AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಕ್ಸಸ್ ಮೀಟ್​ಗೂ ನಯನತಾರಾ ಗೈರು: ಕಾರಣ ತಿಳಿಸಿದ ಶಾರುಖ್ ಖಾನ್

Jawan: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಪೋಸ್ಟ್ ರಿಲೀಸ್ ಇವೆಂಟ್ ಒಂದನ್ನು ಶಾರುಖ್ ಖಾನ್ ಆಯೋಜಿಸಿದ್ದರು. ಇಡೀಯ ಚಿತ್ರತಂಡಕ್ಕೆ ಶಾರುಖ್ ಖಾನ್ ಧನ್ಯವಾದ ಹೇಳಿದರು.

'ಜವಾನ್' ಸಕ್ಸಸ್ ಮೀಟ್​ಗೂ ನಯನತಾರಾ ಗೈರು: ಕಾರಣ ತಿಳಿಸಿದ ಶಾರುಖ್ ಖಾನ್
ಜವಾನ್
ಮಂಜುನಾಥ ಸಿ.
|

Updated on: Sep 15, 2023 | 9:27 PM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಬಹಳ ದೊಡ್ಡ ಯಶಸ್ಸು ಗಳಿಸಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್​ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಸಿನಿಮಾ ಗೆದ್ದ ಖುಷಿಯಲ್ಲಿ ನಿರ್ಮಾಪಕರೂ ಆಗಿರುವ ಶಾರುಖ್ ಖಾನ್ ಇಂದು (ಸೆಪ್ಟೆಂಬರ್ 15) ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದರು. ಅಭಿಮಾನಿಗಳು, ಮಾಧ್ಯಮಗಳ ಮುಂದೆ ‘ಜವಾನ್’ ಸಿನಿಮಾದ ಹಲವು ಸಂಗತಿಗಳನ್ನು ಹಂಚಿಕೊಂಡರು, ಜೊತೆಗೆ ಸಿನಿಮಾವನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆದರೆ ಈ ಕಾರ್ಯಕ್ರಮಕ್ಕೂ ನಟಿ ನಯನತಾರಾ ಗೈರಾಗಿದ್ದರು.

‘ಜವಾನ್’ ಸಿನಿಮಾ ನನ್ನ ಪಾಲಿಗೆ ಕಲಿಕೆಯಾಗಿತ್ತು. ನಾನು ಬಹಳ ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳ ದೊಡ್ಡ ಅಭಿಮಾನಿಯಾಗಿದ್ದೆ. ಭಾಷೆ ಬರದಿದ್ದರೂ ಸಹ ದಕ್ಷಿಣದ ಸಿನಿಮಾಗಳನ್ನು ನೋಡುತ್ತಿದ್ದೆ. ಅಲ್ಲಿನ ಕಲಾವಿದರೊಟ್ಟಿಗೆ ಒಳ್ಳೆಯ ಬಂಧ ಹೊಂದಿದ್ದೇನೆ, ಈ ಸಿನಿಮಾ ಮೂಲಕ ಅಲ್ಲಿನ ಪ್ರೇಕ್ಷಕರೊಟ್ಟಿಗೆ ಬಂಧ ಹೊಂದಲು ಸಾಧ್ಯವಾಯಿತು” ಎಂದರು. ಸಿನಿಮಾದಲ್ಲಿ ಕೆಲಸ ಮಾಡಿದ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಸೇರಿದಂತೆ ಪ್ರತಿಯೊಬ್ಬರಿಗೂ ಶಾರುಖ್ ಖಾನ್ ಧನ್ಯವಾದಗಳನ್ನು ತಿಳಿಸಿದರು.

ದೀಪಿಕಾ ಪಡುಕೋಣೆ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು, ”ನಾನು ಈ ಸಿನಿಮಾವನ್ನು ಕೇವಲ ಶಾರುಖ್ ಖಾನ್ ಮೇಲಿನ ಪ್ರೀತಿಯಿಂದಾಗಿ ಮಾಡಿದೆ ಅಷ್ಟೆ. ಈ ಸಿನಿಮಾದಲ್ಲಿ ತಾಯಿಯ ಪಾತ್ರ ನನ್ನದಾಗಿತ್ತು, ಆದರೆ ಆ ಬಗ್ಗೆ ನಾನು ಯೋಚನೆ ಮಾಡಲಿಲ್ಲ. ನಾನು ಎಂದೂ ಎಂಥಹಾ ಪಾತ್ರ ಎಂದು ಯೋಚಿಸುವುದಿಲ್ಲ ಬದಲಿಗೆ ಆ ಪಾತ್ರದ ಉದ್ದೇಶವೇನು ಎಂಬುದಷ್ಟೆ ನೋಡುತ್ತೇನೆ” ಎಂದರು.

ಇದನ್ನೂ ಓದಿ:‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿನೂ ಪಡೆದಿಲ್ಲ ದೀಪಿಕಾ ಪಡುಕೋಣೆ; ಕಾರಣವೇನು?

ವಿಜಯ್ ಸೇತುಪತಿ ಮಾತನಾಡಿ, ”ಶಾರುಖ್ ಖಾನ್ ಬಹಳ ದೊಡ್ಡ ಕಲಾವಿದರು. ಕೇವಲ ಅವರ ಹೆಸರಷ್ಟೆ ಸಾಕು ಸಿನಿಮಾ ನೋಡಲು. ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ದೊರೆತದ್ದು ಬಹಳ ದೊಡ್ಡ ಖುಷಿಯ ಸಂಗತಿಗಳಲ್ಲಿ ಒಂದು. ಅವರ ಹೆಸರೇ ಸಾಕು ಅದನ್ನು ಅಪ್ಪಿಕೊಂಡಿರಬಹುದು ಅಷ್ಟು ಅದ್ಭುತವಾದ ವ್ಯಕ್ತಿ ಅವರು. ‘ಜವಾನ್’ ಸಿನಿಮಾಕ್ಕೆ ಚೆನ್ನೈನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಹಲವಾರು ಜನರಿಗೆ ಟಿಕೆಟ್ ಸಹ ಸಿಗಲಿಲ್ಲ. ಶಾರುಖ್ ಖಾನ್ ಎಂದರೆ ಅಷ್ಟು ಪ್ರೀತಿ ಅಲ್ಲಿನ ಜನರಿಗೆ” ಎಂದರು.

ಕಾರ್ಯಕ್ರಮಕ್ಕೆ ಬರಲಾಗದಿದ್ದ ನಯನತಾರಾ ವಿಡಿಯೋ ಸಂದೇಶವನ್ನು ಕಳಿಸಿದ್ದರು. ಸಹಜವಾಗಿಯೇ ಚಿತ್ರತಂಡದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆದರೆ ನಯನತಾರಾ ಕಾರ್ಯಕ್ರಮಕ್ಕೆ ಬಾರದೇ ಇದ್ದುದ್ದಕ್ಕೆ ಕಾರಣ ತಿಳಿಸಿದ ಶಾರುಖ್ ಖಾನ್, ನಯನತಾರಾ ತಾಯಿಯ ಹುಟ್ಟುಹಬ್ಬ ಇರುವ ಕಾರಣ ಅವರು ಬರಲಾಗಲಿಲ್ಲ, ಅವರ ತಾಯಿಗೆ ನನ್ನ ಪ್ರೀತಿಪೂರ್ವಕ ಅಪ್ಪುಗೆಗಳು ಎಂದರು. ಚೆನ್ನೈನಲ್ಲಿ ನಡೆದಿದ್ದ ಪ್ರೀ ರಿಲೀಸ್ ಇವೆಂಟ್​ಗೂ ಸಹ ನಯನತಾರಾ ಗೈರಾಗಿದ್ದರು.

ಅಟ್ಲಿ ಮಾತನಾಡಿ, ‘ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಇಬ್ಬರು ತೆರೆಯ ಮೇಲೆ ಅದ್ಭುತವಾಗಿ ಕಾಣುತ್ತಾರೆ. ಅವರಿಗೆ ಒಂದು ಸಾಧಾರಣ ಸನ್ನಿವೇಶ ಸೃಷ್ಟಿಸಿ ಕ್ಯಾಮೆರಾ ಮುಂದೆ ನಿಲ್ಲಿಸುವುದಷ್ಟೆ ನನ್ನ ಕೆಲಸವಾಗಿತ್ತು, ಇನ್ನುಳಿದದ್ದನ್ನೆಲ್ಲ ಅವರೇ ಮಾಡಿಬಿಟ್ಟರು. ಇಬ್ಬರೂ ಅದ್ಭುತ ವ್ಯಕ್ತಿಗಳು, ಅದ್ಭುತವಾದ ನಟರು, ಅವರಿಬ್ಬರ ನಡುವಿನ ಕೆಮಿಸ್ಟ್ರಿ ಅದ್ಭುತವಾದುದು ಹಾಗಾಗಿ ತೆರೆಯ ಮೇಲೆ ಅವರ ನಟನೆಯ ದೃಶ್ಯಗಳು ಅಷ್ಟು ಅದ್ಭುತವಾಗಿ ಮೂಡಿಬಂದಿವೆ” ಎಂದರು. ಮಾತ್ರವಲ್ಲದೆ, ‘ಜವಾನ್’ ಸಿನಿಮಾ ನನ್ನ ಕಡೆಯಿಂದ ಶಾರುಖ್ ಖಾನ್ ಅವರಿಗೆ ನೀಡಿರುವ ಪ್ರೇಮಪತ್ರ ಎಂದರು.

ಸೆಪ್ಟೆಂಬರ್ 7 ರಂದು ಬಿಡುಗಡೆ ಆಗಿದ್ದ ‘ಜವಾನ್’ ಸಿನಿಮಾ ಭಾರಿ ಹಿಟ್ ಆಗಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಬೇರೆ-ಬೇರೆ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ, ಮಹಿಳೆಯರ ಸಣ್ಣ ಪಡೆಯೊಂದನ್ನು ಕಟ್ಟಿಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡುವ ಪಾತ್ರ ಅವರದ್ದು. ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆಯದ್ದು ಅತಿಥಿ ಪಾತ್ರ. ಸಿನಿಮಾದಲ್ಲಿ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಸೇರಿದಂತೆ ಇನ್ನೂ ಕೆಲವರು ನಟಿಸಿದ್ದಾರೆ. ಅನಿರುದ್ದ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ