ಬಾಲಿವುಡ್​ನ ‘ವಾರ್​ 2’ ಸಿನಿಮಾದಿಂದ ಧ್ರುವ ಸರ್ಜಾಗೆ ಬಂತಾ ಆಫರ್​? ಸಖತ್​ ನ್ಯೂಸ್​

|

Updated on: May 28, 2024 | 5:23 PM

‘ವಾರ್​ 2’ ಸಿನಿಮಾಗೆ ಅಯಾನ್​ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೃತಿಕ್​ ರೋಷನ್​, ಜೂನಿಯರ್​ ಎನ್​ಟಿಆರ್​ ಅವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡದಿಂದ ಧ್ರುವ ಸರ್ಜಾಗೆ ಆಫರ್​ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದವರು ಬಂದು ಧ್ರುವ ಸರ್ಜಾಗೆ ಕಥೆ ಹೇಳಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಬಾಲಿವುಡ್​ನ ‘ವಾರ್​ 2’ ಸಿನಿಮಾದಿಂದ ಧ್ರುವ ಸರ್ಜಾಗೆ ಬಂತಾ ಆಫರ್​? ಸಖತ್​ ನ್ಯೂಸ್​
ಧ್ರುವ ಸರ್ಜಾ, ಹೃತಿಕ್​ ರೋಷನ್​, ಜೂನಿಯರ್​ ಎನ್​ಟಿಆರ್​
Follow us on

ಈಗಂತೂ ಪ್ಯಾನ್​ ಇಂಡಿಯಾ ಸಿನಿಮಾಗಳೇ ಅಬ್ಬರಿಸುತ್ತಿವೆ. ಎಲ್ಲ ಹೀರೋಗಳು ಕೂಡ ತಮ್ಮ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿ ಅಂತ ಬಯಸುತ್ತಾರೆ. ಆ ರೀತಿ ಆಗಬೇಕು ಎಂದರೆ ಪ್ಯಾನ್​ ಇಂಡಿಯಾ ಮಟ್ಟದ ಕಲಾವಿದರೇ ಆ ಸಿನಿಮಾದಲ್ಲಿ ಇರಬೇಕು. ಹಾಗಾಗಿ ಪಾತ್ರವರ್ಗದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. ‘ವಾರ್​ 2’ ಸಿನಿಮಾ (War 2 Movie) ಕೂಡ ಅದೇ ಪ್ಲ್ಯಾನ್​ ಮಾಡಿದಂತಿದೆ. ಈ ಚಿತ್ರತಂಡದಿಂದ ಕನ್ನಡದ ನಟ ಧ್ರುವ ಸರ್ಜಾ ಅವರಿಗೆ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಇದರಿಂದ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ವಾರ್​ 2’ ಸಿನಿಮಾದ ಮೇಲೆ ಸಖತ್​ ನಿರೀಕ್ಷೆ ಇದೆ. ಹೃತಿಕ್​ ರೋಷನ್​, ಜೂನಿಯರ್​ ಎನ್​ಟಿಆರ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಜಾನ್​ ಅಬ್ರಾಹಂ ಮತ್ತು ಕಿಯಾರಾ ಅಡ್ವಾಣಿ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಧ್ರುವ ಸರ್ಜಾ ಸಹ ನಟಿಸುವ ಸಾಧ್ಯತೆ ಇದೆ. ಆ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಧ್ರುವ ಸರ್ಜಾ ಅವರಿಗೆ ಮಾಸ್​ ಇಮೇಜ್​ ಇದೆ. ಕಟ್ಟುಮಸ್ತಾದ ದೇಹ ಹೊಂದಿರುವ ಅವರು ಆ್ಯಕ್ಷನ್ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ‘ವಾರ್ 2’ ಸಿನಿಮಾದಲ್ಲಿ ಭರ್ಜರಿ ಸಾಹಸ ಸನ್ನಿವೇಶಗಳು ಇರಲಿವೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ ಅವರ ಸಹೋದರನ ಪಾತ್ರದಲ್ಲಿ ನಟಿಸಲು ಧ್ರುವ ಸರ್ಜಾಗೆ ಆಫರ್​ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ‘ಚಿತ್ರರಂಗದಲ್ಲಿ ಸ್ಟಾರ್​ ಯಾರೂ ಇಲ್ಲ’: ನೇರವಾಗಿ ಹೇಳಿದ ನಟ ಧ್ರುವ ಸರ್ಜಾ

ಒಂದು ವೇಳೆ ‘ವಾರ್​ 2’ ಸಿನಿಮಾದ ಆಫರ್​ ಅನ್ನು ಧ್ರುವ ಸರ್ಜಾ ಒಪ್ಪಿಕೊಂಡರೆ ಇದು ಅವರ ಮೊದಲ ಬಾಲಿವುಡ್​ ಸಿನಿಮಾ ಆಗಲಿದೆ. ಈ ಸಿನಿಮಾಗೆ ಅಯಾನ್​ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಅವರು ಧ್ರುವ ಸರ್ಜಾಗೆ ಕಥೆ ಹೇಳುವುದು ಬಾಕಿ ಇದೆ. ಎಲ್ಲವೂ ಒಪ್ಪಿಗೆಯಾದರೆ ಧ್ರುವ ಸರ್ಜಾ ಅವರು ಗ್ರೀನ್​ ಸಿಗ್ನಲ್​ ನೀಡಲಿದ್ದಾರೆ. ಆ ಬಗ್ಗೆ ಚಿತ್ರತಂಡದಿಂದ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಕೆಡಿ’ ಮತ್ತು ‘ಮಾರ್ಟಿನ್​’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇವು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಅಕ್ಟೋಬರ್​ 11ರಂದು ‘ಮಾರ್ಟಿನ್​’ ಬಿಡುಗಡೆ ಆಗಲಿದೆ. ಈ ವರ್ಷ ಡಿಸೆಂಬರ್​ನಲ್ಲಿ ‘ಕೆಡಿ’ ಸಿನಿಮಾ ತೆರೆಕಾಣಲಿದೆ. ಈ ಎರಡೂ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.