‘ನಾನು ಪಾಕಿಸ್ತಾನದಲ್ಲೂ ಇಲ್ಲ, ಭಾರತದಲ್ಲೂ ಇಲ್ಲ’; ಕಬೀರ್ ಖಾನ್ ಬೇಸರದ ಮಾತು
ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತೇವೆ ಎಂದಮೇಲೆ ಈ ರೀತಿಯ ದ್ವೇಷದ ಮಾತುಗಳನ್ನು ಕೇಳಲು ಸಿದ್ಧರಾಗಿರಬೇಕು ಎಂಬುದು ಕಬೀರ್ ಅವರ ಅಭಿಪ್ರಾಯ. ಈ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಕಬೀರ್ ಹೇಳಿದ್ದಾರೆ.
ಕಬೀರ್ ಖಾನ್ (Kabir Khan) ಬಾಲಿವುಡ್ನ ಬೇಡಿಕೆಯ ನಿರ್ದೇಶಕ. ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇತ್ತೀಚೆಗೆ ತೆರೆಗೆ ಬಂದ ‘83’ ಚಿತ್ರವನ್ನು (83 Movie) ಕಬೀರ್ ಖಾನ್ ಅವರೇ ನಿರ್ದೇಶನ ಮಾಡಿದ್ದರು. ಈ ಮೊದಲಿನಿಂದಲೂ ಅವರಿಗೆ ಸಾಕಷ್ಟು ಹೇಟ್ ಮೆಸೇಜ್ಗಳೂ ಬರುತ್ತಲೇ ಇವೆ. ‘ನೀವು ಪಾಕಿಸ್ತಾನಕ್ಕೆ ಹೋಗಿ’ ಎಂಬ ಕಮೆಂಟ್ಗಳು ಅವರಿಗೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾ (Social Media) ಬಳಕೆ ಮಾಡುತ್ತೇವೆ ಎಂದಮೇಲೆ ಈ ರೀತಿಯ ದ್ವೇಷದ ಮಾತುಗಳನ್ನು ಕೇಳಲು ಸಿದ್ಧರಾಗಿರಬೇಕು ಎಂಬುದು ಅವರ ಅಭಿಪ್ರಾಯ. ಈ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಕಬೀರ್ ಹೇಳಿದ್ದಾರೆ.
ಎಬಿಪಿ ಸಮ್ಮೇಳನದಲ್ಲಿ ಮಾತನಾಡಿದ ಕಬೀರ್, ‘ಸಾಮಾಜಿಕ ಜಾಲತಾಣದಿಂದ ಹೆಚ್ಚು ನೆಗೆಟಿವಿಟಿ ಹರಡುತ್ತದೆ. ಇದುವೇ ವಾಸ್ತವ. ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವಿಟಿಗಿಂತ ನೆಗೆಟಿವಿಟಿಯೇ ಹೆಚ್ಚು. ನನ್ನ ಹೆಸರಲ್ಲಿ ಖಾನ್ ಇದೆ ಎಂಬ ಕಾರಣಕ್ಕೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಸೋಶೀಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ. ನಾನು ಒಮ್ಮೆ ಪಾಕಿಸ್ತಾನಕ್ಕೆ ಹೋಗಿದ್ದೆ. ಅಲ್ಲಿ ಲಷ್ಕರ್ ಸಂಘಟನೆ ಅವರು ನನಗೆ ಭಾರತಕ್ಕೆ ಹಿಂತಿರುಗಲು ಹೇಳಿದರು. ಹಾಗಾಗಿ ನಾನು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ ಎಂಬಂತಾಗಿದೆ’ ಎಂದಿದ್ದಾರೆ ಅವರು.
‘ಪ್ರತಿಯೊಬ್ಬ ಸಿನಿಮಾ ಮೇಕರ್ಗಳು ತಾವು ಮಾಡುವ ಸಿನಿಮಾದಲ್ಲಿ ತಮ್ಮದೇ ಆದ ಆಲೋಚನೆಗಳನ್ನು ತೋರಿಸಬೇಕು. ನಾವು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತ್ರಿವರ್ಣ ಧ್ವಜವನ್ನು ತೋರಿಸುತ್ತೇವೆ. ಆದರೆ ಇಂದು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಎರಡೂ ಒಂದೇ ಅಲ್ಲ. ಎರಡರ ನಡುವೆ ವ್ಯತ್ಯಾಸ ಇದೆ’ ಎಂದಿದ್ದಾರೆ ಕಬೀರ್.
ಕಬೀರ್ ಖಾನ್ ನಟನೆಯ ‘83’ ಚಿತ್ರ ವಿಮರ್ಶೆಯಲ್ಲಿ ಗೆದ್ದಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಘಟನೆಯನ್ನು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟ ಖ್ಯಾತಿ ಕಬೀರ್ಗೆ ಸಲ್ಲಿಕೆ ಆಗುತ್ತದೆ. ಈ ಸಿನಿಮಾ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಿತ್ತು. ಇತ್ತೀಚೆಗೆ ಚಿತ್ರ ಒಟಿಟಿಯಲ್ಲಿ ತೆರೆಗೆ ಬಂದಿದೆ. ‘83’ ಕ್ಲಾಸಿಕ್ ಸಿನಿಮಾ. ಮಲ್ಟಿಪ್ಲೆಕ್ಸ್ನಲ್ಲಿ ಈ ಸಿನಿಮಾಗೆ ಭಾರೀ ಬೇಡಿಕೆ ಇತ್ತು. ಆದರೆ, ಕೊವಿಡ್ ಕಾರಣದಿಂದ ಅನೇಕರು ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ವಿಶೇಷ ಎಂದರೆ ಎರಡು ಪ್ಲಾಟ್ಫಾರ್ಮ್ಗಳಲ್ಲಿ ಈ ಚಿತ್ರ ರಿಲೀಸ್ ಆಗಿದೆ. ನೆಟ್ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ‘83’ ಚಿತ್ರದ ಹಿಂದಿ ವರ್ಷನ್ ರಿಲೀಸ್ ಆದರೆ, ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಅವತರಣಿಕೆಯ ಚಿತ್ರ ಡಿಸ್ನಿಯಲ್ಲಿ ಬಿಡುಗಡೆ ಆಗಿದೆ.
ಇದನ್ನೂ ಓದಿ: ‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್ ಖಾನ್
ದ್ರಾವಿಡ್ ಬಯೋಪಿಕ್ನಲ್ಲಿ ಸುದೀಪ್ ಮುಖ್ಯಭೂಮಿಕೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್ ಖಾನ್