ಸಿನಿಮಾಗಳನ್ನು ಕೇವಲ ಸಿನಿಮಾವಾಗಿ ನೋಡುವ ಕಾಲ ಈಗ ಉಳಿದಿಲ್ಲ. ಅದರಲ್ಲಿ ರಾಜಕೀಯ ಬೆರೆತಿದೆ. ಜಾತಿ-ಧರ್ಮದ ಕಣ್ಣಿನಿಂದ ಎಲ್ಲವನ್ನೂ ನೋಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಇದರಿಂದ ಸಿನಿಮಾ ಮೇಲೆ ಪರಿಣಾಮ ಬೀರುತ್ತದೆ. ವಿವಾದಗಳೂ ಹುಟ್ಟಿಕೊಳ್ಳುತ್ತಿವೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವನ್ನು ಒಂದು ವರ್ಗದ ಜನರು ವಿರೋಧಿಸುತ್ತಿದ್ದಾರೆ. ಈ ಟ್ರೆಂಡ್ ಬಗ್ಗೆ ಮುಂಬೈನ ಹಿರಿಯ ಪ್ರದರ್ಶಕ, ‘ಮರಾಠ ಮಂದಿರ್’ ಚಿತ್ರಮಂದಿರದ ಮಾಲಿಕ ಮನೋಜ್ ದೇಸಾಯಿ (Manoj Desai) ಅವರು ಮಾತನಾಡಿದ್ದಾರೆ. ‘ಬಾಲಿವುಡ್ ಹಂಗಾಮಾ’ ನಡೆಸಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಮನೋಜ್ ದೇಸಾಯಿ ಅವರಿಗೆ ಸಖತ್ ಅನುಭವ ಇದೆ. ಹಲವು ವರ್ಷಗಳಿಂದ ಅವರು ಚಿತ್ರಮಂದಿರ ನಡೆಸುತ್ತಿದ್ದಾರೆ. ಸಿನಿಮಾ ವಿಚಾರದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಇರಬಾರದು ಎಂದು ಅವರು ಹೇಳಿದ್ದಾರೆ. ‘ನನಗೆ ಈ ಭೇದ ಇಲ್ಲ. ಎಲ್ಲರೂ ನನ್ನ ಗ್ರಾಹಕರು. ಅವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡುವ ಹಿಂದೆ ಹುನ್ನಾರ ಇರಬಹುದು. ಆದರೆ ಎಲ್ಲ ಧರ್ಮದವರು ಈ ಸಿನಿಮಾ ನೋಡುತ್ತಾರೆ ಅಂತ ನನಗೆ ಅನಿಸುತ್ತಿದೆ’ ಎಂಬುದು ಮನೋಜ್ ದೇಸಾಯಿ ಅಭಿಪ್ರಾಯ.
ಇದನ್ನೂ ಓದಿ: Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್ ಖಂಡನೆ
‘ಧರ್ಮದ ವಿಚಾರವನ್ನು ಸಿನಿಮಾದಲ್ಲಿ ತರಬಾರದು. ಹಾಗೆ ತಂದಿದ್ದರೆ ‘ಮೊಘಲ್-ಏ-ಆಝಮ್’ ಸಿನಿಮಾ ಇಲ್ಲಿ 17 ವರ್ಷ ಪ್ರದರ್ಶನ ಆಗುತ್ತಿರಲಿಲ್ಲ. ಶಾರುಖ್ ಖಾನ್ ಅವರ ‘ಡಿಡಿಎಲ್ಜೆ’ ಚಿತ್ರ ಕೂಡ 28 ವರ್ಷ ಓಡುತ್ತಿರಲಿಲ್ಲ. ಅದರಲ್ಲಿ ಜಾತಿ ನೋಡಬಾರದು’ ಎಂದಿದ್ದಾರೆ ಮನೋಜ್ ದೇಸಾಯಿ.
ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್ ಖಾನ್
ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಆ ಕುರಿತಾಗಿಯೂ ಮನೋಜ್ ದೇಸಾಯಿ ಮಾತನಾಡಿದ್ದಾರೆ. ‘ಬಾಯ್ಕಾಟ್ ಎಂಬುದು ದೊಡ್ಡ ರಾಜಕೀಯ. ಅದನ್ನು ನಾನು ಒಪ್ಪುವುದಿಲ್ಲ. ಬಾಲಿವುಡ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಲು ಬನ್ನಿ ಅಂತ ಪ್ರೇಕ್ಷಕರಲ್ಲಿ ನಾನು ಮನವಿ ಮಾಡುತ್ತೇನೆ. ಪಠಾಣ್ ರೀತಿಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಬರಬೇಕು. ಆಗ ಬಾಲಿವುಡ್ನ ಚಾರ್ಮ್ ಮರಳಿ ಬರಲಿದೆ’ ಎಂದು ಮನೋಜ್ ದೇಸಾಯಿ ಹೇಳಿದ್ದಾರೆ.
2022ರಲ್ಲಿ ಬಾಲಿವುಡ್ ಸಿನಿಮಾಗಳು ಒಳ್ಳೆಯ ರಿಸಲ್ಟ್ ಪಡೆಯಲಿಲ್ಲ. ಆದರೆ 2023ರಲ್ಲಿ ಹಿಂದಿ ಚಿತ್ರರಂಗಕ್ಕೆ ಉತ್ತಮ ಕಮಾಯಿ ಆಗಲಿದೆ ಎಂದು ಮನೋಜ್ ದೇಸಾಯಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಳ್ಳೆಯ ಗುಣಮಟ್ಟದ ಸಿನಿಮಾಗಳು ಬರಬೇಕು ಎಂದು ಅವರು ಆಶಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Mon, 16 January 23