ನಟಿ ಮಲ್ಲಿಕಾ ಶೆರಾವತ್ (Mallika Sherawat) ಅವರು ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದ ನಟಿ. ಅವರನ್ನು ಆ ರೀತಿಯ ಪಾತ್ರಗಳೇ ಹುಡುಕಿ ಬಂದವು. ಒಂದು ಹಂತದ ನಂತರದಲ್ಲಿ ಅವರು ನಟನೆಯಿಂದ (Acting) ದೂರ ಉಳಿದರು. ಇದಕ್ಕೆ ಕಾರಣವೇನು ಎಂಬುದನ್ನು ಅವರು ಸಾಕಷ್ಟು ಬಾರಿ ವಿವರಿಸಿದ್ದಾರೆ. ಈಗ ‘RK/RKay’ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈಗ ಅವರು ಮಾಧ್ಯಮದ ಜತೆ ಮಾತನಾಡುತ್ತಾ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಮಲ್ಲಿಕಾ ಶೆರಾವತ್ ಅವರ ದೇಹದ ಬಗ್ಗೆ ಹಾಗೂ ಗ್ಲಾಮರ್ ಬಗ್ಗೆ ಮಾತನಾಡಲಾಯಿತೇ ಹೊರತು ಅವರ ನಟನೆ ಬಗ್ಗೆ ಯಾರೊಬ್ಬರೂ ಮಾತನಾಡಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಈಗ ಅವರು ತಮ್ಮ ‘ಮರ್ಡರ್’ ಚಿತ್ರವನ್ನು ದೀಪಿಕಾ ನಟನೆಯ ‘ಗೆಹರಾಯಿಯಾ’ ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದಾರೆ.
‘ಈ ಮೊದಲು ನಟಿಯರಲ್ಲಿ ಎರಡೇ ಕೆಟಗರಿ ಇರುತ್ತಿತ್ತು. ಹೀರೋಯಿನ್ಗಳು ಸತಿ ಸಾವಿತ್ರಿ ರೀತಿ ಇರುತ್ತಿದ್ದರು ಅಥವಾ ತುಂಬಾ ಬೋಲ್ಡ್ ಆಗಿ ನಟಿಸುತ್ತಿದ್ದರು. ಆದರೆ, ಈಗ ಚಿತ್ರರಂಗದಲ್ಲಿ ಬದಲಾವಣೆ ಆಗಿದೆ. ಮಹಿಳೆಯರನ್ನು ಮನುಷ್ಯರ ರೀತಿಯಲ್ಲಿ ತೋರಿಸಲಾಗುತ್ತಿದೆ. ಈಗಿನ ಹೀರೋಯಿನ್ಗಳು ಹೆಚ್ಚು ಕಾನ್ಫಿಡೆಂಟ್ ಆಗಿ ಕಾಣಿಸುತ್ತಿದ್ದಾರೆ’ ಎಂದಿದ್ದಾರೆ ಅವರು.
‘ನಾನು ಮರ್ಡರ್ ಸಿನಿಮಾ ಮಾಡಿದಾಗ ಅಪಸ್ವರಗಳು ಕೇಳಿ ಬಂದವು. ಕಿಸ್ ಮತ್ತು ಬಿಕಿನಿ ದೃಶ್ಯಗಳ ಬಗ್ಗೆ ಜನರು ಬಾಯಿಗೆ ಬಂದಂತೆ ಹೇಳಿದರು. ಗೆಹರಾಯಿಯಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ. ಆಗ ಜನರು ತುಂಬಾ ಸಂಕುಚಿತ ಮನಸ್ಥಿತಿ ಹೊಂದಿದ್ದರು. ಆಗ ಜನರು ನನ್ನ ದೇಹದ ಮತ್ತು ಗ್ಲಾಮರ್ ಬಗ್ಗೆ ಮಾತ್ರ ಮಾತನಾಡಿದರು. ನನ್ನ ನಟನೆ ಬಗ್ಗೆ ಯಾರೂ ಮಾತನಾಡಲೇ ಇಲ್ಲ. ನನಗೆ ಒಂದು ವರ್ಗದ ಜನರಿಂದ ಕಿರುಕುಳ ಉಂಟಾಯಿತು’ ಎಂದು ಬೇಸರ ತೋಡಿಕೊಂಡಿದ್ದಾರೆ ಮಲ್ಲಿಕಾ.
ಇದನ್ನೂ ಓದಿ: ‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್ ತೆರೆದಿಟ್ಟ ಕಹಿ ಸತ್ಯ
ಮಲ್ಲಿಕಾ ಅವರು ಸದ್ಯ ‘RK/RKay’ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಆಗಿದ್ದಾರೆ. ಜುಲೈ 22ರಂದು ಈ ಸಿನಿಮಾ ರಿಲೀಸ್ ಆಗಲಿದೆ. ರಜತ್ ಕಪೂರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕುಬ್ರಾ ಸೇಠ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕಂಬ್ಯಾಕ್ ಸಿನಿಮಾ ಎಂಬ ಕಾರಣಕ್ಕೆ ಮಲ್ಲಿಕಾ ಈ ಚಿತ್ರದ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ.