‘ಡಾನ್ 3’ ಚಿತ್ರಕ್ಕೆ 13 ಕೋಟಿ ರೂ. ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಸಿನಿಮಾಗೆ ಅವರು ಶೇಕಡ 50ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈ ನಟಿಗೆ 13 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ರಣವೀರ್ ಸಿಂಗ್ ಅವರು ಜೋಡಿಯಾಗಿ ನಟಿಸಲಿದ್ದಾರೆ.
ನಟಿ ಕಿಯಾರಾ ಅಡ್ವಾಣಿ (Kiara Advani) ಅವರಿಗೆ ಬಾಲಿವುಡ್ನಲ್ಲಿ ಬಹಳ ಬೇಡಿಕೆ ಇದೆ. ಮದುವೆ ಆದ ಬಳಿಕವೂ ಅವರ ಬೇಡಿಕೆ ಕಡಿಮೆ ಆಗಿಲ್ಲ. ಇನ್ನು, ಅವರ ಸಂಭಾವನೆಯಂತೂ (Kiara Advani Remuneration) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಅವರು ಬರೋಬ್ಬರಿ 13 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿ ಆಗಿದೆ. ‘ಡಾನ್ 3’ (Don 3) ಸಿನಿಮಾಗೆ ಕಿಯಾರಾ ಅಡ್ವಾಣಿ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅಭಿನಯಿಸಲು ಅವರು ಇಷ್ಟೊಂದು ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದು ಫರ್ಹಾನ್ ಅಖ್ತರ್ ನಿರ್ದೇಶನ ಮಾಡುತ್ತಿರುವ ಸಿನಿಮಾ. ರಣವೀರ್ ಸಿಂಗ್ ಅವರು ಹೀರೋ ಆಗಿ ನಟಿಸಲಿದ್ದಾರೆ.
‘ಡಾನ್ 3’ ಸಿನಿಮಾದ ನಾಯಕಿಯ ಆಯ್ಕೆಯಲ್ಲಿ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ. ಕೃತಿ ಸನೋನ್ ಹಾಗೂ ಕಿಯಾರಾ ಅಡ್ವಾಣಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎಂಬ ಸಂದರ್ಭ ನಿರ್ಮಾಣ ಆಯಿತು. ಆಗ ರಣವೀರ್ ಸಿಂಗ್ ಅವರು ಕಿಯಾರಾ ಅಡ್ವಾಣಿ ಪರವಾಗಿ ಬ್ಯಾಟ್ ಬೀಸಿದರು. ಯಾಕೆಂದರೆ, ಇಬ್ಬರ ನಡುವೆ ಉತ್ತಮವಾದ ಸ್ನೇಹ ಇದೆ. ಹಾಗಾಗಿ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬರಲಿದೆ ಎಂಬ ಕಾರಣದಿಂದ ಅವರು ಕಿಯಾರಾ ಹೆಸರನ್ನು ಸೂಚಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಕಿಯಾರಾ ಮುಡಿಗೆ ಮತ್ತೊಂದು ವಿಶೇಷ ಗರಿ
ಕಿಯಾರಾ ಅಡ್ವಾಣಿ ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ. ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ‘ಕಬೀರ್ ಸಿಂಗ್’, ‘ಶೇರ್ಷಾ’, ‘ಭೂಲ್ಭುಲಯ್ಯ 2’ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದ್ದರಿಂದ ಅವರಿಗೆ ಭರ್ಜರಿ ಬೇಡಿಕೆ ಇದೆ. ಇದೇ ಮೊದಲ ಬಾರಿಗೆ ಅವರು 13 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಹಾಗಾಗಿ ಅವರ ಪಾಲಿಗೆ ‘ಡಾನ್ 3’ ಸಿನಿಮಾ ತುಂಬ ಸ್ಪೆಷಲ್ ಎನಿಸಿಕೊಳ್ಳಲಿದೆ. ‘ವಾರ್ 2’ ಸಿನಿಮಾಗೂ ಕಿಯಾರಾ ಅಡ್ವಾನಿ ನಾಯಕಿ. ಆದರೆ ಆ ಸಿನಿಮಾಗೆ ಅವರು ಪಡೆದಿದ್ದು ಅಂದಾಜು 6 ಕೋಟಿ ರೂಪಾಯಿ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದರೆ, ‘ಡಾನ್ 3’ ಚಿತ್ರದಲ್ಲಿ ಅವರಿಗೆ ಶೇಕಡ 50ರಷ್ಟು ಹೆಚ್ಚಿನ ಸಂಭಾವನೆ ಸಿಕ್ಕಂತಾಗಿದೆ.
ಇದನ್ನೂ ಓದಿ: ಸಖತ್ ಬೋಲ್ಡ್ ಲುಕ್ನಲ್ಲಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ
ಈ ಮೊದಲು ಡಾನ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ನಟಿಸಿದ್ದರು. ಈಗ ಆ ಪಾತ್ರಕ್ಕೆ ರಣವೀರ್ ಸಿಂಗ್ ಬಣ್ಣ ಹಚ್ಚುತ್ತಿದ್ದಾರೆ. ಈ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಕೆಲವರು ಟ್ರೋಲ್ ಮಾಡಿದ್ದರು. ಅದಕ್ಕೆ ‘ಕಾಫಿ ವಿತ್ ಕರಣ್’ ಶೋನಲ್ಲಿ ರಣವೀರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದರು. ‘ನನಗೂ ಒಂದು ಅವಕಾಶ ಕೊಡಿ. 12-13 ವರ್ಷದಿಂದ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ನನಗೆ ಒಂದು ಅವಕಾಶ ಬೇಕು’ ಎಂದು ಅವರು ಹೇಳಿದ್ದರು. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. 2025ರಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.