Kangana Ranaut: ‘ಏಜೆಂಟ್ ಅಗ್ನಿ’ಯಾಗಿ ಖಡಕ್ ಮಾಸ್ ಅವತಾರದಲ್ಲಿ ಕಂಗನಾ; ಚಿತ್ರದ ಬಿಡುಗಡೆ ಯಾವಾಗ?
Dhaakad: ತಲೈವಿ ಚಿತ್ರದ ಯಶಸ್ಸಿನಲ್ಲಿರುವಾಗಲೇ ಕಂಗನಾ ತಮ್ಮ ಮುಂದಿನ ಚಿತ್ರದ ಬಿಡುಗಡೆಯನ್ನು ಘೋಷಿಸಿದ್ದಾರೆ. ಆ ಚಿತ್ರ ಹಾಲಿವುಡ್ ಮಾದರಿಯಲ್ಲಿರಲಿದೆ ಎಂದೂ ಚಿತ್ರತಂಡ ಈಗಾಗಲೇ ಘೋಷಿಸಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ‘ತಲೈವಿ’ ಚಿತ್ರದ ಅಭಿನಯಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯ ಸಂತಸದಲ್ಲಿದ್ದಾರೆ. ಈ ನಡುವೆ ಅವರ ಅಭಿಮಾನಿಗಳಿಗೆ ಖುಷಿ ನೀಡುವ ಸುದ್ದಿಯೊಂದು ಎದುರಾಗಿದೆ. ಈಗಾಗಲೇ ಪೋಸ್ಟರ್ ಮುಖಾಂತರ ಕುತೂಹಲ ಹುಟ್ಟಿಸಿರುವ ‘ಧಾಕಡ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2022ರ ಏಪ್ರಿಲ್ 8ರಂದು ಚಿತ್ರಮಂದಿರಗಳಲ್ಲಿ ‘ಧಾಕಡ್’ ಬಿಡುಗಡೆಯಾಗಲಿದೆ. ಈ ಚಿತ್ರ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿರಲು ಕಾರಣ, ಈ ಚಿತ್ರದಲ್ಲಿ ಕಂಗನಾ ಲೇಡಿ ಸೂಪರ್ ಹೀರೋ ‘ಏಜೆಂಟ್ ಅಗ್ನಿ’ಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಸೂಪರ್ ಹೀರೋ ಮಾದರಿಯ ಮೊತ್ತಮೊದಲ ಆಕ್ಷನ್- ಥ್ರಿಲ್ಲರ್ ಸಿನಿಮಾ ಇದಾಗಿದೆ.
ಕೆಲವು ತಿಂಗಳ ಹಿಂದಷ್ಟೇ ‘ಧಾಕಡ್’ ಚಿತ್ರದ ಚಿತ್ರೀಕರಣ ಮುಗಿದಿತ್ತು. ಇದೀಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಚಿತ್ರದಲ್ಲಿ ಕಂಗನಾ ಜೊತೆಯಲ್ಲಿ ಅರ್ಜುನ್ ರಾಮ್ ಪಾಲ್ ಹಾಗೂ ದಿವ್ಯಾ ದತ್ತಾ ಅಭಿನಯಿಸಿದ್ದಾರೆ. ಕಂಗನಾ ಏಜೆಂಟ್ ಅಗ್ನಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಚಿತ್ರವು ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣೆಯ ಕತೆಯನ್ನು ಒಳಗೊಂಡಿದೆ. ದೊಡ್ಡ ಬಜೆಟ್ ಚಿತ್ರ ಇದಾಗಿದ್ದು, ಭೋಪಾಲ್, ಬುಡಾಪೆಸ್ಟ್ ಹಾಗೂ ಮುಂಬೈನಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ.
ಚಿತ್ರದ ಬಿಡುಗಡೆಯ ಕುರಿತಂತೆ ಕಂಗನಾ ಮಾತನಾಡಿದ್ದು, ‘ಧಾಕಡ್ ಮಾದರಿಯ ಚಿತ್ರಗಳನ್ನು ದೊಡ್ಡ ಸ್ಕ್ರೀನ್ ಗಳಲ್ಲೇ ನೋಡುವುದು ಒಳ್ಳೆಯ ಅನುಭವ ನೀಡುತ್ತದೆ. ಈ ಚಿತ್ರವನ್ನು ತಯಾರಿಸಿರುವುದು ಕೂಡ ದೊಡ್ಡ ಪರದೆಯ ಮೇಲೆ ಪ್ರದರ್ಶಿಸುವ ಮಹತ್ವಾಕಾಂಕ್ಷೆಯಿಂದ. ಈ ಚಿತ್ರವು ಮಹಿಳೆಯರನ್ನು ಪ್ರತಿಬಿಂಬಿಸುತ್ತದೆ. ವೀಕ್ಷಕರನ್ನು ಏಪ್ರಿಲ್ 8ರಂದು ಭೇಟಿಯಾಗಲು ಬಹಳ ಕಾತರದಿಂದ ಕಾಯುತ್ತಿದ್ದೇನೆ’ ಎಂದು ಕಂಗನಾ ಪೋಸ್ಟ್ ಮುಖಾಂತರ ತಿಳಿಸಿದ್ದಾರೆ. ಕಂಗನಾ ಪೋಸ್ಟ್ಗೆ ಟಾಲಿವುಡ್ ನಟಿ ಸಮಂತಾ ಕೂಡ ಕಾಮೆಂಟ್ ಮಾಡಿದ್ದು, ಕಂಗನಾ ಲುಕ್ಗಳು ಅದ್ಭುತವಾಗಿದೆ ಎಂಬರ್ಥದಲ್ಲಿ ಫೈರ್ ಎಮೋಜಿಗಳ ಮುಖಾಂತರ ಕಾಮೆಂಟ್ ಮಾಡಿದ್ದಾರೆ.
‘ಧಾಕಡ್’ ಚಿತ್ರದ ಬಿಡುಗಡೆ ಕುರಿತಂತೆ ಕಂಗನಾ ಹಂಚಿಕೊಂಡಿರುವ ಪೋಸ್ಟ್:
View this post on Instagram
ಧಾಕಡ್ ಚಿತ್ರದ ನಿರ್ದೇಶಕ ರಜ್ನೀಶ್ ರಾಜಿ ಘಾಯ್ ಚಿತ್ರವು ಹಾಲಿವುಡ್ ಆಕ್ಷನ್ ಚಿತ್ರಗಳಂತಿರಲಿದೆ ಎಂದು ತಿಳಿಸಿದ್ದಾರೆ. ಧಾಕಡ್ ಚಿತ್ರಕ್ಕಾಗಿ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಆಕ್ಷನ್ ದೃಶ್ಯಗಳನ್ನು ಹಾಲಿವುಡ್ ತಂತ್ರಜ್ಞರು ನಿರ್ವಹಿಸಿದ್ದು, ಖ್ಯಾತ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಜಪಾನ್‌ಮೂಲದ ಟೆಟ್ಸುವೋ ನಗಾಟಾ ಧಾಕಡ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವನ್ನು ದೀಪಕ್ ಮುಕುತ್ ಹಾಗೂ ಸೋಹೆಲ್ ಮಕ್ಲಾಯ್ ನಿರ್ಮಾಣ ಮಾಡಿದ್ದು, ಬಾಲಿವುಡ್ನ ಹಳೆಯ ಸಂಪ್ರದಾಯವನ್ನು ಮುರಿದು ಹೊಸ ಮಾದರಿಯ ಚಿತ್ರ ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:
‘ಅನ್ನ ಕೊಡುವ ಚಿತ್ರೋದ್ಯಮ ಮುಚ್ಚಬಾರದು, ಪೈರಸಿಗೆ ಅಂತ್ಯ ಹಾಡ್ತೀವಿ’: ಆರಗ ಜ್ಞಾನೇಂದ್ರ ಭರವಸೆ
Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್ ವೈರಲ್
‘ಭಜರಂಗಿ 2’ ಟ್ರೇಲರ್ ಬಿಡುಗಡೆಗೂ ಮುನ್ನ ಧೂಳೆಬ್ಬಿಸಿದ ಪೋಸ್ಟರ್; ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ