ಸೆಲೆಬ್ರಿಟಿಗಳು ಹಾಗೂ ಸಿನಿಮಾಗಳ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದ ಕಮಾಲ್ ಆರ್. ಖಾನ್ (Kamaal R. Khan) ನಾನಾ ಕೇಸ್ಗಳಲ್ಲಿ ಜೈಲು ಪಾಲಾಗಿದ್ದಾರೆ. ವಿವಾದಾತ್ಮಕ ಹೇಳಿಕೆ, ಲೈಂಗಿಕ ಕಿರುಕುಳ ಪ್ರಕರಣಗಳು ಕಮಾಲ್ ವಿರುದ್ಧ ದಾಖಲಾಗಿದೆ. ಈಗ ಅವರಿಗೆ ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ದೊರೆತಿದ್ದು, ಮತ್ತೊಂದು ಪ್ರಕರಣದಲ್ಲಿ ಅವರು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ವಿವಾದಾತ್ಮಕ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಅವರು ಜೈಲಿನಲ್ಲೇ ಮುಂದುವರಿಯುತ್ತಿದ್ದಾರೆ.
ಕಮಾಲ್ ಖಾನ್ ವಿರುದ್ಧ ಎರಡೆರಡು ಕೇಸ್ ದಾಖಲಾಗಿದೆ. ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ಅನ್ನು ಕಮಾಲ್ ಆರ್. ಖಾನ್ ಮಾಡಿದ್ದರು. ಈ ಕೇಸ್ನಲ್ಲಿ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾದರು. ಇದಾದ ಬೆನ್ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಕೂಡ ಬೆಳಕಿಗೆ ಬಂದಿದ್ದು ಈ ಸಂಬಂಧ ಕೇಸ್ ದಾಖಲಾಗಿದೆ.
ಎರಡೂ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕಮಾಲ್ ಆರ್. ಖಾನ್ ಬೋರಿವಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಕೋರಿದ್ದರು. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾತ್ರ ಕಮಾಲ್ಗೆ ಜಾಮೀನು ಸಿಕ್ಕಿದೆ. ವಿವಾದಾತ್ಮಕ ಟ್ವೀಟ್ ಪ್ರಕರಣ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಹೀಗಾಗಿ, ಅವರು ಜೈಲಿನಲ್ಲಿ ಇರುವುದು ಅನಿವಾರ್ಯ ಆಗಿದೆ. ಕಮಾಲ್ ಖಾನ್ ಆಗಸ್ಟ್ 30ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾದರು. ದುಬೈನಿಂದ ಅವರು ಹಿಂದಿರುವಾಗ ಅರೆಸ್ಟ್ ಆದರು.
ಇದನ್ನೂ ಓದಿ: KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್ ಆರ್. ಖಾನ್ ಅರೆಸ್ಟ್; ಒಂದೇ ವಾರದಲ್ಲಿ ಡಬಲ್ ಸಂಕಟ
ಹೀರೋ ಆಗಬೇಕು ಎಂದು ಕನಸು ಕಂಡು ಚಿತ್ರರಂಗಕ್ಕೆ ಕಮಾಲ್ ಎಂಟ್ರಿ ಕೊಟ್ಟರು. ಆದರೆ, ಯಶಸ್ಸು ಅವರನ್ನು ಕೈ ಹಿಡಿಯಲಿಲ್ಲ. ಮಾಡಿದ ಸಿನಿಮಾಗಳು ಸೋಲು ಕಂಡವು. ಆ ಬಳಿಕ ಅವರು ತಮ್ಮನ್ನು ತಾವು ವಿಮರ್ಶಕ ಎಂದು ಘೋಷಿಸಿಕೊಂಡರು. ಹೈಪ್ ಪಡೆದ ಸಿನಿಮಾಗಳನ್ನು ನೋಡಿ ಕೆಟ್ಟ ಕಮೆಂಟ್ ಮಾಡುವ ಚಾಳಿಯನ್ನು ಅವರು ಬೆಳೆಸಿಕೊಂಡರು. ಸಲ್ಮಾನ್ ಖಾನ್ ಮೊದಲಾದ ಸ್ಟಾರ್ ಹೀರೋಗಳ ಬಗ್ಗೆ ಅವರು ಕೀಳಾಗಿ ಮಾತನಾಡಿದ್ದಿದೆ. ಈ ಮೊದಲು ಸಲ್ಮಾನ್ ಖಾನ್ ಅವರು ಕಮಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.