ಎ.ಆರ್. ರೆಹಮಾನ್ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ: ಕಂಗನಾ ಆರೋಪ
ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ಎ.ಆರ್. ರೆಹಮಾನ್ ಅವರನ್ನು ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ ಎಂದು ಕಂಗನಾ ಅವರು ಹೇಳಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ‘ಛಾವ’ ಸಿನಿಮಾ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಆ ಸಿನಿಮಾಗೆ ಎ.ಆರ್. ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಆದರೂ ಕೂಡ ಅವರಿಗೆ ಈ ಸಿನಿಮಾ ಬಗ್ಗೆ ತಕರಾರು ಇದೆ. ಆ ಚಿತ್ರವು ಜನರ ಒಗ್ಗಟ್ಟನ್ನು ಒಡೆಯುತ್ತದೆ ಎಂಬುದು ಅವರ ಅಭಿಪ್ರಾಯ. ಈ ರೀತಿಯ ಹೇಳಿಕೆಗಳನ್ನು ನೀಡಿದ ಬಳಿಕ ಎ.ಆರ್. ರೆಹಮಾನ್ ಅವರನ್ನು ಕಂಗನಾ ರಣಾವತ್ (Kangana Ranaut) ಟೀಕಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಪ್ರೀತಿಯ ಎ.ಆರ್. ರೆಹಮಾನ್ ಅವರೇ, ನಾನು ಕೇಸರಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂಬ ಕಾರಣಕ್ಕೆ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಆಗುತ್ತದೆ. ಆದರೂ ಕೂಡ ನಾನು ನಿಮ್ಮಷ್ಟು ಪೂರ್ವಾಗ್ರಹ ಪೀಡಿತ ಹಾಗೂ ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಇದನ್ನು ಬರೆದುಕೊಂಡಿದ್ದಾರೆ.
‘ನಾನು ನನ್ನ ನಿರ್ದೇಶನದ ಮೊದಲ ಸಿನಿಮಾ ‘ಎಮರ್ಜೆನ್ಸಿ’ ಕಥೆಯನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ಕಥೆ ಕೇಳುವುದು ಬಿಡಿ, ನೀವು ನನ್ನನ್ನು ಭೇಟಿ ಮಾಡಲು ಕೂಡ ನಿರಾಕರಿಸಿದಿರಿ. ಪ್ರೊಪಗಾಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಅಂತ ನನಗೆ ಯಾರೋ ಹೇಳಿದರು. ವಿಪರ್ಯಾಸ ಏನೆಂದರೆ, ಎಲ್ಲ ವಿಮರ್ಶಕರು ಎಮರ್ಜೆನ್ಸಿ ಸಿನಿಮಾವನ್ನು ಮಾಸ್ಟರ್ಪೀಸ್ ಅಂತ ಕರೆದರು’ ಎಂದಿದ್ದಾರೆ ಕಂಗನಾ ರಣಾವತ್.
‘ನಿಷ್ಪಕ್ಷಪಾತವಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ಮುಖಂಡರು ಕೂಡ ಎಮರ್ಜೆನ್ಸಿ ಸಿನಿಮಾವನ್ನು ಹೊಗಳಿದರು. ಆದರೆ ನೀವು ನಿಮ್ಮ ದ್ವೇಷದಿಂದ ಕುರುಡಾಗಿದ್ದೀರಿ. ನಿಮ್ಮನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತದೆ’ ಎಂದು ಕಂಗನಾ ರಣಾವತ್ ಅವರು ಪೋಸ್ಟ್ ಮಾಡಿದ್ದಾರೆ. ಎ.ಆರ್. ರೆಹಮಾನ್ ಹೇಳಿಕೆ ಮತ್ತು ಕಂಗನಾ ರಣಾವತ್ ಆರೋಪದಿಂದ ಚಿತ್ರರಂಗದಲ್ಲಿ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್ಗಳು ಬರುತ್ತಿಲ್ಲ; ಎಆರ್ ರೆಹಮಾನ್
ವಸ್ತ್ರ ವಿನ್ಯಾಸಕಿ ಮಸಾಬಾ ಗುಪ್ತಾ ಅವರ ಮೇಲೂ ಕಂಗನಾ ರಣಾವತ್ ಅವರು ಕಿಡಿಕಾರಿದ್ದಾರೆ. ‘ಮಸಾಬಾ ವಿನ್ಯಾಸ ಮಾಡಿದ ಸೀರೆಯನ್ನು ಧರಿಸಿ ನಾನು ರಾಮಜನ್ಮಭೂಮಿಗೆ ಹೋಗಬಾರದು ಎಂದು ಹೇಳಿದ್ದರು. ನಾನು ಕಾರಿನಲ್ಲಿ ಕುಳಿತು ಅತ್ತಿದ್ದೆ’ ಎಂದು ಕಂಗನಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




