Me Too: ನಿರ್ಮಾಪಕನಿಂದ ಲೈಂಗಿಕ ಕಿರುಕುಳ, ದೂರು ನೀಡಿದ ನಟಿ
ಸಿನಿಮಾ ನಟಿ ಸ್ವಸ್ತಿಕಾ, ನಿರ್ಮಾಪಕ ಸಂದೀಪ್ ಎಂಬುವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ನಟಿಯ ಚಿತ್ರಗಳನ್ನು ಅಸಭ್ಯವಾಗಿ ತಿದ್ದಿ ಹಂಚಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೀ ಟೂ (Me Too) ಅಭಿಯಾನದಿಂದ ಚಿತ್ರರಂಗದಲ್ಲಿ (Movie Industry) ನಡೆಯುತ್ತಿದ್ದ, ನಡೆದಿದ್ದ ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದವು. ಹಾಗಿದ್ದರೂ ಸಹ ಈ ಪ್ರಕರಣಗಳು ಕಡಿಮೆಯಾದಂತಿಲ್ಲ. ಆಗೊಮ್ಮೆ ಈಗೊಮ್ಮೆ ನಟಿಯರು ದೌರ್ಜನ್ಯಕ್ಕೆ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ. ಇದೀಗ ಬೆಂಗಾಲಿ (Bengali) ನಟಿಯೊಬ್ಬರು ನಿರ್ಮಾಪಕನೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ಈಡಾಗಿದ್ದು, ದೂರು ದಾಖಲಿಸಿದ್ದಾರೆ.
ಬೆಂಗಾಲಿ ನಟಿ ಸ್ವಸ್ತಿಕಾ ಮುಖರ್ಜಿ, ನಿರ್ಮಾಪಕ ಸಂದೀಪ್ ಸರ್ಕಾರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ದೆಹಲಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಸ್ವಸ್ತಿಕಾ ಮುಖರ್ಜಿ, ಬೆಂಗಾಳಿ ಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರಾಗಿದ್ದು, ಇತ್ತೀಚೆಗಷ್ಟೆ ಅವರು ಶಿಬ್ತುರ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾದ ಸಹ ನಿರ್ಮಾಪಕ ಆಗಿರುವ ಸಂದೀಪ್ ಸರ್ಕಾರ್, ಇ ಮೇಲ್ ಮೂಲಕ ತಮಗೆ ಬೆದರಿಕೆ ಹಾಕುವ ಜೊತೆಗೆ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ್ದಾರೆ ಎಂದು ಸ್ವಸ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂದೀಪ್ ಸರ್ಕಾರ್ ಬಳಿ ತಾವು ಈ ವರೆಗೆ ಒಮ್ಮೆಯೂ ಮಾತನಾಡಿಲ್ಲ, ನಮ್ಮೊಟ್ಟಿಗೆ ಶಿಬ್ತುರ್ ಸಿನಿಮಾದ ಮತ್ತೊಬ್ಬ ಸಹ ನಿರ್ಮಾಪಕ ಅಜಂತಾ ಸಿನ್ಹಾ ರಾಯ್ ಅವರೇ ಸಂಪರ್ಕ ಮಾಡುತ್ತಿದ್ದರು. ಆದರೆ ಸಿನಿಮಾದ ಶೂಟಿಂಗ್ ಎಲ್ಲ ಮುಗಿದ ಮೇಲೆ ಒಮ್ಮೆಲೆ ಹಠಾತ್ ಆಗಿ ಸಂದೀಪ್ ಸರ್ಕಾರ್ ಕಡೆಯಿಂದ ಇ-ಮೇಲ್ಗಳು ಬರಲು ಪ್ರಾರಂಭವಾದವು. ನಾನು ಅಮೆರಿಕದ ನಿವಾಸಿಯಾಗಿದ್ದು, ನೀನು ನನ್ನೊಟ್ಟಿಗೆ ‘ಸಹಕರಿಸದಿದ್ದರೆ’ ನಿನಗೆ ಅಮೆರಿಕ ವೀಸಾ ದೊರೆಯದಂತೆ ಮಾಡುತ್ತೇನೆ, ನನಗೆ ಪೊಲೀಸ್ ಆಯುಕ್ತರು ಗೊತ್ತು, ಸ್ಟೇಷನ್ಗೆ ಅಲೆಯುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ ನಟಿ ಸ್ವಸ್ತಿಕಾ.
ನನಗೆ ಸಂದೀಪ್ ಸರ್ಕಾರ್ ಯಾರೆಂಬುದು ಸಹ ಗೊತ್ತಿಲ್ಲ. ನಾನು ನನ್ನ ಪಾಡಿಗೆ ಸಿನಿಮಾ ಶೂಟಿಂಗ್ ಡಬ್ಬಿಂಗ್ ಮುಗಿಸಿದೆ. ಸಿನಿಮಾದ ಪ್ರಚಾರಕ್ಕೆ ಹೋಗುವ ಇಚ್ಛೆ ನನಗಿತ್ತು, ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ನನಗೆ ಹೇಳದೇ ಮುಂದೂಡಿದರು. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದೂ ನನಗೆ ಗೊತ್ತಾಗಲಿಲ್ಲ. ಆದರೂ ಅದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಅದಾದ ಬಳಿಕ ನನ್ನ ಡೇಟ್ಸ್ ಲಾಕ್ ಆಗಿರುವ ಬಗ್ಗೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಮಾಹಿತಿ ನೀಡಿ ನನ್ನ ಕೆಲಸಗಳಲ್ಲಿ ನಾನು ತೊಡಗಿಕೊಂಡೆ” ಎಂದಿದ್ದಾರೆ ನಟಿ ಸ್ವಸ್ತಿಕಾ.
ಇದನ್ನೂ ಓದಿ: Ravi Kishan: ಮೀಟೂ ಅನುಭವ ಬಿಚ್ಚಿಟ್ಟ ನಟ, ಸಂಸದ ರವಿಕಿಶನ್
ಈ ವೇಳೆ ಸ್ವಸ್ತಿಕಾರ ಮ್ಯಾನೇಜರ್ಗೂ ಬೆದರಿಕೆ ಇ-ಮೇಲ್ ಬಂದಿದ್ದು, ಸಂದೀಪ್ನ ಗೆಳೆಯ ಎಂದು ಹೇಳಿಕೊಂಡ ರವೀಶ್ ಶರ್ಮಾ ಎಂಬ ವ್ಯಕ್ತಿಯೊಬ್ಬ, ತಾನು ಅಪ್ರತಿಮ ಕಂಪ್ಯೂಟರ್ ಹ್ಯಾಕರ್ ಆಗಿದ್ದ್ದು, ಸ್ವಸ್ತಿಕಾರ ಚಿತ್ರಗಳನ್ನು ಎಡಿಟ್ ಮಾಡಿ ವೆಬ್ಸೈಟ್ಗಳಲ್ಲಿ ಹಂಚಿಕೊಳ್ಳುವ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ. ಸಂದೀಪ್ ಸಹ ರವೀಶ್ ಶರ್ಮಾ ತಮ್ಮ ಗೆಳೆಯ ಎಂದು ಒಪ್ಪಿಕೊಂಡಿದ್ದಾರೆಂದು ಸ್ವಸ್ತಿಕಾ ಹೇಳಿದ್ದಾರೆ. ಇದರ ನಡುವೆ ತಮ್ಮ ಕೆಲವು ಎಡಿಟೆಡ್ ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ಕಾರಣಕ್ಕೆ ತಾವು ದೆಹಲಿ ಪೊಲೀಸರ ಬಳಿ ಲೈಂಗಿಕ ಕಿರುಕುಳದ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ. ದೂರು ನೀಡುವ ಮುನ್ನ ಶಿಬ್ತುರ್ ಸಿನಿಮಾದ ನಿರ್ದೇಶಕರ ಬಳಿ ಚರ್ಚೆ ಮಾಡಿರುವುದಾಗಿಯೂ ನಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ