
ಬಾಲಿವುಡ್‌ನ ವಿವಾದಾತ್ಮಕ ಹಾಗೂ ಪ್ರತಿಭಾವಂತ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತಾ’ (Bharat Bhagya Vidhata) ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಗುರುವಾರ (ಮೇ 28) ಈ ಚಿತ್ರದಲ್ಲಿನ ತಮ್ಮ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕಂಗನಾ (Kangana Ranaut) ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಅವರು ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂಸಾಚಾರದ ನಡುವೆಯೂ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಒಟ್ಟಾಗಿ ನಿಲ್ಲುವ ಕಥಾಹಂದರವನ್ನು ಈ ಪೋಸ್ಟರ್ ಸೂಚಿಸುತ್ತಿದೆ.
ಮೋಷನ್ ಪೋಸ್ಟರ್ ಮೂಲಕ ಕಂಗನಾ ಅವರು ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಮುಖದ ಮೇಲೆ ಗಾಯದ ಗುರುತುಗಳು ಹಾಗೂ ಕೆನ್ನೆಯ ಮೇಲೆ ರಕ್ತದ ಕಲೆಗಳೊಂದಿಗೆ, ಉರಿಯುತ್ತಿರುವ ಬೆಂಕಿಯ ನಡುವೆ ಕಂಗನಾ ನಡೆದು ಬರುತ್ತಿರುವುದನ್ನು ಇದರಲ್ಲಿ ಕಾಣಬಹುದು. ನರ್ಸ್ ಸಮಸ್ತ್ರ ಧರಿಸಿರುವ ಕಂಗನಾ, ರೋಗಿಯೊಬ್ಬರಿಗೆ ಸಹಾಯ ಮಾಡುತ್ತಿರುವಂತೆ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ.
ಈ ಹಿಂದೆ ಚಿತ್ರತಂಡವು ಮೊದಲ ಪೋಸ್ಟರ್ ಬಿಡುಗಡೆ ಮಾಡಿ, ಜೂನ್ 12ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಘೋಷಿಸಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಪೈಪೋಟಿ ಜೋರಾಗಲಿದೆ. ಜೂನ್ 12ರಂದೇ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕ್ಲ್ಯಾಶ್ ಏರ್ಪಡಲಿದೆ. ಇಮ್ತಿಯಾಜ್ ಅಲಿ ನಿರ್ದೇಶನದ ‘ಮೈ ವಾಪಸ್ ಆವುಂಗಾ’, ಮನೋಜ್ ಬಾಜಪೇಯಿ ನಟನೆಯ ‘ಗವರ್ನರ್: ದಿ ಸೈಲೆಂಟ್ ಸೇವಿಯರ್’ ಮತ್ತು ವಿಕ್ರಮ್ ಭಟ್ ನಿರ್ದೇಶನದ ‘ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್’ ಚಿತ್ರಗಳು ಅದೇ ದಿನ ತೆರೆ ಕಾಣುತ್ತಿವೆ.
‘ಭಾರತ್ ಭಾಗ್ಯ ವಿಧಾತಾ’ ಸಿನಿಮಾವು ನೈಜ ಘಟನೆಗಳನ್ನು ಆಧರಿಸಿದೆ. ಮುಂಬೈನ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಆಸ್ಪತ್ರೆಯೊಂದರ ಸಿಬ್ಬಂದಿಯು ಪ್ರಾಣದ ಹಂಗು ತೊರೆದು 400 ರೋಗಿಗಳನ್ನು ಹೇಗೆ ರಕ್ಷಿಸಿದರು ಎಂಬ ರೋಚಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಆ ಕಾರಣದಿಂದಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ‘ನಾನು ತಾಳಿ ಧರಿಸಿದ್ದು ದೊಡ್ಡ ವಿಷಯ ಅಲ್ಲ’; ಸೀಕ್ರೆಟ್ ಮದುವೆ ವದಂತಿಗೆ ಕಂಗನಾ ಸ್ಪಷ್ಟನೆ
ಚಿತ್ರದ ಕುರಿತು ‘ವೆರೈಟಿ ಇಂಡಿಯಾ’ ಜೊತೆ ಮಾತನಾಡಿದ ಕಂಗನಾ, ‘ನಾವು ಯಾವಾಗಲೂ ಅಬ್ಬರದ ದೇಶಭಕ್ತಿಯನ್ನು ಆಚರಿಸುತ್ತೇವೆ. ಆದರೆ ನಿಜವಾದ ಧೈರ್ಯವು ಅತ್ಯಂತ ಮೌನವಾಗಿರುತ್ತದೆ. ಅದು ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಯುತ್ತದೆ. ಭಾರತ್ ಭಾಗ್ಯ ವಿಧಾತಾ ಎಂಬುದು ಧೈರ್ಯ, ತ್ಯಾಗ, ಮಾನವೀಯತೆ ಮತ್ತು ಏಕತೆಯ ಕಥೆ. ಭಯೋತ್ಪಾದನೆ ಮತ್ತು ಅಮಾಯಕರ ಜೀವನದ ನಡುವೆ ಗೋಡೆಯಾಗಿ ನಿಂತ ಸಾಮಾನ್ಯ ಜನರ ಕಥೆಯಿದು. ಇದು ಶುದ್ಧ ರೂಪದ ದೇಶಭಕ್ತಿ. ಕಠಿಣ ಪರಿಸ್ಥಿತಿಯಲ್ಲಿ ಮುಂಬೈ ನಗರವನ್ನು ಒಟ್ಟಾಗಿ ಹಿಡಿದಿಟ್ಟ ಜೀವಗಳಿಗೆ ನಮನ ಸಲ್ಲಿಸುವ ಈ ಸಿನಿಮಾದ ಭಾಗವಾಗಲು ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.