ನಟ ಜಾನ್ ಅಬ್ರಾಹಂ ಅವರು ‘ವೇದಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಜಾತಿ ತಾರತಮ್ಯದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗುವುದು ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಇತ್ತೀಚೆಗೆ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾನ್ ಅಬ್ರಾಹಂ ಅವರು ಪತ್ರಕರ್ತನೊಬ್ಬನ ಮೇಲೆ ಗರಂ ಆಗಿದ್ದರು. ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ್ದಕ್ಕೆ ಜಾನ್ ಅಬ್ರಹಾಂ ಅವರಿಗೆ ಕೋಪ ಬಂದಿತ್ತು. ಆ ಘಟನೆ ಬಗ್ಗೆ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟ್ರೇಲರ್ ಲಾಂಚ್ನಲ್ಲಿ ಯಾವ ರೀತಿಯ ಹುನ್ನಾರ ನಡೆದಿರಬಹುದು ಎಂದು ಅವರು ವಿವರಿಸಿದ್ದಾರೆ.
ವಿವಾದ ಏನು? ‘ವೇದಾ’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ಸಿಕ್ಕಾಪಟ್ಟೆ ಆ್ಯಕ್ಷನ್ ಮೆರೆದಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಲ್ಲೂ ಆ್ಯಕ್ಷನ್ ಅಬ್ಬರ ಇತ್ತು. ಅದನ್ನು ಅಣಕಿಸುವ ರೀತಿಯಲ್ಲಿ ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದ. ‘ಮಾಡಿದ್ದನ್ನೇ ಎಷ್ಟು ದಿನ ಮಾಡುತ್ತೀರಿ? ಹೊಸದಾಗಿ ಏನಾದರೂ ಮಾಡಿ’ ಎಂದು ಆತ ಕೇಳಿದ. ಇದರಿಂದ ಜಾನ್ ಅಬ್ರಾಹಂ ಅವರಿಗೆ ಕೋಪ ಬಂತು. ಪ್ರಶ್ನೆ ಕೇಳಿದ ವ್ಯಕ್ತಿಗೆ ಈಡಿಯಡ್ ಎಂದು ಜಾನ್ ಅಬ್ರಾಹಂ ಬೈಯ್ದರು.
ಜಾನ್ ಅಬ್ರಾಹಂ ಅವರ ಅನಿಸಿಕೆ ಪ್ರಕಾರ, ತಮ್ಮನ್ನು ಕೆಣಕಬೇಕು ಎಂಬ ಉದ್ದೇಶದಿಂದಲೇ ಆ ಪತ್ರಕರ್ತನನ್ನು ಯಾರೋ ಅಲ್ಲಿಗೆ ಕಳಿಸಿದ್ದರು. ‘ನನ್ನನ್ನು ಕೆಟ್ಟವನನ್ನಾಗಿ ಬಿಂಬಿಸಬೇಕು ಎಂಬುದು ಅವರ ಉದ್ದೇಶ ಇರಬಹುದು. ನಾನು ಕೋಪ ಮಾಡಿಕೊಂಡು ಪ್ರತಿಕ್ರಿಯಿಸಿದೆ. ಅವರ ಉದ್ದೇಶ ಈಡೇರಿತು’ ಎಂದು ಜಾನ್ ಅಬ್ರಾಹಂ ಅವರು ಹೇಳಿದ್ದಾರೆ. ಇಂದಿಗೂ ಟ್ರೇಲರ್ ಲಾಂಚ್ ಇವೆಂಟ್ಗಳನ್ನು ಮಾಡುತ್ತಿರುವುದು ಅಪ್ರಸ್ತುತ ಎಂದು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್ ಅಬ್ರಾಹಂ
‘ವೇದಾ’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಜೊತೆ ಶಾರ್ವರಿ ವಾಘ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸೈನಿಕನಾಗಿ ಜಾನ್ ಅಬ್ರಾಹಂ ಕಾಣಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 15ರಂದು ಬಿಡುಗಡೆ ಆಗಲಿರುವ ಇನ್ನೆರಡು ಸಿನಿಮಾಗಳಾದ ‘ಸ್ತ್ರೀ 2’ ಮತ್ತು ‘ಖೇಲ್ ಖೇಲ್ ಮೇ’ ಸಿನಿಮಾದ ಜೊತೆ ‘ವೇದಾ’ ಚಿತ್ರ ಪೈಪೋಟಿ ನೀಡಲಿದೆ. ಈ ಮೂರು ಸಿನಿಮಾಗಳು ಕೂಡ ಬೇರೆ ಬೇರೆ ಶೈಲಿಯಲ್ಲಿವೆ. ಯಾವ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಲಿದ್ದಾರೆ ಎಂಬುದು ಆಗಸ್ಟ್ 15ರಂದು ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.