‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್​ ಅಬ್ರಾಹಂ

|

Updated on: Aug 02, 2024 | 9:44 PM

‘ವೇದಾ’ ಸಿನಿಮಾದಲ್ಲಿ ಜಾನ್​ ಅಬ್ರಾಹಂ, ಶಾರ್ವರಿ ವಾಘ್ ಮುಂತಾದ ನಟರು ಅಭಿನಯಿಸಿದ್ದಾರೆ. ಆ.15ರಂದು ತೆರೆಕಾಣಲಿರುವ ಈ ಸಿನಿಮಾ ಕೂಡ ಜಾನ್​ ಅಬ್ರಾಹಂ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂದು ವರದಿಗಾರರೊಬ್ಬರು ಟೀಕಿಸಿದ್ದಾರೆ. ಸಿನಿಮಾ ನೋಡುವುದಕ್ಕೂ ಮುನ್ನವೇ ಈ ರೀತಿ ಟ್ರೋಲ್​ ಮಾಡಿದ್ದನ್ನು ಜಾನ್​ ಅಬ್ರಾಹಂ ಅವರು ಸಹಿಸಿಕೊಂಡಿಲ್ಲ. ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್​ ಅಬ್ರಾಹಂ
ಜಾನ್ ಅಬ್ರಾಹಂ
Follow us on

ಹಲವು ತಿಂಗಳ ಬಳಿಕ ನಟ ಜಾನ್​ ಅಬ್ರಹಾಂ ಅವರು ದೊಡ್ಡ ಪರದೆ ಮೇಲೆ ದರ್ಶನ ನೀಡಲು ಬರುತ್ತಿದ್ದಾರೆ. ಅವರು ನಟಿಸಿದ ‘ವೇದಾ’ ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ನಿಖಿಲ್ ಅಡ್ವಾಣಿ ಅವರು ‘ವೇದಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ರಿಲೀಸ್​ ವೇಳೆ ಜಾನ್​ ಅಬ್ರಹಾಂ ಅವರಿಗೆ ಕೆಲವು ನಿಷ್ಠುರವಾದ ಪ್ರಶ್ನೆಗಳು ಎದುರಾದವು. ಅವುಗಳಿಗೆ ಉತ್ತರಿಸುವಾಗ ಜಾನ್​ ಅಬ್ರಾಹಂ ಅವರು ಕೋಪಗೊಂಡರು. ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ ವರದಿಗಾರನಿಗೆ ಜಾನ್ ಅಬ್ರಹಾಂ ಅವರು ಎಚ್ಚರಿಕೆ ನೀಡಿದರು. ಅಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಜಾತಿ ಪಿಡುಗಿನ ಬಗ್ಗೆ ‘ವೇದಾ’ ಸಿನಿಮಾದಲ್ಲಿ ತೋರಿಸಲಾಗುವುದು. ಟ್ರೇಲರ್​ನಲ್ಲಿ ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಆದರೆ ಈ ಸಿನಿಮಾದಲ್ಲಿ ಜಾನ್​ ಅಬ್ರಹಾಂ ಅವರು ಎಂದಿನಂತೆ ಆ್ಯಕ್ಷನ್​ ಮೆರೆಯಲಿದ್ದಾರೆ. ಭರ್ಜರಿಯಾದ ಫೈಟಿಂಗ್​ ಸೀನ್​ ಮೂಲಕ ಅವರು ಜನರನ್ನು ರಂಜಿಸಲು ಬರುತ್ತಿದ್ದಾರೆ. ಇದು ಕೂಡ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂಬುದು ವರದಿಗಾರರೊಬ್ಬರ ಅಭಿಪ್ರಾಯವಾಗಿತ್ತು.

ಇದನ್ನೂ ಓದಿ: Vedaa Trailer: ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಜಾನ್​ ಅಬ್ರಾಹಂ, ಶಾರ್ವರಿ ವಾಘ್

‘ಮಾಡಿದ್ದನ್ನೇ ಮಾಡುತ್ತೀರಲ್ಲ.. ಹೊಸದಾಗಿ ಬೇರೆ ಏನಾದರೂ ಮಾಡಿ’ ಎಂದು ಬಹಳ ಉಡಾಫೆಯಿಂದ ವರದಿಗಾರ ಪ್ರಶ್ನೆ ಕೇಳಿದ್ದಾರೆ. ಅದರಿಂದ ಜಾನ್​ ಅಬ್ರಾಹಂ ಅವರಿಗೆ ಸಿಟ್ಟು ಬಂತು. ‘ನೀವು ಸಿನಿಮಾ ನೋಡಿದ್ದೀರಾ? ನಾನು ಮೂರ್ಖರನ್ನು ಮತ್ತು ಕೆಟ್ಟ ಪ್ರಶ್ನೆಗಳನ್ನು ಖಂಡಿಸಬಹುದಾ’ ಎಂದು ಜಾನ್​ ಅಬ್ರಾಹಂ ಅವರು ಗರಂ ಆದರು. ಅಲ್ಲದೇ ಈ ಸಿನಿಮಾ ಡಿಫರೆಂಟ್​ ಆಗಿದೆ ಎಂದು ಹೇಳಿದರು.

‘ಈ ಸಿನಿಮಾ ಭಿನ್ನವಾಗಿದೆ ಅಂತ ನಾನು ನೇರವಾಗಿ ಹೇಳುತ್ತೇನೆ. ನನ್ನ ಪ್ರಕಾರ ನಾನು ಈ ಚಿತ್ರದಲ್ಲಿ ಗಾಢವಾಗಿ ಅಭಿನಯಿಸಿದ್ದೇನೆ. ನೀವಂತೂ ಈ ಸಿನಿಮಾ ನೋಡಿಲ್ಲ. ಕೇವಲ ಟ್ರೇಲರ್​ ನೋಡಿದ್ದೀರಿ ಅಷ್ಟೇ. ಮೊದಲು ನೀವು ಸಿನಿಮಾ ನೋಡಿ. ಆಮೇಲೆ ಜಡ್ಜ್​ ಮಾಡಿ. ನಂತರ ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನಿಮ್ಮ ಅಭಿಪ್ರಾಯ ತಪ್ಪಾಗಿದ್ದರೆ ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ’ ಎಂದು ಜಾನ್​ ಅಬ್ರಾಹಂ ಅವರು ವರದಿಗಾರನಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.