Vedaa Trailer: ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಜಾನ್ ಅಬ್ರಾಹಂ, ಶಾರ್ವರಿ ವಾಘ್
ನಟ ಜಾನ್ ಅಬ್ರಹಾಂ ಅವರು ಹೊಸದೊಂದು ಆ್ಯಕ್ಷನ್ ಸಿನಿಮಾ ಮೂಲಕ ಜನರನ್ನು ರಂಜಿಸಲು ಬರುತ್ತಿದ್ದಾರೆ. ಅವರು ನಟಿಸಿರುವ ‘ವೇದಾ’ ಸಿನಿಮಾದಲ್ಲಿ ಜಾತಿ ಪಿಡುಗಿನ ಕುರಿತ ಕಥೆ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಟ್ರೇಲರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಈ ಸಿನಿಮಾ ತೆರೆಕಾಣಲಿದೆ.
ಈ ವರ್ಷ ಆಗಸ್ಟ್ 15ರಂದು ಬಹುನಿರೀಕ್ಷಿತ ಸಿನಿಮಾಗಳ ನಡುವೆ ಕ್ಲ್ಯಾಶ್ ಆಗಲಿದೆ. ಬಾಲಿವುಡ್ನ ‘ಸ್ತ್ರೀ 2’, ‘ವೇದಾ’, ‘ಖೇಲ್ ಖೇಲ್ ಮೇ’ ಮುಂತಾದ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಲಿವೆ. ಈ ಪೈಕಿ ‘ವೇದಾ’ ಸಿನಿಮಾದ ಟ್ರೇಲರ್ ಇಂದು (ಆಗಸ್ಟ್ 1) ಬಿಡುಗಡೆ ಆಗಿದ್ದು, ಹೈಪ್ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಶಾರ್ವರಿ ವಾಘ್, ತಮನ್ನಾ ಭಾಟಿಯಾ, ಅಭಿಷೇಕ್ ಬ್ಯಾನರ್ಜಿ, ಮೌನಿ ರಾಯ್ ಮುಂತಾದವರು ನಟಿಸಿದ್ದಾರೆ. ಟ್ರೇಲರ್ ಮೂಲಕ ಈ ಚಿತ್ರದ ಕಥಾವಸ್ತು ಏನು ಎಂಬುದು ರಿವೀಲ್ ಆಗಿದೆ.
ಜಾತಿ ಪಿಡುಗಿನ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಆ ಸಿನಿಮಾಗಳ ಸಾಲಿಗೆ ‘ವೇದಾ’ ಕೂಡ ಸೇರ್ಪಡೆ ಆಗುತ್ತಿದೆ. ಆದರೆ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಕೂಡ ಇರಲಿವೆ ಎಂಬುದು ವಿಶೇಷ. ಜಾನ್ ಅಬ್ರಹಾಂ ಅವರ ಸಿನಿಮಾಗಳಲ್ಲಿ ಅಭಿಮಾನಿಗಳು ಆ್ಯಕ್ಷನ್ ಬಯಸುತ್ತಾರೆ. ಅಂಥವರಿಗೆ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಮೂಡಿಸುವ ರೀತಿಯಲ್ಲಿ ಟ್ರೇಲರ್ ಬಿಡುಗಡೆ ಆಗಿದೆ.
3 ನಿಮಿಷ, 10 ಸೆಕೆಂಡ್ ಅವಧಿ ಇರುವ ‘ವೇದಾ’ ಟ್ರೇಲರ್ನಲ್ಲಿ ಹಲವು ಎಮೋಷನ್ಗಳು ಕಾಣಿಸಿವೆ. ಜಾತಿ ವ್ಯವಸ್ಥೆ ವಿರುದ್ಧ ಸಿಡೆದೆದ್ದ ಯುವತಿಯ ಕಥೆ ಈ ಸಿನಿಮಾದಲ್ಲಿ ಇದೆ. ಜಾನ್ ಅಬ್ರಾಹಂ ಅವರು ಸೈನಿಕನ ಪಾತ್ರ ಮಾಡಿದ್ದಾರೆ. ಅನಿವಾರ್ಯ ಕಾರಣಕ್ಕೆ ಸೈನ್ಯದಿಂದ ಹೊರಬಂದ ಬಳಿಕವೂ ಅವರು ಕೆಟ್ಟದರ ವಿರುದ್ಧ ಯುದ್ಧ ಮಾಡುವುದನ್ನು ನಿಲ್ಲಿಸುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ತಿಳಿಸಲು ಪ್ರೇಕ್ಷಕರು ಆಗಸ್ಟ್ 15ಕ್ಕಾಗಿ ಕಾದಿದ್ದಾರೆ.
ಇದನ್ನೂ ಓದಿ: ಹೃತಿಕ್ ರೋಷನ್, ಜಾನ್ ಅಬ್ರಾಹಂ ಸಹಪಾಠಿಗಳು ಎಂಬುದು ನಿಮಗೆ ಗೊತ್ತಾ? ಫೋಟೋ ಸಾಕ್ಷಿ
‘ವೇದಾ’ ಸಿನಿಮಾಗೆ ನಿಖಿಲ್ ಅಡ್ವಾಣಿ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ‘ಬಾಟ್ಲಾ ಹೌಸ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದಲ್ಲೂ ಜಾನ್ ಅಬ್ರಹಾಂ ಅವರು ಪ್ರಮುಖ ಪಾತ್ರ ಮಾಡಿದ್ದರು. ಈಗ ‘ವೇದಾ’ ಚಿತ್ರಕ್ಕಾಗಿ ಜಾನ್ ಅಬ್ರಾಹಂ ಮತ್ತು ನಿಖಿಲ್ ಅಡ್ವಾಣಿ ಅವರು ಮತ್ತೊಮ್ಮೆ ಒಂದಾಗಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ‘ವೇದಾ’ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.