ಕ್ಷಣಾರ್ಧದಲ್ಲಿ ನೆಲಕ್ಕುರುಳಿತು ಬೃಹತ್ ವೇದಿಕೆ: ಫರ್ಹಾನ್ ಅಖ್ತರ್ ಸಂಗೀತ ಕಾರ್ಯಕ್ರಮ ರದ್ದು
ಬನ್ಸಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಸಲುವಾಗಿ ಫರ್ಹಾನ್ ಅಖ್ತರ್ ಅವರು ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಬಿರುಗಾಳಿಯ ಕಾರಣದಿಂದ ಕಾರ್ಯಕ್ರಮ ರದ್ದಾಗಿದೆ.
ಬಾಲಿವುಡ್ ನಟ ಫರ್ಹಾನ್ ಅಖ್ತರ್ (Farhan Akhtar) ಅವರು ಗಾಯಕನಾಗಿಯೂ ಫೇಮಸ್ ಆಗಿದ್ದಾರೆ. ಅವರ ಹಾಡಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ನಟನೆ, ನಿರ್ದೇಶನದ ಜೊತೆಗೆ ಅವರು ವಿವಿಧ ನಗರಗಳಿಗೆ ತೆರಳಿ ಸಂಗೀತ ಕಾರ್ಯಕ್ರಮಗಳನ್ನು (Music Concert) ನೀಡುತ್ತಾರೆ. ಬುಧವಾರ (ಏಪ್ರಿಲ್ 5) ಇಂಧೋರ್ನಲ್ಲಿ ಫರ್ಹಾನ್ ಅಖ್ತರ್ ಅವರು ಕಾರ್ಯಕ್ರಮ ಮಾಡಬೇಕಿತ್ತು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಜೋರಾಗಿ ಬೀಸಿದ ಬಿರುಗಾಳಿಯ (Dust Storm) ಕಾರಣದಿಂದ ಬೃಹತ್ ವೇದಿಕೆಯೇ ನೆಲಕ್ಕುರುಳಿದೆ. ಸಂಗೀತ ಕಾರ್ಯಕ್ರಮಕ್ಕೆ ತರಲಾಗಿದ್ದ ಸ್ಪೀಕರ್, ಲೈಟ್ಸ್ ಮುಂತಾದ ಪರಿಕರಗಳಿಗೆ ಹಾನಿ ಆಗಿದೆ. ಬಿರುಗಾಳಿಗೆ ವೇದಿಕೆ ಛಿದ್ರವಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಬನ್ಸಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಸಲುವಾಗಿ ಫರ್ಹಾನ್ ಅಖ್ತರ್ ಅವರು ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಬಿರುಗಾಳಿಯ ಕಾರಣದಿಂದ ಕಾರ್ಯಕ್ರಮ ರದ್ದಾಗಿದೆ. ವಾತಾವರಣ ತಿಳಿಗೊಂಡ ಬಳಿಕ ಏಪ್ರಿಲ್ 7ರಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ವೇದಿಕೆ ಕುಸಿದು ಬಿದ್ದಿದ್ದರಿಂದ ಯಾರಿಗೂ ಪ್ರಾಣಹಾನಿ ಅಥವಾ ಗಾಯಗಳು ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ.
Rig collapses at Farhan Akhtar’s Indore concert due to dust storm#BollywoodNews #FarhanAkhtar #Indoreconcert pic.twitter.com/LazGiqrYZv
— Free Press Journal (@fpjindia) April 6, 2023
ಏಪ್ರಿಲ್ 7ರಂದು ಬನ್ಸಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಸಲುವಾಗಿ ಕಾರ್ಯಕ್ರಮ ಮುಗಿಸಿಕೊಟ್ಟ ನಂತರ ಫರ್ಹಾನ್ ಅಖ್ತರ್ ಅವರು ಹೈದರಾಬಾದ್, ಬೆಂಗಳೂರು, ಕೊಲ್ಕತ್ತಾ, ಜೈಪುರ ಮುಂತಾದೆಡೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ‘ಎಕೋಸ್’ ಆಲ್ಬಂನಲ್ಲಿ ಇರುವ ಒರಿಜಿನಲ್ ಹಾಡುಗಳನ್ನು ಈ ವೇದಿಕೆಯಲ್ಲಿ ಫರ್ಹಾನ್ ಅಖ್ತರ್ ಹಾಡಲಿದ್ದಾರೆ.
ಇದನ್ನೂ ಓದಿ: ಎರಡನೇ ಮದುವೆ ಮಾಡಿಕೊಂಡ ಫರ್ಹಾನ್ ಅಖ್ತರ್; ಪ್ರೇಯಸಿ ಶಿಬಾನಿ ಜತೆ ಸಿಂಪಲ್ ವಿವಾಹ
ಸಿನಿಮಾ ನಿರ್ದೇಶನದಲ್ಲೂ ಫರ್ಜಾನ್ ಅಖ್ತರ್ ಅವರು ಬ್ಯುಸಿ ಆಗಿದ್ದಾರೆ. ಒಂದೆಡೆ ಸಂಗೀತ ಕಾರ್ಯಕ್ರಮಗಳನ್ನು ಮಾಡುತ್ತಾ, ಇನ್ನೊಂದು ಕಡೆ ಸಿನಿಮಾ ನಿರ್ದೇಶನಕ್ಕೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ‘ಜೀ ಲೇ ಝರಾ’ ಸಿನಿಮಾ ಸಿದ್ಧವಾಗಲಿದೆ. ಈ ಚಿತ್ರದ ಶೂಟಿಂಗ್ಗೆ ಸಿದ್ಧತೆ ನಡೆಯುತ್ತಿದೆ. ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. 2023ರ ಕೊನೆಯಲ್ಲಿ ‘ಜೀ ಲೇ ಝರಾ’ ಚಿತ್ರಕ್ಕೆ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Farhan Akhtar: ದೀಪಾವಳಿ ಆಚರಿಸಿದ ಫರ್ಹಾನ್ ಅಖ್ತರ್ ವಿರುದ್ಧ ದ್ವೇಷ ಕಾರುತ್ತಿರುವ ಒಂದು ವರ್ಗದ ನೆಟ್ಟಿಗರು
2001ರಿಂದಲೂ ಫರ್ಹಾನ್ ಅಖ್ತರ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ದಿಲ್ ಚಾಹ್ತಾ ಹೈ’, ‘ಲಕ್ಷ್ಯ’, ‘ಡಾನ್’, ‘ಡಾನ್ 2’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಜಿಂದಗಿ ನಾ ಮಿಲೇಗಿ ದೋಬಾರಾ’, ‘ಭಾಗ್ ಮಿಲ್ಕಾ ಭಾಗ್’ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ಅವರು ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.