಟೋಗಳು ಇಲ್ಲಿವೆ
Image
Jacqueline Fernandez: ಹೊಸ ಗೆಟಪ್​ನಲ್ಲಿ ಜಾಕ್ವೆಲಿನ್; ವಿಕ್ರಾಂತ್ ರೋಣ ಬೆಡಗಿಯ ಫೋಟೋಗಳು ವೈರಲ್
Image
ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

ಸುಕೇಶ್ ಕಡೆಯಿಂದ ಜಾಕ್ವೆಲಿನ್​ಗೆ ಸಾಕಷ್ಟು ದುಬಾರಿ ಉಡುಗೊರೆಗಳು ಸಿಕ್ಕಿದ್ದವು. ಇದನ್ನು ಇತ್ತೀಚೆಗೆ ಇಡಿ ವಶಕ್ಕೆ ಪಡೆದಿದೆ. ಜಾಕ್ವೆಲಿನ್​ ಓಡಾಟಕ್ಕೆ ಸುಕೇಶ್​ ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಿದ್ದ ಎಂಬುದಾಗಿ ವರದಿ ಆಗಿತ್ತು.

ಸುಕೇಶ್​ ಚಂದ್ರಶೇಖರ್​ ಮತ್ತು ಜಾಕ್ವೆಲಿನ್​​ ಫರ್ನಾಂಡಿಸ್​ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸುಕೇಶ್​ ಚಂದ್ರಶೇಖರ್ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ಈ ಮೊದಲೇ ಮುಟ್ಟುಗೋಲು ಹಾಕಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. 

Published On - 2:53 pm, Thu, 12 May 22