‘ವಾರ್ 2’ ಸೋಲಿನ ಬಳಿಕ ಜೂ. ಎನ್ಟಿಆರ್ ಮುಂದಿನ ಚಿತ್ರಕ್ಕೆ ಬ್ರೇಕ್ ಹಾಕಿದ ಯಶ್ ರಾಜ್ ಫಿಲ್ಮ್ಸ್?
ನಿರೀಕ್ಷಿಸಿದಂತೆ ಆಗಿದ್ದರೆ ‘ವಾರ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಸಿನಿಮಾದ ಸೋಲಿನಿಂದ ನಿರ್ಮಾಪಕರಿಗೆ ಭಾರಿ ನಷ್ಟ ಆಗಿದೆ. ಹಾಗಾಗಿ ಜೂನಿಯರ್ ಎನ್ಟಿಆರ್ ಮಾಡಬೇಕಿದ್ದ ಮತ್ತೊಂದು ಹಿಂದಿ ಸಿನಿಮಾ ಸದ್ಯಕ್ಕೆ ಹೋಲ್ಡ್ ಆಗಲಿದೆ.

ತೆಲುಗು ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಭಾರಿ ಉತ್ಸಾಹದಿಂದ ಬಾಲಿವುಡ್ಗೆ ಕಾಲಿಟ್ಟಿದ್ದರು. ಅವರು ನಟಿಸಿದ ಮೊದಲ ಹಿಂದಿ ಸಿನಿಮಾ ‘ವಾರ್ 2’ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾಗೆ ‘ಯಶ್ ರಾಜ್ ಫಿಲ್ಮ್ಸ್’ (Yash Raj Films) ಸಂಸ್ಥೆ ಬಂಡವಾಳ ಹೂಡಿದೆ. ಈ ಒಂದು ಸಿನಿಮಾ ಮಾತ್ರವಲ್ಲದೇ ಬೇರೆ ಪ್ರಾಜೆಕ್ಟ್ಗಳ ಸಲುವಾಗಿಯೂ ಈ ಸಂಸ್ಥೆಯ ಜೊತೆ ಜೂನಿಯರ್ ಎನ್ಟಿಆರ್ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಮುಂದಿನ ಸಿನಿಮಾವನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆಯಂತೆ. ‘ವಾರ್ 2’ (War 2) ಸಿನಿಮಾದ ಸೋಲು ಕೂಡ ಇದಕ್ಕೆ ಕಾರಣ ಆಗಿರಬಹುದು. ಈ ರೀತಿಯ ಸುದ್ದಿ ಹರಿದಾಡುತ್ತಿದೆ.
ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯು ‘ವಾರ್ 2’ ಸಿನಿಮಾ ಮೇಲೆ ಸಖತ್ ಭರವಸೆ ಹೊಂದಿತ್ತು. ಮೊದಲ ಬಾರಿಗೆ ಜೂನಿಯರ್ ಎನ್ಟಿಆರ್ ಅವರು ನಟಿಸಿದ ಬಾಲಿವುಡ್ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಜೋರಾಗಿತ್ತು. ಅದರ ಆಧಾರದ ಮೇಲೆ ಹಣವನ್ನು ನೀರಿನಂತೆ ಖರ್ಚು ಮಾಡಿ ಈ ಸಿನಿಮಾ ನಿರ್ಮಾಣ ಮಾಡಲಾಯಿತು. ಆದರೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಲೇ ಇಲ್ಲ.
‘ವಾರ್ 2’ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಅಂದಾಜು 450 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿತ್ತು. ಈ ಚಿತ್ರಕ್ಕೆ ನಿರ್ಮಾಪಕರಿಗೆ ಸುಮಾರು 50ರಿಂದ 60 ಕೋಟಿ ರೂಪಾಯಿ ನಷ್ಟ ಆಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೆ ಜೂನಿಯರ್ ಎನ್ಟಿಆರ್ ಜೊತೆ ಹೊಸ ಸಿನಿಮಾವನ್ನು ಕೂಡಲೇ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ನಿರ್ಧರಿಸಿದಂತಿದೆ.
ಇನ್ನು ಕೆಲವು ವರದಿಗಳ ಪ್ರಕಾರ, ಸ್ವತಃ ಜೂನಿಯರ್ ಎನ್ಟಿಆರ್ ಅವರೇ ಸದ್ಯಕ್ಕೆ ಬಾಲಿವುಡ್ ಪ್ರಾಜೆಕ್ಟ್ಗಳನ್ನು ಬದಿಗೆ ಇಟ್ಟಿದ್ದಾರೆ. ಯಾಕೆಂದರೆ ಅವರು ಈಗಾಗಲೇ ಒಪ್ಪಿಕೊಂಡಿರುವ ತೆಲುಗು ಸಿನಿಮಾಗಳ ಕೆಲಸವನ್ನು ಮುಗಿಸಿಕೊಡಬೇಕಿದೆ. ಹಾಗಾಗಿ ಹಿಂದಿ ಸಿನಿಮಾಗೆ ಹೆಚ್ಚಿನ ಆದ್ಯತೆಯನ್ನು ಜೂನಿಯರ್ ಎನ್ಟಿಆರ್ ಅವರು ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ವಾರ್ 2’ ಸೋಲು: 450 ಕೋಟಿ ರೂ. ಸುರಿದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು?
ಪ್ರಶಾಂತ್ ನೀಲ್ ಜೊತೆ ಜೂನಿಯರ್ ಎನ್ಟಿಆರ್ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಕೂಡ ಬೃಹತ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಭಿಮಾನಿಗಳು ಸಖತ್ ನಿರೀಕ್ಷೆ ಹೊಂದಿದ್ದಾರೆ. ಅದಾಗ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ದೇವರ 2’ ಸಿನಿಮಾದ ಕೆಲಸಗಳಲ್ಲಿ ಪಾಲ್ಗೊಳ್ಳಬೇಕಿದೆ. ಆ ನಂತರವಷ್ಟೇ ಅವರು ಹಿಂದಿ ಪ್ರಾಜೆಕ್ಟ್ಗಳ ಕಡೆಗೆ ಗಮನ ಹರಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








