Katrina Kaif: ಕತ್ರಿನಾ- ವಿಕ್ಕಿ ಕಲ್ಯಾಣಕ್ಕೆ ಹಾಜರಾಗಲು ಈ ಅಂಶ ಕಡ್ಡಾಯ; ಇಲ್ಲದಿದ್ದರೆ ಮದುವೆಗೆ ನೋ ಎಂಟ್ರಿ!
Vicky Kaushal: ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕಲ್ಯಾಣದ ಕುರಿತು ಬಾಲಿವುಡ್ ಅಂಗಳದಲ್ಲಿ ಸದ್ದು ಜೋರಾಗಿದೆ. ಇದೀಗ ಮದುವೆಯಲ್ಲಿ ಹಾಜರಾಗುವ ಅತಿಥಿಗಳು ಹೊಸ ವಿಧಾನವೊಂದನ್ನು ಅನುಸರಿಸಲೇಬೇಕು ಎನ್ನಲಾಗಿದೆ.
ಬಾಲಿವುಡ್ ಅಂಗಳದಲ್ಲಿ ಸದ್ಯ ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ಕಲ್ಯಾಣದ್ದೇ ಸುದ್ದಿ. ಈ ತಾರಾ ಜೋಡಿ ಮಾತ್ರ ಇನ್ನೂ ಅಧಿಕೃತವಾಗಿ ಏನನ್ನು ಹೇಳಿಕೊಳ್ಳದಿದ್ದರೂ ಕೂಡ ಪ್ರತಿ ದಿನವೂ ಹೊಸಹೊಸ ಸುದ್ದಿಗಳು ಹೊರಬರುತ್ತಿವೆ. ಇತ್ತೀಚೆಗೆ ಹೊರಬಂದಿದ್ದ ಮಾಹಿತಿಯ ಪ್ರಕಾರ, ಸೆಲೆಬ್ರಿಟಿ ಮದುವೆಗಳಲ್ಲಿ ಕಾಮನ್ ಆಗಿರುವ ‘ನೋ ಫೋನ್ ಪಾಲಿಸಿ’ (ಮದುವೆಗೆ ಫೋನ್ ತರುವಂತಿಲ್ಲ) ವಿಕ್ಕಿ-ಕತ್ರಿನಾ ಮದುವೆಯಲ್ಲೂ ಕಟ್ಟುನಿಟ್ಟಾಗಿ ಪಾಲನೆಯಾಗಲಿದೆಯಂತೆ. ಇದೀಗ ಈ ಅಂಶಕ್ಕೆ ಮತ್ತೊಂದು ಸುದ್ದಿ ಸೇರ್ಪಡೆಯಾಗಿದೆ. ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ, ಆಹ್ವಾನಿತ ಅತಿಥಿಗಳಿಗೆ ಸೀಕ್ರೆಟ್ ಕೋಡ್ (Secret Code) ನೀಡಲಾಗುತ್ತದೆಯಂತೆ. ಮದುವೆಯ ಸ್ಥಳ ಮತ್ತು ಸಂಭ್ರಮಾಚರಣೆಗೆ ಈ ಗುಪ್ತ ಕೋಡ್ ಇದ್ದರೆ ಮಾತ್ರ ಪ್ರವೇಶ ಸಿಗಲಿವೆ. ಅಲ್ಲದೇ ಹೋಟೆಲ್ಗೂ ಇದೇ ನೀತಿ ಅನ್ವಯವಾಗಲಿದೆ ಎನ್ನಲಾಗಿದೆ. ಈ ಮೂಲಕ ಮದುವೆಯನ್ನು ಆದಷ್ಟು ಖಾಸಗಿಯಾಗಿ ನಡೆಸಲು ತಾರಾ ಜೋಡಿ ತೀರ್ಮಾನಿಸಿದಂತಿದೆ.
ರಾಜಸ್ಥಾನದ ಸವಾಯಿ ಮಾಧೋಪುರ್ನಲ್ಲಿರುವ ಹೋಟೆಲ್ನಲ್ಲಿ ಮೂರು ದಿನಗಳ ಕಾಲ ಅದ್ದೂರಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಇದಕ್ಕಾಗಿ ನಗರದ ಹೋಟೆಲ್ಗಳನ್ನು, ಕ್ಯಾಬ್ಗಳನ್ನು ಮುಂಚಿತವಾಗಿ ಬುಕ್ ಮಾಡಲಾಗಿದೆ ಎಂದೂ ಸುದ್ದಿಯಾಗಿದೆ. ಮದುವೆಗೆ ಬಾಲಿವುಡ್ನ ಆಪ್ತ ಗಣ್ಯರನ್ನು ಆಹ್ವಾನಿಸಲಾಗಿದೆ. ಕತ್ರಿನಾಗೆ ಆಪ್ತರಾದ ನಿರ್ದೇಶಕ ಕಬೀರ್ ಖಾನ್ ಮತ್ತು ಅವರ ಪತ್ನಿ ಮಿನಿ ಮಾಥುರ್ ಮುಂಚಿತವಾಗಿಯೇ ಉಪಸ್ಥಿತರಿರಲಿದ್ದಾರಂತೆ. ಕತ್ರಿನಾ ಹಾಗೂ ವಿಕ್ಕಿ ನಿಶ್ಚಿತಾರ್ಥ ಕಬೀರ್ ಮನೆಯಲ್ಲಿಯೇ ನೆರವೇರಿತ್ತು ಎನ್ನಲಾಗಿದೆ.
ನಟರುಗಳಾದ ರೋಹಿತ್ ಶೆಟ್ಟಿ, ಅಲಿ ಅಬ್ಬಾಸ್ ಜಾಫರ್, ನಟಿಯರಾದ ಅನುಷ್ಕಾ ಶರ್ಮಾ, ಆಲಿಯಾ ಭಟ್ ಮೊದಲಾದವರು ಹಾಜರಿರಲಿದ್ದಾರೆ ಎಂದು ವರದಿಯಾಗಿದೆ. ಆಲಿಯಾ ಭಟ್ ಆಗಮಿಸಿದರೆ ಗೆಳೆಯ ರಣಬೀರ್ ಕಪೂರ್ ಕೂಡ ಉಪಸ್ಥಿತರಿರುತ್ತಾರೆ ಎಂಬ ಮಾತು ಕೇಳಿಬಂದಿದೆ.
ಅಚ್ಚರಿಯ ವಿಚಾರವೆಂದರೆ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಇದುವರೆಗೂ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಅವರ ಸಾಮಾಜಿಕ ಜಾಲತಾಣಗಳಲ್ಲೂ ಜೊತೆಯಾಗಿರುವ ಚಿತ್ರಗಳು ಕಾಣಸಿಗುವುದಿಲ್ಲ. ಆದರೆ ಛಾಯಾಗ್ರಾಹಕರ ಕಣ್ಣಿಗೆ ಈರ್ವರು ಅಲ್ಲಲ್ಲಿ ಸೆರೆಯಾಗಿದ್ದಾರೆ. ಸರ್ದಾರ್ ಉಧಾಮ್ ಸಿಂಗ್ ಚಿತ್ರದ ಪ್ರೀಮಿಯರ್ನಲ್ಲಿ ಕತ್ರಿನಾ ಹಾಜರಿದ್ದರು. ಇತ್ತೀಚೆಗೆ ವಿಕ್ಕಿ ಕೌಶಲ್ ಕತ್ರಿನಾ ಮನೆ ಮುಂದೆ ಕಾಣಿಸಿಕೊಂಡಿದ್ದರು. ಈ ಸಂದರ್ಭದ ಚಿತ್ರಗಳು ವೈರಲ್ ಆಗಿವೆ. ಪ್ರಸ್ತುತ ಅಭಿಮಾನಿಗಳು ಈ ತಾರಾ ಜೋಡಿಯ ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಇದನ್ನೂ ಓದಿ:
‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್ ಸಂಬಂಧಿ
ಕತ್ರಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು; ಇದನ್ನು ಪಾಲಿಸಲೇಬೇಕು