ಐಶ್ವರ್ಯಾ ರೈ ಹಾಡಿನ ಡ್ಯಾನ್ಸ್ ಕಾಪಿ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಕೃತಿ ಸನೋನ್
ನಟಿ ಕೃತಿ ಸನೋನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈ ಹಿಂದೆ ಐಶ್ವರ್ಯಾ ರೈ ಅವರು ಮಾಡಿದ್ದ ಡ್ಯಾನ್ಸ್ ಸ್ಟೆಪ್ಗಳನ್ನೇ ಈಗ ಕೃತಿ ಸನೋನ್ ಅವರು ಕಾಪಿ ಮಾಡಿದ್ದಾರೆ. ಅದಕ್ಕಾಗಿ ಐಶ್ವರ್ಯಾ ರೈ ಅಭಿಮಾನಿಗಳು ಕೃತಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕೃತಿ ಇನ್ನಷ್ಟೇ ಉತ್ತರ ನೀಡಬೇಕಿದೆ.
ಬಾಲಿವುಡ್ ಬೆಡಗಿ ಕೃತಿ ಸನೋನ್ ಅವರು ಅತ್ಯುತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರ ಪ್ರಶಸ್ತಿ ಪಡೆದಿರುವ ಅವರ ಪ್ರತಿಭೆ ಬಗ್ಗೆ ಯಾರಿಗೂ ತಕರಾರು ಇಲ್ಲ. ಆದರೆ ಈಗ ಅವರು ಹೊಸದೊಂದು ಹಾಡಿನ ಕಾರಣದಿಂದ ಟ್ರೋಲ್ ಆಗುತ್ತಿದ್ದಾರೆ. ‘ದೋ ಪತ್ತಿ’ ಸಿನಿಮಾದ ‘ಅಕಿಯಾ ದೆ ಕೋಲ್..’ ಹಾಡಿನಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ಹಾಡಿನ ಡ್ಯಾನ್ಸ್ ಸ್ಟೆಪ್ಸ್ ನೋಡಿದ ಎಲ್ಲರಿಗೂ ಐಶ್ವರ್ಯಾ ರೈ ಬಚ್ಚನ್ ನೆನಪಾಗಿದೆ. ಹೌದು, ಈ ಹಾಡಿನಲ್ಲಿ ಕೃತಿ ಸನೋನ್ ಅವರು ಡ್ಯಾನ್ಸ್ ಸ್ಟೆಪ್ ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ.
‘ದೋ ಪತ್ತಿ’ ಸಿನಿಮಾದಲ್ಲಿ ಕೃತಿ ಸನೋನ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ, ಇದರಲ್ಲಿ ಅವರಿಗೆ ದ್ವಿಪಾತ್ರವಿದೆ. ಅನುಭವಿ ನಟಿ ಕಾಜೋಲ್ ಅವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ಅಕಿಯಾ ದೆ ಕೋಲ್..’ ಹಾಡು ರಿಲೀಸ್ ಆಯಿತು. ಇದನ್ನು ನೋಡಿದರೆ ‘ಧೂಮ್ 2’ ಸಿನಿಮಾದ ‘ಕ್ರೇಜಿ ಕಿಯಾರೆ..’ ಹಾಡಿನ ಡ್ಯಾನ್ಸ್ಗೆ ಸಾಮ್ಯತೆ ಕಾಣಿಸುತ್ತಿದೆ.
View this post on Instagram
2006ರಲ್ಲಿ ತೆರೆಕಂಡ ‘ಧೂಮ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ‘ಕ್ರೇಜಿ ಕಿಯಾರೆ..’ ಹಾಡಿನಲ್ಲಿ ಮನಮೋಹಕವಾಗಿ ಡ್ಯಾನ್ಸ್ ಮಾಡಿದ್ದರು. ಇಂದಿಗೂ ಐಶ್ವರ್ಯಾ ರೈ ಅವರ ಅಭಿಮಾನಿಗಳಿಗೆ ಆ ಹಾಡು ಫೇವರಿಟ್ ಆಗಿ ಉಳಿದುಕೊಂಡಿದೆ. ಆದರೆ ಆ ಹಾಡಿನ ಡ್ಯಾನ್ಸ್ ಸ್ಟೆಪ್ಗಳನ್ನು ಈಗ ‘ಅಕಿಯಾ ದೆ ಕೋಲ್..’ ಸಾಂಗ್ನಲ್ಲಿ ಕೃತಿ ಸನೋನ್ ಅವರು ಕಾಪಿ ಮಾಡಿದ್ದಕ್ಕಾಗಿ ಟ್ರೋಲ್ಗೆ ಆಹಾರ ಆಗಿದ್ದಾರೆ.
ಇದನ್ನೂ ಓದಿ: ಎಲ್ಲರ ಎದುರು ಅಭಿಷೇಕ್ ಜತೆ ಐಶ್ವರ್ಯಾ ರೈ ಜಗಳ; ವಿಡಿಯೋದಿಂದ ಹೆಚ್ಚಿತು ಡಿವೋರ್ಸ್ ಗುಮಾನಿ
‘ಅಕಿಯಾ ದೆ ಕೋಲ್..’ ಹಾಡಿಗೆ ವಿಜಯ್ ಗಂಗೂಲಿ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ದೋ ಪತ್ತಿ’ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ. ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಈ ಸಿನಿಮಾ ಅಕ್ಟೋಬರ್ 25ರಂದು ರಿಲೀಸ್ ಆಗಲಿದೆ. ಕೃತಿ ಸನೋನ್ ಅವರು ಮುಖ್ಯ ಭೂಮಿಕೆ ನಿಭಾಯಿಸುವುದರ ಜೊತೆ ಈ ಸಿನಿಮಾಗೆ ಸಹ-ನಿರ್ಮಾಪಕಿ ಆಗಿ ಬಂಡವಾಳ ಕೂಡ ಹೂಡಿದ್ದಾರೆ. ಕಿರುತೆರೆ ನಟ ಶಾಹೀರ್ ಶೇಖ್ ಅವರು ಈ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ. ಕೃತಿ ಸನೋನ್ಗೆ ಜೋಡಿಯಾಗಿ ಅವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.