AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

War 2: ಭರ್ಜರಿಯಾಗಿ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಜೂ ಎನ್​ಟಿಆರ್, ಹೃತಿಕ್ ಜೊತೆ ಜುಗಲ್​ಬಂಧಿ

ಜೂ ಎನ್​ಟಿಆರ್ ಈಗ ಗ್ಲೋಬಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ತೆಲುಗು ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸದಿದ್ದ ಜೂ ಎನ್​ಟಿಆರ್ ಇದೀಗ ಬಾಲಿವುಡ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

War 2: ಭರ್ಜರಿಯಾಗಿ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಜೂ ಎನ್​ಟಿಆರ್, ಹೃತಿಕ್ ಜೊತೆ ಜುಗಲ್​ಬಂಧಿ
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: Apr 05, 2023 | 3:29 PM

Share

ಆರ್​ಆರ್​ಆರ್ (RRR) ಸಿನಿಮಾದ ಗೆಲುವಿನ ಮೂಲಕ ರಾಮ್ ಚರಣ್ (Ram Charan) ಹಾಗೂ ಜೂ ಎನ್​ಟಿಆರ್ (Jr NTR) ಇಬ್ಬರೂ ಗ್ಲೋಬಲ್ ಸ್ಟಾರ್​ಗಳಾಗಿದ್ದಾರೆ. ರಾಮ್​ಚರಣ್​ಗೆ ಈಗಾಗಲೇ ಹಾಲಿವುಡ್ (Hollywood) ಆಫರ್ ದೊರಕಿದೆ, ಬಾಲಿವುಡ್​ನಿಂದಲೂ ಆಫರ್​ಗಳು ಬರುತ್ತಿವೆ. ಆದರೆ ಜೂ ಎನ್​ಟಿಆರ್​ಗೆ ಆರ್​ಆರ್​ಆರ್​ ಬಳಿಕ ಆ ರೀತಿಯ ಯಾವುದೇ ಗುರುತರ ಆಫರ್ ಬಂದ ಬಗ್ಗೆ ವರದಿಯಾಗಿರಲಿಲ್ಲ. ಆದರೆ ಇದೀಗ ಅಂಥಹಾ ಸುದ್ದಿಯೊಂದು ಹೊರಬಿದ್ದಿದ್ದು, ಜೂ ಎನ್​ಟಿಆರ್ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ. ಅದೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಮೂಲಕ.

ಬಾಲಿವುಡ್​ನಲ್ಲಿ ಈಗಾಗಲೇ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ವಾರ್ ಸಿನಿಮಾದ ಎರಡನೇ ಭಾಗದಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಜೂ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ವಾರ್ ಸಿನಿಮಾದ ಮೊದಲ ಭಾಗದಲ್ಲಿ ಹೃತಿಕ್ ರೋಷನ್ ಜೊತೆಗೆ ಯುವನಟ ಟೈಗರ ಶ್ರಾಫ್ ನಟಿಸಿದ್ದರು. ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದ ವಾರ್ ಸೂಪರ್ ಹಿಟ್ ಆಗಿತ್ತು. ಇದೀಗ ಅದರ ಎರಡನೇ ಭಾಗವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದು, ಹೃತಿಕ್ ಜೊತೆಗಾರನ ಪಾತ್ರಕ್ಕೆ ಜೂ ಎನ್​ಟಿಆರ್ ಅವರನ್ನು ಒಪ್ಪಿಸಲಾಗಿದೆ.

ಈ ಹಿಂದಿನ ವಾರ್ ಹಾಗೂ ಇತ್ತೀಚೆಗಿನ ಸೂಪರ್-ಡೂಪರ್ ಹಿಟ್ ಸಿನಿಮಾ ಪಠಾಣ್ ಅನ್ನು ನಿರ್ಮಾಣ ಮಾಡಿರುವ ಬಾಲಿವುಡ್​ನ ಅತಿ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಮ್ಸ್ ಅವರೇ ವಾರ್ 2 ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಾರ್ 2, ಜೂ ಎನ್​ಟಿಆರ್ ಅವರ ಮೊದಲ ಅಧಿಕೃತ ಹಿಂದಿ ಸಿನಿಮಾ ಆಗಿದೆ. ಆದರೆ ಈ ಹಿಂದೆ ಜೂ ಎನ್​ಟಿಆರ್ ನಟಿಸಿರುವ ಹಲವು ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಿವೆ. ಟಿವಿಗಳಲ್ಲಿಯೂ ಪ್ರಸಾರವಾಗಿವೆ.

ವಾರ್ 2 ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್, ಪ್ರಸ್ತುತ ಬಾಲಿವುಡ್​ನ ಯಶಸ್ವಿ ಯುವನಿರ್ದೇಶಕ ಎನಿಸಿಕೊಂಡಿದ್ದಾರೆ. ಈಗಾಗಲೇ ಶಾರುಖ್ ಖಾನ್​ರ ಪಠಾಣ್ ಸಿನಿಮಾ ನಿರ್ದೇಶನ ಮಾಡಿರುವುದು ಇವರೇ. ಹೃತಿಕ್ ರೋಷನ್ ಜೊತೆ ಈಗಾಗಲೇ ಎರಡು ಸಿನಿಮಾ ಮಾಡಿರುವ ಸಿದ್ಧಾರ್ಥ್ ಇದೀಗ ಫೈಟರ್ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಫೈಟರ್ ಸಿನಿಮಾದ ಬಳಿಕ ವಾರ್ 2 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಪ್ರಭಾಸ್, ಅಲ್ಲು ಅರ್ಜುನ್ ಬಳಿಕ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟ ಟಿ-ಸೀರೀಸ್

ಜೂ ಎನ್​ಟಿಆರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ. ಆ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕವಷ್ಟೆ ಜೂ ಎನ್​ಟಿಆರ್ ವಾರ್ 2 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ವಾರ್ ಸಿನಿಮಾಕ್ಕೆ ಈಗಾಗಲೆ ಅಭಿಮಾನಿಗಳಿದ್ದಾರೆ. ಗೂಢಚಾರಿಯನ್ನು ಕತೆಯನ್ನು ಒಳಗೊಂಡಿರುವ ಹೈ ಆಕ್ಷನ್ ಸಿನಿಮಾ ಇದಾಗಿರಲಿದೆ. ವಿದೇಶದಲ್ಲಿ ನಡೆಯುವ ಭರ್ಜರಿ ಆಕ್ಷನ್ ದೃಶ್ಯಗಳನ್ನು ಸಿನಿಮಾ ಒಳಗೊಂಡಿರುತ್ತದೆ. ಜೂ ಎನ್​ಟಿಆರ್ ಬಾಲಿವುಡ್​ನಲ್ಲಿ ಕಮಾಲ್ ಸೃಷ್ಟಿಸುತ್ತಾರೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ