ಸಿನಿಮಾದಲ್ಲಿ ನಟಿಸಿದ್ದಕ್ಕೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಿತ್ತು ದುಬಾರಿ ಗಿಫ್ಟ್
ಶಾರುಖ್ ಖಾನ್, ಕತ್ರಿನಾ ಕೈಫ್ ಸೇರಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳಿಗೆ ದುಬಾರಿ ಉಡುಗೊರೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಿನಿಮಾ ಯಶಸ್ಸು ಕಂಡರೆ ನಿರ್ಮಾಪಕರಿಗೆ ಲಾಭ ಆಗುತ್ತದೆ. ಈ ಲಾಭದಲ್ಲಿ ಅವರು ಹೀರೋ/ಹೀರೋಯಿನ್ಗಳಿಗೆ ಪಾಲು ಕೊಟ್ಟ ಉದಾಹರಣೆ ಸಾಕಷ್ಟಿದೆ. ಇನ್ನೂ ಕೆಲವು ಸಂದರ್ಭದಲ್ಲಿ ದುಬಾರಿ ಬೆಲೆಯ ಕಾರು, ಫ್ಲಾಟ್ಗಳನ್ನು ಗಿಫ್ಟ್ ಆಗಿ ನೀಡಿದ್ದಿದೆ. ಈ ರೀತಿಯ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಶಾರುಖ್ ಖಾನ್ (Shah Rukh Khan), ಕತ್ರಿನಾ ಕೈಫ್ ಸೇರಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳಿಗೆ ಈ ರೀತಿಯ ದುಬಾರಿ ಉಡುಗೊರೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕತ್ರಿನಾ ಕೈಫ್ಗೆ ರೆಡ್ ಫೆರಾರಿ
ಕತ್ರಿನಾ ಕೈಫ್ ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರು ವಿಶೇಷ ಹಾಡಿನಲ್ಲಿ ನಟಿಸಿಯೂ ಗಮನ ಸೆಳೆದಿದ್ದಾರೆ. ‘ಅಗ್ನೀಪತ್’ ಸಿನಿಮಾದಲ್ಲಿ ‘ಚಿಕ್ಣಿ ಚಮೇಲಿ..’ ಹಾಡಿಗೆ ಕತ್ರಿನಾ ಡ್ಯಾನ್ಸ್ ಮಾಡಿದ್ದರು. ಈ ಹಾಡು ಸೂಪರ್ ಹಿಟ್ ಆಯಿತು. ಕರಣ್ ಜೋಹರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅವರು ಕತ್ರಿನಾ ಕೈಫ್ಗೆ ಕೆಂಪು ಬಣ್ಣದ ಫೆರಾರಿಯನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಇದರ ಬೆಲೆ 3 ಕೋಟಿ ರೂಪಾಯಿ ಆಗಿತ್ತು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿತ್ತು. ಸಂಭಾವನೆ ಬದಲು ಕತ್ರಿನಾ ಕಾರಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಜಾಕ್ವೆಲಿನ್ ಫರ್ನಾಂಡಿಸ್ಗೆ ಸಲ್ಲು ಗಿಫ್ಟ್
ಸಲ್ಮಾನ್ ಖಾನ್ ಅವರು ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರಿಗೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಸಲ್ಮಾನ್ ಖಾನ್ ಅವರು ಜಾಕ್ವೆಲಿನ್ಗೆ ಬುದ್ಧನ ಪೇಂಟಿಂಗ್ ನೀಡಿದ್ದರು. ಈ ಪೇಂಟಿಂಗ್ ಬೆಲೆ 2.5 ಕೋಟಿ ರೂಪಾಯಿ ಎನ್ನಲಾಗಿದೆ. ಅವರಿಗೆ ಬಾಂದ್ರಾದಲ್ಲಿ ‘ಕಿಕ್’ ತಂಡದಿಂದ 3 ಬಿಎಚ್ಕೆ ಫ್ಲಾಟ್ ಕೂಡ ಗಿಫ್ಟ್ ಆಗಿ ಸಿಕ್ಕಿತ್ತು. ಇದನ್ನೂ ಸಲ್ಮಾನ್ ಖಾನ್ ಅವರೇ ನೀಡಿದ್ದರು ಎನ್ನಲಾಗಿದೆ.
ಅಮಿತಾಭ್ ಬಚ್ಚನ್
ನಟ ಅಮಿತಾಭ್ ಬಚ್ಚನ್ ಅವರ ವಯಸ್ಸು ಈಗ 82. ಈಗಲೂ ದಣಿವರಿಯದೆ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರು ರೋಲ್ಸ್ ರಾಯ್ಸ್ ಫ್ಯಾಂಟಮ್ ಗಿಫ್ಟ್ ನೀಡಿದ್ದರು ಎನ್ನಲಾಗಿದೆ. ‘ಎಕಲವ್ಯ’ (2007) ಸಿನಿಮಾ ನಟನೆಗೆ ಈ ಕಾರು ಉಡುಗೊರೆ ಆಗಿ ಸಿಕ್ಕಿತ್ತು. ಇದರ ಬೆಲೆ 5 ಕೋಟಿ ರೂಪಾಯಿ ಆಗಿತ್ತು.
ಪ್ರಭಾಸ್
‘ಬಾಹುಬಲಿ’ ಮೂಲಕ ಭರ್ಜರಿ ಗೆಲುವು ಕಂಡವರು ಪ್ರಭಾಸ್. ‘ಬಾಹುಬಲಿ 2’ ಬಳಿಕ ಅವರಿಗೆ ಗೆಲುವು ಸಿಕ್ಕಿಲ್ಲ. ‘ಬಾಹುಬಲಿ’ ಶೂಟಿಂಗ್ ವೇಳೆ ಪ್ರಭಾಸ್ ಅವರಿಗೆ 1-2 ಕೋಟಿ ಮೌಲ್ಯದ ಜಿಮ್ ಐಟಮ್ ಗಿಫ್ಟ್ ಆಗಿ ಸಿಕ್ಕಿತ್ತು. ಇದನ್ನು ಅವರು ಮನೆಯಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಂಜಯ್ ದತ್ಗೆ ಇತ್ತು ಎನ್ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..
ಅಜಯ್ ದೇವಗನ್
ಅಜಯ್ ದೇವಗನ್ ಅವರು ‘ಶಿವಾಯ್’ ಸಿನಿಮಾದಲ್ಲಿ ನಟಿಸಿದ್ದರು. ಅಬಿಗೈಲ್ ಅವರು ಅಜಯ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದರು. ಅವರಿಗೆ 20,000 ರೂಪಾಯಿ ಮೌಲ್ಯದ ಟಾಯ್ಸ್ ಉಡುಗೊರೆ ಆಗಿ ನೀಡಿದ್ದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Sat, 25 November 23