ಎಲ್ಲರ ಎದುರು ಅಭಿಷೇಕ್ ಜತೆ ಐಶ್ವರ್ಯಾ ರೈ ಜಗಳ; ವಿಡಿಯೋದಿಂದ ಹೆಚ್ಚಿತು ಡಿವೋರ್ಸ್ ಗುಮಾನಿ
ಜನ ಜಂಗುಳಿಯ ನಡುವೆಯೇ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಜಗಳ ಮಾಡಿಕೊಂಡರು. ಪಕ್ಕದಲ್ಲೇ ಇದ್ದ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರಿಗೂ ಇರಿಸುಮುರಿಸು ಆಯಿತು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಒಂದಷ್ಟು ದಿನಗಳಿಂದ ಕೇಳಿಬರುತ್ತಿರುವ ವಿಚ್ಛೇದನದ ಮಾತಿಗೆ ಈ ವಿಡಿಯೋದಿಂದ ಪುಷ್ಟಿ ಸಿಕ್ಕಂತೆ ಆಗಿದೆ.
ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಗುಮಾನಿ ಕಾಡುತ್ತಿದೆ. ಪತಿ ಅಭಿಷೇಕ್ ಬಚ್ಚನ್ಗೆ ಅವರು ವಿಚ್ಛೇದನ ನೀಡುತ್ತಾರೆ ಎಂದು ಒಂದಷ್ಟು ದಿನಗಳಿಂದ ಗಾಸಿಪ್ ಕೇಳಿಬರುತ್ತಿದೆ. ಈ ಬಗ್ಗೆ ಬಚ್ಚನ್ ಕುಟುಂಬದವರು ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ. ಸ್ಪಷ್ಟನೆ ನೀಡುವ ಗೋಜಿಗೂ ಅವರು ಕೈ ಹಾಕಿಲ್ಲ. ಈ ನಡುವ ಒಂದು ಹಳೇ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಮಾತಿನ ಚಕಮಕಿ ನಡೆಸಿದ ದೃಶ್ಯ ಸೆರೆಯಾಗಿದೆ.
ಪ್ರೋ ಕಬಡ್ಡಿ ಪಂದ್ಯ ನಡೆಯುವಾಗ ಐಶ್ವರ್ಯಾ ರೈ ಬಚ್ಚನ್ ಅವರು ಫ್ಯಾಮಿಲಿ ಸಮೇತರಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಅವರ ಜೊತೆ ಪತಿ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯಾ ಬಚ್ಚನ್, ಸೊಸೆ ನವ್ಯಾ ನವೇಲಿ ನಂದಾ ಮುಂತಾದವರು ಇದ್ದರು. ಈ ವೇಳೆ ಯಾವುದೋ ವಿಷಯಕ್ಕೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಜಗಳ ಮಾಡಿಕೊಂಡಿದ್ದಾರೆ. ಡಿವೋರ್ಸ್ ಬಗ್ಗೆ ಸುದ್ದಿ ಹಬ್ಬಿದ ಬಳಿಕ ಈ ವಿಡಿಯೋಗೆ ಮರುಜೀವ ಬಂದಿದೆ.
ಅಭಿಷೇಕ್ ಬಚ್ಚನ್ ಜೊತೆ ಗರಂ ಆಗಿ ಮಾತನಾಡಿದ ಬಳಿಕ ಐಶ್ವರ್ಯಾ ರೈ ಅವರು ಮುಖ ತಿರುಗಿಸಿಕೊಂಡರು. ಬಳಿಕ ನವ್ಯಾ ನವೇಲಿ ನಂದಾ ಕೂಡ ಏನನ್ನೋ ಹೇಳಲು ಪ್ರಯತ್ನಿಸಿ ಸುಮ್ಮನಾದರು. ಐಶ್ವರ್ಯಾ ಅವರ ವರ್ತನೆ ಕಂಡು ನವ್ಯಾಗೂ ಸರಿ ಎನಿಸಿಲ್ಲ. ಅವರ ನಡುವೆ ನಡೆದಿರಬಹುದಾದ ಸಂಭಾಷಣೆ ಏನು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಹಾಗಿದ್ದರೂ ಕೂಡ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು 2007ರಲ್ಲಿ ಮದುವೆ ಆದರು. ಅವರು ದಾಂಪತ್ಯ ಜೀವನ ಆರಂಭಿಸಿ 17 ವರ್ಷ ಆಗಿದೆ. ಇಷ್ಟು ವರ್ಷ ಇಲ್ಲದ ಮನಸ್ತಾಪ ಈಗ ಯಾಕೆ ಬಂದಿದೆ ಎಂಬುದು ಸದ್ಯಕ್ಕಂತೂ ಬಹಿರಂಗ ಆಗಿಲ್ಲ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ವಿದೇಶ ಪ್ರವಾಸ ಮಾಡಿದರು. ಪತ್ನಿಯನ್ನು ಬಿಟ್ಟು ಅವರು ಸುತ್ತಾಡಿದ್ದು ಕೂಡ ಅನುಮಾನ ಹೆಚ್ಚಲು ಕಾರಣ ಆಗಿದೆ.
ಇದನ್ನೂ ಓದಿ: ‘ನಡತೆ ಸರಿ ಇಲ್ಲ’: ಮುಖಕ್ಕೆ ಹೊಡೆದಂತೆ ಹೇಳಿದ್ದಕ್ಕೆ ಐಶ್ವರ್ಯಾ ಕಣ್ಣೀರ ಧಾರೆ
ಮದುವೆ ಬಳಿಕ ಐಶ್ವರ್ಯಾ ರೈ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರಿಸಲಿಲ್ಲ. ಸದ್ಯ ಅವರಿಗೆ 50 ವರ್ಷ ವಯಸ್ಸು. ಈಗಲೂ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೂ ಅವರು ಖ್ಯಾತಿ ಗಳಿಸಿದ್ದಾರೆ. ವಿಚ್ಛೇದನ ವದಂತಿ ಬಗ್ಗೆ ಅವರು ಮೌನ ಮುರಿಯಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.