AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವತಃ ಮಾರುತಿ ಕಾರಲ್ಲಿ ಓಡಾಟ ಆದರೆ ಬಚ್ಚನ್​ಗೆ ನಾಲ್ಕು ಕೋಟಿ ಕಾರು ಉಡುಗೊರೆ ಕೊಟ್ಟಿದ್ದ ನಿರ್ದೇಶಕ

ಬಾಲಿವುಡ್​ನ ಅತ್ಯುತ್ತಮ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ವಿಧು ವಿನೋದ್ ಚೋಪ್ರಾ ತಾವು ಮಾರುತಿ ಒಮಿನಿ ಓಡಿಸುವಾಗಲೇ ಅಮಿತಾಬ್ ಬಚ್ಚನ್​ಗೆ ನಾಲ್ಕು ಕೋಟಿ ಬೆಲೆಯ ಕಾರು ಉಡುಗೊರೆ ಕೊಟ್ಟಿದ್ದರಂತೆ.

ಸ್ವತಃ ಮಾರುತಿ ಕಾರಲ್ಲಿ ಓಡಾಟ ಆದರೆ ಬಚ್ಚನ್​ಗೆ ನಾಲ್ಕು ಕೋಟಿ ಕಾರು ಉಡುಗೊರೆ ಕೊಟ್ಟಿದ್ದ ನಿರ್ದೇಶಕ
ಮಂಜುನಾಥ ಸಿ.
|

Updated on: Aug 01, 2024 | 11:46 AM

Share

ಕೆಲವು ವ್ಯಕ್ತಿಗಳಿರುತ್ತಾರೆ ಅವರು ಯೋಚನೆ ಮಾಡಲು ಮೆದುಳು ಬಳಸುವುದಿಲ್ಲ ಬದಲಿಗೆ ಹೃದಯವನ್ನು ಬಳಸುತ್ತಾರೆ. ಅಂಥಹಾ ವ್ಯಕ್ತಿಗಳಲ್ಲಿ ಬಾಲಿವುಡ್​ನ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ ವಿಧು ವಿನೋದ್ ಚೋಪ್ರಾ ಸಹ ಒಬ್ಬರು. ಸ್ವತಃ ಸಾಮಾನ್ಯವಾದ ಮಾರುತಿ ಕಾರಿನಲ್ಲಿ ಓಡಾಡುತ್ತಿರುವಾಗಲೇ ವಿಧು ವಿನೋದ್ ಚೋಪ್ರಾ ತಮ್ಮ ಮೆಚ್ಚಿನ ನಟ ಅಮಿತಾಬ್ ಬಚ್ಚನ್​ಗೆ 4.50 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆ ಕೊಟ್ಟಿದ್ದರಂತೆ. ಇದರಿಂದಾಗಿ ಅವರ ತಾಯಿಯಿಂದ ಏಟು ಸಹ ತಿಂದಿದ್ದರಂತೆ ವಿಧು ವಿನೋದ್ ಚೋಪ್ರಾ.

ವಿಧು ವಿನೋದ್ ಚೋಪ್ರಾ, 2007 ರಲ್ಲಿ ಏಕಲವ್ಯ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಅಲಿ ಖಾನ್ ಮತ್ತು ಸಂಜಯ್ ದತ್, ವಿದ್ಯಾ ಬಾಲನ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ದೊಡ್ಡ ಯಶಸ್ಸು ಪಡೆಯಲಿಲ್ಲವಾದರೂ ಸಿನಿಮಾಕ್ಕೆ ಭರಪೂರ ಪ್ರಶಂಸೆ ವ್ಯಕ್ತವಾಗಿತ್ತು. ಆ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಚ್ಚನ್ ಜೊತೆಗೆ ಕೆಲವು ವಿಷಯಗಳಿಗೆ ವಿಧು ವಿನೋದ್ ಚೋಪ್ರಾ ಜಗಳ ಮಾಡಿಕೊಂಡಿದ್ದರಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

‘ಬಚ್ಚನ್​ಗೆ ಒಳ್ಳೆಯ ಹೋಟೆಲ್ ಬುಕ್ ಮಾಡಲು ನಾನು ಒಪ್ಪಿರಲಿಲ್ಲ. ಅದಕ್ಕೆ 65 ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ನನಗೆ ಸಮಸ್ಯೆ ಅದಾಗಿರಲಿಲ್ಲ. ಬಚ್ಚನ್​ಗೆ ದೊಡ್ಡ ಹೋಟೆಲ್ ರೂಂ ಬುಕ್ ಮಾಡಿದರೆ ಸೈಫ್ ಅಲಿ ಖಾನ್, ಸಂಜಯ್ ದತ್​ಗೂ ಅಂಥಹದೇ ಹೋಟೆಲ್ ಬುಕ್ ಮಾಡಬೇಕಿತ್ತು. ಇದರಿಂದ ಸಿನಿಮಾದ ಬಜೆಟ್ ಏರಿ ಹೋಗುತ್ತಿತ್ತು. ಇಂಥಹಾ ವಿಷಯಗಳೇ ಸಿನಿಮಾದ ಬಜೆಟ್ ಅನ್ನು ಹೆಚ್ಚಿಸುತ್ತವೆ ಮತ್ತು ಇದರಿಂದೇ ಸಿನಿಮಾಕ್ಕೆ ಹಾಕಿದ ಹಣ ವಾಪಸ್ ಬರುವುದಿಲ್ಲ ಎಂಬ ನಂಬಿಕೆ ನನ್ನದು. ಹಾಗಾಗಿ ಬಚ್ಚನ್​ಗೆ ದೊಡ್ಡ ಹೋಟೆಲ್​ನಲ್ಲಿ ರೂಂ ಬುಕ್ ಮಾಡಿರಲಿಲ್ಲ’ ಎಂದಿದ್ದಾರೆ ವಿಧು ವಿನೋದ್ ಚೋಪ್ರಾ.

ಇದನ್ನೂ ಓದಿ:ಹೆಸರಿನ ಜೊತೆ ಅಮಿತಾಭ್ ಸೇರಿಸಿದ್ದಕ್ಕೆ ಸಿಟ್ಟಾದ ಜಯಾ ಬಚ್ಚನ್; ಕೋಪ ನೋಡಿ

‘ಆದರೆ ಮುಂದೆ ನನ್ನ ಜೀವನದಲ್ಲಿ ತುಸು ಹಣ ಗಳಿಸಿದ ಮೇಲೆ ನಾನು ಅಮಿತಾಬ್ ಬಚ್ಚನ್​ಗೆ 4.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರನ್ನು ಉಡುಗೊರೆಯಾಗಿ ಕೊಟ್ಟೆ. ನನ್ನ ಅಮ್ಮನನ್ನು ಉಡುಗೊರೆ ಕೊಡಲು ಬಚ್ಚನ್ ಮನೆಗೆ ಕೊಂಡೊಯ್ದಿದ್ದೆ. ಅಮ್ಮನೇ ಕಾರಿನ ಕೀ ಅನ್ನು ಬಚ್ಚನ್​ಗೆ ಕೊಟ್ಟರು. ಆಗ ನನ್ನ ಬಳಿ ಮಾರುತಿ ಓಮಿನಿ ವ್ಯಾನ್ ಇತ್ತು. ಕಾರು ಕೊಟ್ಟ ಮೇಲೆ ಅಮ್ಮ ನಾನು ಕಾರಿನಲ್ಲಿ ಮರಳಿದೆವು, ಆಗ ಅಮ್ಮ, ಲಂಬೂ (ಬಚ್ಚನ್) ಕಾರಿನ ಬೆಲೆ ಎಷ್ಟಿರಬಹುದು? 10-11 ಲಕ್ಷ ಇರಬಹುದಾ ಎಂದರು. ನಾನು ಇಲ್ಲಮ್ಮ 4.50 ಕೋಟಿ ಎಂದೆ. ಅಮ್ಮ ನನ್ನ ಕಪಾಳಕ್ಕೆ ಹೊಡೆದು, ನೀನು ಇಂಥಹಾ ಗಾಡಿಯಲ್ಲಿ ಓಡಾಡುತ್ತಿದ್ದೀಯ ಅವರಿಗೆ 4.50 ಕೋಟಿಯ ಕಾರು ಕೊಟ್ಟಿದ್ದೀಯ, ಮೂರ್ಖ’ ಎಂದು ಬೈದರು ಎಂದು ನೆನಪು ಮಾಡಿಕೊಂಡಿದ್ದಾರೆ.

‘ಖುಷಿ ಕೊಡಲಾಗದ ಹಣ ಇದ್ದರೆಷ್ಟು ಇಲ್ಲದಿದ್ದರೆಷ್ಟು ಎಂಬುದು ನನ್ನ ಪಾಲಿಸಿ. ಬಚ್ಚನ್​ಗೆ ಕಾರು ಉಡುಗೊರೆ ಕೊಡುವುದರಲ್ಲಿ ನನಗೆ ಖುಷಿ ಸಿಕ್ಕಿತು ಹಾಗಾಗಿ ಕೊಟ್ಟೆ. ಆ ನಂತರದ ದಿನಗಳಲ್ಲಿ ನಾನೂ ಸಹ ಒಳ್ಳೆಯ ಕಾರು ಖರೀದಿ ಮಾಡಿದೆ. ಒಬ್ಬ ಡ್ರೈವರ್ ಅನ್ನೂ ಇರಿಸಿಕೊಂಡೆ’ ಎಂದಿದ್ದಾರೆ ಚೋಪ್ರಾ.

ವಿಧು ವಿನೋದ್ ಚೋಪ್ರಾ, ಬಾಲಿವುಡ್​ನ ಅತ್ಯುತ್ತಮ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರು. ‘1942 ಎ ಲವ್ ಸ್ಟೋರಿ’, ‘ಮಿಷನ್ ಕಾಶ್ಮೀರ್’, ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘12ತ್ ಫೇಲ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಸೂಪರ್-ಡೂಪರ್ ಹಿಟ್ ಸಿನಿಮಾಗಳಾದ ‘ಮುನ್ನಾ ಭಾಯ್ ಎಂಬಿಬಿಎಸ್’, ‘ಲಗೆ ರಹೋ ಮುನ್ನಾಭಾಯ್’, ‘3 ಇಡಿಯಟ್ಸ್’, ‘ಪಿಕೆ’, ‘ಸಂಜು’, ‘ಪರಿಣೀತ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ