ಮೊದಲ ಬಾಲಿವುಡ್ ಸಿನಿಮಾದಿಂದ ಹೊರಬಂದರೆ ಕನ್ನಡತಿ ಶ್ರೀಲೀಲಾ?
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಬ್ಯುಸಿ ನಟಿ. ಇತ್ತೀಚೆಗೆ ಶ್ರೀಲೀಲಾಗೆ ಬಾಲಿವುಡ್ ಸಿನಿಮಾದ ಆಫರ್ ಸಹ ಬಂದಿತ್ತು. ಆದರೆ ಆ ಸಿನಿಮಾದಿಂದ ಶ್ರೀಲೀಲಾ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಾಯಕಿಯಾದ ನಟಿ ಶ್ರೀಲೀಲಾ, ‘ಭರಾಟೆ’, ‘ಬೈ ಟು ಲವ್’ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದವರು. ರವಿತೇಜ ಜೊತೆಗೆ ‘ಧಮಾಕಾ’ ಸಿನಿಮಾದಲ್ಲಿ ನಟಿಸಿದ ಬಳಿಕ ಶ್ರೀಲೀಲಾರ ಪ್ರತಿಭೆ ಗುರುತಿಸಿದ ತೆಲುಗು ಚಿತ್ರರಂಗ ಒಂದರ ಮೇಲೆ ಒಂದರಂತೆ ಅವಕಾಶಗಳನ್ನು ನೀಡುತ್ತಲೇ ಬಂದಿದೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ. ಶ್ರೀಲೀಲಾ ಪ್ರತಿಭೆ ಗುರುತಿಸಿ ಬಾಲಿವುಡ್ನಿಂದಲೂ ಅವಕಾಶ ಅರಸಿ ಬಂದಿತ್ತು. ಆದರೆ ಶ್ರೀಲೀಲಾ ತಮ್ಮ ಮೊದಲ ಬಾಲಿವುಡ್ ಸಿನಿಮಾದಿಂದಲೇ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ನ ಖ್ಯಾತ ನಟ ವರುಣ್ ಧವನ್ ನಟಿಸಿ, ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನ ಮಾಡುತ್ತಿರುವ ಹೊಸ ಕಾಮಿಡಿ ಆಕ್ಷನ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು ಎಂದು ಕೆಲ ದಿನಗಳ ಹಿಂದೆ ಸುದ್ದಿ ಹರಿದಾಡಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಶ್ರೀಲೀಲಾ ಆ ಸಿನಿಮಾದಿಂದ ಹೊರ ಹೋಗಿದ್ದಾರೆ ಎಂಬ ಸುದ್ದಿ ಈಗ ಹರಿದಾಡಿದೆ. ನಾಯಕಿ ಇಲ್ಲದೆಯೇ ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನೂ ಸಹ ಮುಗಿಸಲಾಗಿದೆ ಎನ್ನಲಾಗುತ್ತಿದೆ.
ಆದರೆ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಸಿನಿಮಾದ ನಿರ್ಮಾಪಕ ರಮೇಶ್ ತುರಾನಿ, ‘ಇದು ಸುಳ್ಳು ಸುದ್ದಿ, ನಾವು ಸಿನಿಮಾದ ನಾಯಕಿ ಪಾತ್ರಕ್ಕೆ ಯಾರನ್ನೂ ಆಯ್ಕೆಯೇ ಮಾಡಿಲ್ಲ. ನಾಯಕಿಗೆ ಮೀಸಲಾಗಿರಬೇಕಾದ ಬಜೆಟ್ ಅಂತಿಮಗೊಂಡಿಲ್ಲವಾದ್ದರಿಂದ ನಾವು ಯಾರನ್ನೂ ಸಹ ನಾಯಕಿಯನ್ನಾಗಿ ಹಾಕಿಕೊಂಡಿಲ್ಲ. ಆದರೆ ಈಗಾಗಲೇ ಒಂದು ತಿಂಗಳ ಶೂಟಿಂಗ್ ಅನ್ನು ಯೋಜನೆಯಂತೆಯೇ ಮುಗಿಸಿದ್ದೇವೆ. ಕೆಲವು ನಟಿಯರ ಬಗ್ಗೆ ಚರ್ಚೆ ಇದ್ದು, ನಾಯಕಿ ಅಂತಿಮಗೊಂಡ ಬಳಿಕ ಮಾಹಿತಿ ನೀಡಲಿದ್ದೇವೆ’ ಎಂದಿದ್ದಾರೆ. ಅಸಲಿಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಸ್ವತಃ ರಮೇಶ್ ತುರಾನಿ ಅವರೇ ನಾವು ಶ್ರೀಲೀಲಾ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲು ಚಿಂತಿಸಿದ್ದೇವೆ ಎಂದಿದ್ದರು.
ಇದನ್ನೂ ಓದಿ:ಸುಂದರ ತಾಣದಲ್ಲಿ ನಟಿ ಶ್ರೀಲೀಲಾ ಹುಟ್ಟುಹಬ್ಬ ಸೆಲೆಬ್ರೇಷನ್
ಇನ್ನು ನಟಿ ಶ್ರೀಲೀಲಾ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲ ಬ್ಯುಸಿಯಾಗಿದ್ದಾರೆ. ಅದರಲ್ಲಿ ಒಂದು ಹಿಂದಿ ಸಿನಿಮಾ ಸಹ ಇದೆ. ‘ರಾಬಿನ್ ಹುಡ್’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವಿತೇಜ ನಟಿಸಲಿರುವ 75ನೇ ಸಿನಿಮಾಕ್ಕೂ ಸಹ ಶ್ರೀಲೀಲಾ ನಾಯಕಿ. ಇದು ರವಿತೇಜ ಜೊತೆಗೆ ಶ್ರೀಲೀಲಾರ ಮೂರನೇ ಸಿನಿಮಾ. ಪವನ್ ಕಲ್ಯಾಣ್ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಹಿಂದಿಯ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಒಂದು ಹೊಸ ತಮಿಳು ಸಿನಿಮಾವನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ನಾಯಕಿಯಾಗಿದ್ದರು. ಆದರೆ ಆ ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಡಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ